ಎಸ್ಸೆಸ್ಸೆಲ್ಸಿ: ಕಡಿಮೆ ಫಲಿತಾಂಶ ದಾಖಲಿಸಿದ್ದ ಶಾಲೆಗಳಿಗೆ ಸಿಇಒ ಭೇಟಿ

KannadaprabhaNewsNetwork |  
Published : Dec 11, 2025, 01:30 AM IST
೧೦ಕೆಎಂಎನ್‌ಡಿ-೨ಕೆ.ಆರ್.ಪೇಟೆ ತಾಲೂಕಿನ ಸಿಂಧಘಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಪಂ ಸಿಇಓ ಕೆ.ಆರ್.ನಂದಿನಿ ಎಸ್ಸೆಸ್ಸೆಲ್ಸಿ ಮಕ್ಕಳ ವ್ಯಾಸಂಗದ ಬಗ್ಗೆ ಮಾಹಿತಿ ಪಡೆದರು. | Kannada Prabha

ಸಾರಾಂಶ

ಸಿಂಧಘಟ್ಟ ಗ್ರಾಪಂ ಕಚೇರಿಯ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳ ನಿರ್ವಹಣೆ ಮತ್ತು ಗ್ರಂಥಾಲಯದಲ್ಲಿನ ಸೌಲಭ್ಯ ಪರಿಶೀಲಿಸಿ ಪಿಡಿಒ ವಾಣಿ ಹಾಗೂ ಗ್ರಂಥಪಾಲಕಿ ವಸಂತಮ್ಮ ಅವರನ್ನು ಶ್ಲಾಘಿಸಿದರು. ಗ್ರಾಪಂನಲ್ಲಿ ೨ ಗ್ರಂಥಾಲಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಫಲಿತಾಂಶ ದಾಖಲಿಸಿದ್ದ ಶಾಲೆಗಳಿಗೆ ಜಿಲ್ಲಾ ಪಂಚಾಯ್ತಿ ಸಿಇಒ ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆ.ಆರ್. ಪೇಟೆ ತಾಲೂಕಿನ ಸಿಂಧಘಟ್ಟ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಕನ್ನಡ ಭಾಷೆಯ ಪಠ್ಯವನ್ನು ಸರಿಯಾಗಿ ಬೋಧನೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಿಇಒ ಅವರ ಗಮನಕ್ಕೆ ತಂದಾಗ, ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಿಳಿಸಿರುವ ವಿಷಯದ ಬಗ್ಗೆ ಪರಿಶೀಲಿಸಿ ಒಂದು ವಾರದೊಳಗೆ ಸೂಕ್ತ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಲು ಸೂಚಿಸಿದರು.

ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಶಾಲೆಗೆ ಸರಬರಾಜು ಮಾಡಿರುವ ಅಡುಗೆ ಎಣ್ಣೆಯ ಅವಧಿ ಮುಕ್ತಾಯವಾಗಿರುವುದನ್ನು ಗಮನಿಸಲಾಗಿದ್ದು, ಈ ಬಗ್ಗೆ ಬಿಸಿಯೂಟ ಯೋಜನೆಯ ಶಿಕ್ಷಣಾಧಿಕಾರಿ ಮತ್ತು ಸಹಾಯಕ ನಿರ್ದೇಶಕರು ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಭೇಟಿ:

ಸಿಂಧಘಟ್ಟ ಗ್ರಾಮದ ೩ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆಯ ವಿಧಾನ, ಪೌಷ್ಟಿಕ ಆಹಾರ ವಿತರಣೆ, ಮೂಲಭೂತ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ವಿಶೇಷಚೇತನ ಅಂಗನವಾಡಿ ಕಾರ್ಯಕರ್ತೆ ತುಳಸಿ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಈ ಬಗ್ಗೆ ಮಕ್ಕಳ ಕಲಿಕಾ ಮಟ್ಟವನ್ನು ಪರಿಶೀಲಿಸಿ ತುಳಸಿ ಅವರ ಕಾರ್ಯವನ್ನು ಪ್ರಶಂಸಿಸಿದರು.

ಪುಸ್ತಕಗಳ ನಿರ್ವಹಣೆಗೆ ಶ್ಲಾಘನೆ:

ಸಿಂಧಘಟ್ಟ ಗ್ರಾಪಂ ಕಚೇರಿಯ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳ ನಿರ್ವಹಣೆ ಮತ್ತು ಗ್ರಂಥಾಲಯದಲ್ಲಿನ ಸೌಲಭ್ಯ ಪರಿಶೀಲಿಸಿ ಪಿಡಿಒ ವಾಣಿ ಹಾಗೂ ಗ್ರಂಥಪಾಲಕಿ ವಸಂತಮ್ಮ ಅವರನ್ನು ಶ್ಲಾಘಿಸಿದರು. ಗ್ರಾಪಂನಲ್ಲಿ ೨ ಗ್ರಂಥಾಲಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಪಂ ಕಚೇರಿಯ ಅಭಿಲೇಖಾಲಯಕ್ಕೆ ಭೇಟಿ ನೀಡಿ ಗ್ರಾಪಂನ ಕಡತಗಳು ಮತ್ತು ಇ-ಸ್ವತ್ತು ದಾಖಲೆಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಪರಿಶೀಲಿಸಿದರು. ಅಭಿಲೇಖಾಲಯದ ನಿರ್ವಹಣೆ ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ ಕಡತಗಳನ್ನು ಎ,ಬಿ,ಸಿ,ಡಿ ಎಂದು ವಿಂಗಡಿಸಲಾಗುತ್ತಿದ್ದು ಒಂದು ತಿಂಗಳೊಳಗಾಗಿ ಅಭಿಲೇಖಾಲಯ ಪೂರ್ಣಗೊಳಿಸಲಾಗುವುದು ಎಂದು ಪಿಡಿಒ ಅವರು ಮಾಹಿತಿ ನೀಡಿದರು.

ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರುದ್ರೇಶ್, ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಯತೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಣಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತಿ ಗ್ಯಾರಂಟಿ ರಾಮಣ್ಣನವರಿಗೆ ಅಧಿಕೃತ ಆಹ್ವಾನ
ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಕನ್ನಡದಲ್ಲಿಯೇ ವ್ಯವಹರಿಸಿ