ಕೂಡ್ಲಿಗಿ: ಮಾಜಿ ಸಚಿವ ಬಿ. ಶ್ರೀರಾಮುಲು ಹಾಗೂ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಅವರ ನಡುವಿನ ಭಿನ್ನಾಭಿಪ್ರಾಯ ಶಮನಗೊಂಡಿದೆ.
ಆದರೆ ಇತ್ತೀಚೆಗೆ ಕೂಡ್ಲಿಗಿಯಲ್ಲಿ ನಡೆದ ಮಂಡಲ ನೂತನ ಅಧ್ಯಕ್ಷ ಬಣವಿಕಲ್ಲು ರಾಜು ಅವರ ಪದಗ್ರಹಣ ಹಾಗೂ ಗ್ರಾಮ ಚಲೋ ಕಾರ್ಯಕ್ರಮದ ನಂತರ ಬಂಗಾರು ಹನುಮಂತು ಮನೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಔಪಚಾರಿಕ ಸಭೆಯಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಮರೆತು ಇಬ್ಬರು ಬಿಗಿದಪ್ಪಿಕೊಂಡು ಹಳೆಯದೆಲ್ಲ ಮರೆತು ಒಂದಾದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ನನ್ನ ಹಾಗೂ ಬಂಗಾರು ಹನುಮಂತು ನಡುವೆ ಕೆಲವರು ಹುಳಿ ಹಿಂಡಿದ್ದರು. ಹೀಗಾಗಿ ನಮ್ಮಿಬ್ಬರ ನಡುವೆ ಕೆಲವು ದಿನಗಳ ಕಾಲ ಭಿನ್ನಾಭಿಪ್ರಾಯಗಳು ಇದ್ದದ್ದು ನಿಜ. ಆದರೆ ಈಗ ವಾಸ್ತವ ಏನೆಂದು ಗೊತ್ತಾಗಿದೆ. ಬರುವ ದಿನಗಳಲ್ಲಿ ಬಂಗಾರು ಹನುಮಂತು ಅವರಿಗೆ ಏನು ನ್ಯಾಯ ದೊರೆಯಬೇಕೋ ಅದನ್ನು ದೊರಕಿಸಿಕೊಡುತ್ತೇನೆ ಎಂದರು.ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ನನಗೆ ಶ್ರೀರಾಮುಲು ಅಣ್ಣನಿದ್ದಂತೆ. ನಿರಂತರವಾಗಿ ನಮ್ಮ ಸ್ನೇಹ, ಬಾಂಧವ್ಯ ಇದ್ದು, ಇತ್ತೀಚೆಗೆ ಕೆಲವು ಸ್ವಹಿತಾಸಕ್ತಿಗಳಿಂದ ವ್ಯತ್ಯಾಸಗಳು ಆಗಿದ್ದವು. ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿ ಎಂದರು.