ಮಂಜುನಾಥ ಕೆ.ಎಂ.
ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಯಾವ ಕ್ಷೇತ್ರದಿಂದ ಕಣಕ್ಕಿಳಿಯಬೇಕು, ಗೆಲುವಿಗೆ ಯಾವ ಕ್ಷೇತ್ರ ಅನುಕೂಲವಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದು, ಕಂಪ್ಲಿ ಕ್ಷೇತ್ರದತ್ತ ದೃಷ್ಟಿ ನೆಟ್ಟಿದ್ದಾರೆ ಎಂಬ ಮಾತುಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ. ಇದೇ ವೇಳೆ ಅವರ ಸೋದರಳಿಯ ಹಾಗೂ ಮಾಜಿ ಶಾಸಕ ಟಿ.ಎಚ್. ಸುರೇಶ್‌ಬಾಬು ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುವ ಆಲೋಚನೆಯಲ್ಲಿದ್ದಾರೆ ಎಂಬ ಚರ್ಚೆಯೂ ನಡೆದಿದೆ.
ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ಶ್ರೀರಾಮುಲು ಅವರು ಹಿಂದೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರು ಕೂಡ್ಲಿಗಿ ಕ್ಷೇತ್ರದ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಆಗಾಗ್ಗೆ ಸಭೆ ನಡೆಸಿದ್ದರು. ಅಲ್ಲದೆ, ಮದುವೆ, ಗೃಹಪ್ರವೇಶ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಖಾಸಗಿ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದರು.ಈ ಬೆಳವಣಿಗೆಗಳಿಂದ ಶ್ರೀರಾಮುಲು ಅವರು ಕೂಡ್ಲಿಗಿಯಿಂದಲೇ ಚುನಾವಣಾ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಮೂಡಿತ್ತು. ಆದರೆ, ಕಳೆದ ಮೂರು ತಿಂಗಳಿನಿಂದ ಅವರು ಕೂಡ್ಲಿಗಿ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದು, ಕಂಪ್ಲಿ ಕ್ಷೇತ್ರದತ್ತ ಅವರ ಗಮನ ಹರಿದಿದೆ ಎನ್ನಲಾಗುತ್ತಿದೆ.
ಸುರೇಶ್ ಬಾಬುಗೆ ಮೊಳಕಾಲ್ಮೂರು
2008ರಲ್ಲಿ ಕಂಪ್ಲಿ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ ಸುರೇಶ್‌ಬಾಬು, ರಾಜ್ಯದ ಅತ್ಯಂತ ಕಿರಿಯ ಶಾಸಕರಾಗಿ ಗಮನ ಸೆಳೆದಿದ್ದರು. 2013ರಲ್ಲಿ ಬಿಎಸ್ಸಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮತ್ತೆ ಗೆಲುವು ಸಾಧಿಸಿದ್ದರು. ಆನಂತರ ನಡೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದರು. ರಾಜಕೀಯವಾಗಿ ಮತ್ತೆ ಪುಟಿದೇಳುವ ಪ್ರಯತ್ನದಲ್ಲಿರುವ ಸುರೇಶ್‌ಬಾಬು ಅವರಿಗೆ ಮೊಳಕಾಲ್ಮೂರು ಕ್ಷೇತ್ರ ಸೂಕ್ತವಾಗಬಹುದು ಎಂಬ ಲೆಕ್ಕಾಚಾರ ನಡೆದಿದೆ ಎನ್ನಲಾಗುತ್ತಿದೆ. ಈ ಕ್ಷೇತ್ರದ ಸಾಮಾಜಿಕ ಹಾಗೂ ರಾಜಕೀಯ ಸಮೀಕರಣಗಳ ಜತೆಗೆ ತಮ್ಮ ಮಾವ ಶ್ರೀರಾಮುಲು ಅವರ ಹಿಂದಿನ ಪ್ರಭಾವವನ್ನೂ ಅವರು ಪರಿಗಣಿಸುತ್ತಿದ್ದಾರೆ ಎಂಬ ಮಾತುಗಳಿವೆ.
ಶ್ರೀರಾಮುಲು ಅವರು ಈ ಹಿಂದೆ ಮೊಳಕಾಲ್ಮುರು ಕ್ಷೇತ್ರದಿಂದ ಒಮ್ಮೆ ಗೆಲುವು ಸಾಧಿಸಿದ್ದರು. ಹೀಗಾಗಿ, ಆ ಭಾಗದಲ್ಲಿ ಅವರಿಗಿರುವ ವೈಯಕ್ತಿಕ ಸಂಪರ್ಕ ಹಾಗೂ ರಾಜಕೀಯ ಪ್ರಭಾವವನ್ನು ಸುರೇಶ್‌ಬಾಬು ಬಳಸಿಕೊಳ್ಳಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಮತ್ತೊಂದೆಡೆ, ಕಂಪ್ಲಿ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿರುವ ಸುರೇಶ್‌ಬಾಬು ಅವರಿಗೆ ಅಲ್ಲಿನ ಪಕ್ಷದ ಕಾರ್ಯಕರ್ತರೊಂದಿಗೆ ಇನ್ನೂ ಉತ್ತಮ ಸಂಪರ್ಕವಿದೆ. ಹೀಗಾಗಿ, ಶ್ರೀರಾಮುಲು ಕಂಪ್ಲಿಗೆ, ಸುರೇಶ್‌ಬಾಬು ಮೊಳಕಾಲ್ಮುರಿಗೆ ಎಂಬ ಕ್ಷೇತ್ರ ಬದಲಾವಣೆಯ ಲೆಕ್ಕಾಚಾರ ಇಬ್ಬರ ರಾಜಕೀಯ ಭವಿಷ್ಯಕ್ಕೂ ಹೊಸ ದಿಕ್ಕು ನೀಡಬಹುದೇ ಎಂಬ ಕುತೂಹಲ ಜಿಲ್ಲೆಯ ರಾಜಕೀಯ ವಲಯದಲ್ಲಿದೆ.