ಶ್ರೀರಂಗಪಟ್ಟಣ ದಸರಾ ಸಾಂಪ್ರದಾಯಿಕವಾಗಿ ಆಚರಣೆ: ಚಲುವರಾಯಸ್ವಾಮಿ

KannadaprabhaNewsNetwork |  
Published : Sep 16, 2026, 01:45 AM IST
ಸಚಿವ ಎನ್.ಚಲುವರಾಯಸ್ವಾಮಿ  | Kannada Prabha

ಸಾರಾಂಶ

ಶ್ರೀರಂಗಪಟ್ಟಣ ದಸರಾ ಆಚರಣೆ ಸಂಬಂಧ ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ಈ ಬಾರಿ ಉತ್ಸವಕ್ಕೆ ವಿಶೇಷ ರೂಪ ನೀಡಲಾಗುವುದು. ಅಕ್ಟೋಬರ್ 12 ಮತ್ತು 13ರಂದು ಯುವ ಸಂಭ್ರಮ ಹಾಗೂ ಅ.15ರಿಂದ 18ರವರೆಗೆ ದಸರಾ ಮಹೋತ್ಸವ. ಯುವ ದಸರಾದಲ್ಲಿ ಸ್ಥಳೀಯ ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಶ್ರೀರಂಗಪಟ್ಟಣ ದಸರಾವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಸಾಂಪ್ರದಾಯಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಶ್ರೀರಂಗಪಟ್ಟಣ ದಸರಾ ಆಚರಣೆ ಸಂಬಂಧ ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ಈ ಬಾರಿ ಉತ್ಸವಕ್ಕೆ ವಿಶೇಷ ರೂಪ ನೀಡಲಾಗುವುದು. ಅಕ್ಟೋಬರ್ 12 ಮತ್ತು 13ರಂದು ಯುವ ಸಂಭ್ರಮ ಹಾಗೂ ಅ.15ರಿಂದ 18ರವರೆಗೆ ದಸರಾ ಮಹೋತ್ಸವ. ಯುವ ದಸರಾದಲ್ಲಿ ಸ್ಥಳೀಯ ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಲಾಗುವುದು ಎಂದರು.

ದಸರಾ ಆಚರಣೆಗೆ 5 ಕೋಟಿ ರು. ಅನುದಾನ ಕೋರಿ ಸಮಿತಿ ಮನವಿ ಮಾಡಿದೆ. ಶಾಸಕರ ಸಲಹೆ ಪರಿಗಣಿಸಿ ಮುಂದಿನ ಮೂರು ದಿನಗಳಲ್ಲಿ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಮಿಮ್ಸ್ ಜಾಗದಲ್ಲಿರುವ ಒತ್ತುವರಿದಾರರಿಗೆ ಪರ್ಯಾಯ ಜಾಗ ನೀಡಿದ್ದರೂ ಇನ್ನೂ ಸ್ಥಳಾಂತರಗೊಂಡಿಲ್ಲ. ಪ್ರಸ್ತುತ ನ್ಯಾಯಾಲಯದ ತಡೆಯಾಜ್ಞೆ ಇದೆ. ಇದನ್ನು ತೆರವುಗೊಳಿಸಲು ಅಡ್ವೊಕೇಟ್ ಜನರಲ್ ಅವರನ್ನು ನೇಮಿಸಿ ಕಾನೂನು ಹೋರಾಟ ನಡೆಸಲಾಗುವುದು. ಮಿಮ್ಸ್ ಆಸ್ಪತ್ರೆ ಸಾಮರ್ಥ್ಯವನ್ನು ಸಾವಿರ ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಶೀಘ್ರವೇ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಆದರೆ, ಕೆಲವೆಡೆ ರೈತರು ನೀರು ತಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕೆ.ಆರ್.ಪೇಟೆ ಹಾಗೂ ಪಾಂಡವಪುರ ಭಾಗದ ರೈತರು ಸಹಕರಿಸಿ ಮದ್ದೂರು ಹಾಗೂ ಮಳವಳ್ಳಿ ಭಾಗದ ಕೆರೆಗಳು ತುಂಬಲು ಅವಕಾಶ ಮಾಡಿಕೊಡಬೇಕು. ಅಗತ್ಯವಿದ್ದರೆ ಪೊಲೀಸ್ ಭದ್ರತೆ ಪಡೆದು ನೀರು ಹರಿಸಲಾಗುವುದು ಎಂದರು.

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪೀಠ ಮೂರು ದಿನ ಕಾರ್ಯನಿರ್ವಹಿಸದ ಕಾರಣ ಕಾವೇರಿ ನೀರು ನಿಯಂತ್ರಣ ಸಮಿತಿಗೆ (CWRC) ಇಂದು ಮಧ್ಯಾಹ್ನವೇ ವಿಶೇಷ ಅರ್ಜಿ ಸಲ್ಲಿಸಿ ರಾಜ್ಯದ ನೀರಿನ ವಾಸ್ತವ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಡಲಾಗುವುದು. ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆ ಜಾರಿ ಮಾತ್ರ ಶಾಶ್ವತ ಪರಿಹಾರ ಎಂದು ಪುನರುಚ್ಚರಿಸಿದರು.

ಮದ್ದೂರಿನಲ್ಲಿ ನಡೆಯುತ್ತಿರುವ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಬಿಜೆಪಿ ನಾಯಕರು ಭಾಗವಹಿಸುತ್ತಿರುವ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಸಚಿವರು, ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಬಾರದ ಬಿಜೆಪಿ ನಾಯಕರು, ಗಣೇಶ ವಿಸರ್ಜನೆ ನೆಪದಲ್ಲಿ ರಾಜಕಾರಣ ಮಾಡಲು ಬರುತ್ತಿದ್ದಾರೆ. ನಮ್ಮ ಜಿಲ್ಲೆಯ ಜನರಿಗೆ ಗಣೇಶನನ್ನು ಹೇಗೆ ವಿಸರ್ಜಿಸಬೇಕು ಎಂಬುದು ಗೊತ್ತಿದೆ. ಮಾತನಾಡಲು ಬೇರೆ ವಿಷಯವಿಲ್ಲದ ಕಾರಣ ಬಿಜೆಪಿ ಇಲ್ಲಿ ರಾಜಕೀಯ ಮಾಡುತ್ತಿದೆ. ಅವರಿಗೂ ಸೂಕ್ತ ಪೊಲೀಸ್ ಭದ್ರತೆ ಒದಗಿಸಿ ವಾಪಸ್ ಕಳುಹಿಸಲಾಗುವುದು ಎಂದು ತಿರುಗೇಟು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಡು ರಸ್ತೆಯಲ್ಲೇ ಗಣೇಶಮೂರ್ತಿ ಇಟ್ಟು ಯುವಕರ ಪ್ರತಿಭಟನೆ
ವಿಜೃಂಭಣೆಯಿಂದ ನಡೆದ 46ನೇ ವರ್ಷದ ಗಣಪತಿ ಪೂಜಾ ಮಹೋತ್ಸವ