ಬಳ್ಳಾರಿ: ನಾನು ಮಂತ್ರಿಯಾಗಿರೋದಕ್ಕೆ ಶ್ರೀರಾಮುಲುಗೆ ಸಹಿಸಲಾಗುತ್ತಿಲ್ಲ, ಬರೀ ಹೊಟ್ಟೆಕಿಚ್ಚು. ಹೀಗಾಗಿಯೇ ಅವರು ನನ್ನ ರಾಜೀನಾಮೆಗೆ ಒತ್ತಾಯಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹೇಳಿದರು.
ಬಳ್ಳಾರಿ ಜೀನ್ಸ್ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಈಗಾಗಲೇ 664 ಎಕರೆ ಸ್ವಾದೀನ ಮಾಡಿಕೊಳ್ಳಲಾಗಿದೆ. ಒಂದು ಸಾವಿರ ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಿಸುವ ಯೋಜನೆ ಇದಾಗಿದೆ. ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿತ್ತು, ಸರಿಪಡಿಸುತ್ತೇವೆ. ಬಳ್ಳಾರಿಯ ಜನಸಂಖ್ಯೆ ಬೆಳೆಯುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ₹1200 ಕೋಟಿ ವೆಚ್ಚದಲ್ಲಿ ಜಲಾಶಯದಿಂದ ನೇರವಾಗಿ ಬಳ್ಳಾರಿಗೆ ನೀರು ತರುವ ಯೋಜನೆ ಕಾರ್ಯರೂಪ ಪಡೆದುಕೊಂಡಿದೆ. ರಾಜ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದು, ಬಳ್ಳಾರಿಯ ಸಮಗ್ರ ಅಭಿವೃದ್ದಿಗೆ ಸಹ ಒತ್ತು ನೀಡುತ್ತೇವೆ. ಇನ್ನು ಬರೀ 20 ತಿಂಗಳು ಮಾತ್ರ ಅಧಿಕಾರದ ಅವಧಿಯಿದೆ. ಈ ಅವಧಿಯನ್ನು ಸರಿಯಾಗಿ ಬಳಸಿಕೊಂಡು ಈ ವರೆಗೆ ಬಾಕಿ ಇರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಮೇಯರ್ ಪಿ. ಗಾದೆಪ್ಪ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.