ಬದಲಾದ ಕಾಲಘಟ್ಟದಲ್ಲಿ ಪತ್ರಕರ್ತರು ತಂತ್ರಜ್ಞಾನಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಬದಲಾದ ಕಾಲಘಟ್ಟದಲ್ಲಿ ಪತ್ರಕರ್ತರು ತಂತ್ರಜ್ಞಾನಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹಾಗೂ ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಭಿಪ್ರಾಯಪಟ್ಟರು.ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಗೋಲ್ಡನ್ ಬೀನ್ ಹೋಂಸ್ಟೇಯಲ್ಲಿ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.ಮಗ್ಗುಲ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವ್ಯವಸ್ಥಾಪಕಿ ಪೂಜಾ ಸಜೇಶ್ ಮಾತಾನಾಡಿ, ಪತ್ರಕರ್ತರೊಂದಿಗೆ ಕಳೆದ ಹಲವಾರು ವರ್ಷಗಳಿಂದ ಕುಟುಂಬ ಸದಸ್ಯರ ಭಾವನೆ ಇದೆ. ಕಳೆದ ಹಲವು ವರ್ಷಗಳಿಂದ ಪತ್ರಕರ್ತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಪತ್ರಕರ್ತ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದ್ದು, ಮಕ್ಕಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಮತ್ತಷ್ಟು ಸಾಧನೆ‌ ಮಾಡಲು ಉತ್ತಮ ವೇದಿಕೆಯಾಗಿದೆ ಎಂದರು.ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅನು‌ ಕಾರ್ಯಪ್ಪ ಮಾತನಾಡಿ, ಪತ್ರಕರ್ತನಿಗೆ ಪ್ರಶಸ್ತಿ ಪ್ರೇರಕ ಶಕ್ತಿಯಾಗಿದೆ. ಒಬ್ಬ ಪತ್ರಕರ್ತನಿಗೆ ಮೊದಲ ಬಾರಿಗೆ ಪ್ರಶಸ್ತಿ ದೊರೆತಾಗ ಆಗುವಂತಹ ಸಂತೋಷವನ್ನು ವರ್ಣಿಸಲು ಪದಗಳೇ ಸಾಲದು. ಅದರೊಂದಿಗೆ ‌ಪತ್ರಕರ್ತರ ಜವಾಬ್ದಾರಿ ಕೂಡ ಹೆಚ್ಚಲಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಅವರು‌, ತಾಲೂಕು ಸಂಘದಿಂದ ಉತ್ತಮ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ. ಈಗಾಗಲೇ ‌ಐದು ದತ್ತಿ ನಿಧಿ ಪ್ರಶಸ್ತಿಗಳನ್ನು ಸ್ಥಾಪನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದತ್ತಿ‌ ನಿಧಿಗಳನ್ನು ಸ್ಥಾಪನೆ ಮಾಡಲು ಉದ್ದೇಶಿಸಿದ್ದೇವೆ. ಮುಂದಿನ‌ ತಿಂಗಳಿನಿಂದ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಿರಂತರವಾಗಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಕ್ಷೇಮಾಭಿವೃದ್ಧಿ ನಿಧಿ ಹಸ್ತಾಂತರ:ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರ ಸಂಘದಿಂದ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ 83 ಸಾವಿರ ರು. ಚೆಕ್ ಅನ್ನು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ತಾಲೂಕು ಅಧ್ಯಕ್ಷರಿಗೆ ಹಸ್ತಾಂತರಿಸಿದರು.ವಾರ್ಷಿಕ ಪ್ರಶಸ್ತಿ;

ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಇಸ್ಮಾಯಿಲ್ ಕಂಡಕರೆ, ಪಿ.ವಿ. ಅಂಥೋಣಿ, ಕಿಶೋರ್ ಕುಮಾರ್ ಶೆಟ್ಟಿ, ರವಿ ಕುಮಾರ್, ವಾಸು ಹಾಗೂ ಸುಬ್ರಮಣಿ ಅವರು ಪಡೆದುಕೊಂಡರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ 2024ನೇ ಸಾಲಿನ ಅತ್ಯುತ್ತಮ ಗ್ರಾಮಾಂತರ ವರದಿ ಪ್ರಶಸ್ತಿ ಪಡೆದ ಇಸ್ಮಾಯಿಲ್ ಕಂಡಕರೆ ಅವರನ್ನು ಗೌರವಿಸಲಾಯಿತು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಪಳೆಯಂಡ ಪಾರ್ಥ ಚಿನ್ನಪ್ಪ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ವನಿತಾ ಚಂದ್ರಮೋಹನ್ ಇದ್ದರು.ಸಂಘದ ಕಾರ್ಯದರ್ಶಿ ಡಾ. ಹೇಮಂತ್ ಮಾಸ್ಟರ್ ನಿರೂಪಿಸಿ, ನಿರ್ದೇಶಕರಾದ ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಎ.ಎಸ್. ಮುಸ್ತಫಾ ವಂದಿಸಿದರು.ಮಹಾಸಭೆ:

ವಿರಾಜಪೇಟೆ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಕೆ.ಕೆ. ರೆಜಿತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಎ.ಎಸ್. ಮುಸ್ತಫಾ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಡಾ. ಹೇಮಂತ್ ಕುಮಾರ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್ ಅವರು ವೀಕ್ಷಕರಾಗಿ ಆಗಮಿಸಿ, ಮಹಾಸಭೆಯನ್ನು ನಡೆಸಿಕೊಟ್ಟರು.