ಕನ್ನಡಪ್ರಭ ವಾರ್ತೆ ಮೈಸೂರು
- ಹೌದು ಇದು ಇತ್ತೀಚೆಗೆ ನಡೆದಿದ್ದು ಮಂಚೇಗೌಡನ ಕೊಪ್ಪಲಿನ ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ಕಲೆಮನೆ ಸಭಾಂಗಣದಲ್ಲಿ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಆರು ನೃತ್ಯ ಗುರುಗಳು ಮತ್ತು ಅವರ ಶಿಷ್ಯರ ತಂಡದೊಂದಿಗೆ ಮತ್ತು ಹೆಸರಾಂತ ನೃತ್ಯ ಗುರುಗಳ ಸಮ್ಮುಖದಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ವೈಭವೊಪೇತವಾಗಿ ಈ ಕಾರ್ಯಕ್ರಮ ನಡೆಯಿತು.
ವಿದುಷಿಯರಾದ ಶೀಲಪ್ರಭಾ, ವಿದ್ಯಾರಾವ್ ಶಶಿಧರ್, ಆಶಾ ಹೇಮರಾಜ್ ಅತಿಥಿಗಳಾಗಿದ್ದರು.ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿಗಳು ಶ್ರೀ ತ್ಯಾಗರಾಜಸ್ವಾಮಿ ವಿರಚಿತ ಪ್ರಹ್ಲಾದ ಭಕ್ತ ವಿಜಯ ಗೇಯ ನಾಟಕದ ಸೌರಾಷ್ಟ್ರ ರಾಗ ಆದಿತಾಳದ ಶ್ರೀ ಗಣಪತಿನಿ ಕೃತಿಯನ್ನು ಆಯ್ಕೆ ಮಾಡಿಕೊಂಡು ಸುಂದರವಾದ ನೃತ್ಯ ಸಂಯೋಜನೆಯಿಂದ ರೂಪುಗೊಂಡ ಕೃತಿಗೆ ಮನೋಜ್ಞವಾದ ಭಾವಾಭಿನಯದಿಂದ ನರ್ತಿಸಿದರು.
ಅವರ ಶಿಷ್ಯರೊಡನೆ ಪ್ರದರ್ಶಿಸಿದ ದೇವರ ನಾಮವು ರಾಮನ ಹಲವು ಕಥೆಗಳನ್ನು ಸಂಚಾರಿಗಳೊಂದಿಗೆ ಸೂಕ್ತವಾದ ಭಾವಭಿನಯಗಳೊಂದಿಗೆ ನರ್ತಿಸಿ ತಿಲ್ಲಾನ್ನದೊಂದಿಗೆ ತಮ್ಮ ನೃತ್ಯ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು, ತಾನು ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಲ್ಲ ಉತ್ತಮ ಶಿಕ್ಷಕಿಯೂ ಕೂಡ ಎಂಬುದನ್ನು ಸಾಕ್ಷಿ ಸಮೇತ ಶಿಷ್ಯರಿಂದ ನರ್ತನ ಕಾರ್ಯಕ್ರಮವನ್ನು ನಡೆಸಿಕೊಟ್ಟು ರುಜುವಾತು ಪಡಿಸಿದರು.
ಕೇರಳ ಮತ್ತು ಮುಂಬೈನಿಂದ ಆಗಮಿಸಿದ್ದ ಡಾ. ಜಾಯ್ ಕೃಷ್ಣನ್. ಗುರು ವಿನೀತ ಅವರು, ಜಾಯ್ ಕೃಷ್ಣನ್ ಅವರು ‘ಕೇರಳ ನಟನಂ’ ಮತ್ತೊಬ್ಬರು ‘ಮೋಹಿನಿ ಆಟಂ’, ಜುಗಲ್ ಬಂದಿ ನರ್ತನವನ್ನು ಸುಪ್ರಸಿದ್ಧ ಕೃತಿಯಾದ ‘ಸ್ವಾತಿ ತಿರುನಾಳ್ ಮಹಾರಾಜ’ರಿಂದ ರಚಿತಗೊಂಡ ರಾಗ ಮಾಲಿಕೆ, ರೂಪಕ ತಾಳದಿಂದ ಕೂಡಿದ ‘ಭಾವಯಾಮಿ ರಘುರಾಮಂ’ ರಾಮಾಯಣ ಕೃತಿಯನ್ನು 30 ನಿಮಿಷಗಳ ಅವಧಿಯಲ್ಲಿ ರಾಮಾಯಣದ ಪ್ರಮುಖ ಸನ್ನಿವೇಶಗಳನ್ನು ಚತುರತೆ, ಕುಶಲತೆ, ಖಚಿತತೆ, ಪಾಂಡಿತ್ಯ, ವಿದ್ವತ್ಪೂರ್ಣವಾದ ಭಾವಾಭಿನಯ ರಸಗಳಿಂದ ಪಾತ್ರಗಳ ಸಂರಕ್ಷಣೆ ಗುರಿಯನ್ನು ಇಟ್ಟುಕೊಂಡು ಎಲ್ಲೂ ಲವ ಲೇಶ ಲೋಪ ಬಾರದ ಹಾಗೆ, ಅತ್ಯಾಕರ್ಷಕವಾದ ಉಡುಗೆ ತೊಡುಗೆಯೊಂದಿಗೆ, ಮನೋಜ್ಞವಾಗಿ ಸಂಪೂರ್ಣ ರಾಮಾಯಣದ ಚಿತ್ರಣವನ್ನು ಕಣ್ಮುಂದೆ ತಂದು ನಿಲ್ಲಿಸಿದರು.
ಬೆಂಗಳೂರಿನ ಡಾ. ಲಕ್ಷ್ಮಿ ರೇಖಾ ಅವರು ತಮ್ಮ ಶಿಷ್ಯರೊಂದಿಗೆ ಆಗಮಿಸಿ ಇಂದಿನ ಕಾರ್ಯಕ್ರಮದಲ್ಲಿ ವಿಶಿಷ್ಟವಾಗಿ ರಚಿತಗೊಂಡ ಅಷ್ಟಲಕ್ಷ್ಮಿಯ ಕುರಿತ ಅಪರೂಪದ ಹಲವು ಕಥಾ ಪ್ರಸಂಗಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವಿನೂತನವಾದ ಕಲ್ಪನೆಯಲ್ಲಿ ಸುಂದರವಾಗಿ ಜತಿ ಸ್ವರ ಅಭಿನಯ ಸಂಚಾರಿಗಳೊಂದಿಗೆ ಸೃಷ್ಟಿಸಿ ಮನೋಜ್ಞವಾಗಿ ಪ್ರಸ್ತುತಪಡಿಸಿದರು.