ಹಾವೇರಿ: ಎಸ್ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1 ಹಿನ್ನೆಲೆಯಲ್ಲಿ ಜಿಲ್ಲೆಯ 81 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ಪ್ರಥಮ ಭಾಷಾ ಪರೀಕ್ಷೆಗಳು ಸುಗಮವಾಗಿ ಜರುಗಿದವು.ಕನ್ನಡ, ಇಂಗ್ಲಿಷ್ ಹಾಗೂ ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಆಯಾ ವಿಷಯದ ಪರೀಕ್ಷೆಗಳು ನಡೆದವು. ಬೆಳಗ್ಗೆ 10ರಿಂದ ಆರಂಭವಾದ ಪರೀಕ್ಷೆಗಳು ಮಧ್ಯಾಹ್ನ 1.15ರ ವರೆಗೆ ನಡೆದವು. ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಗುರುತಿಸಲಾಗಿದ್ದ 81 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಅರ್ಧ ಗಂಟೆ ಮುಂಚಿತವಾಗಿಯೇ ಆಗಮಿಸಿದ್ದರು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕುಡಿಯುವ ನೀರು, ಶೌಚಾಲಯ, ಗಡಿಯಾರ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಪರೀಕ್ಷಾ ನಕಲು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಹಾವೇರಿ ಜಿಪಂ ಸಭಾಂಗಣದಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಇನ್ನೂ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಕೊಠಡಿ ಮೇಲ್ವಿಚಾರಕರು, ಸಿಟ್ಟಿಂಗ್ ಸ್ಕ್ವಾಡ್‌ಗಳು, ಪೊಲೀಸ್ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು. ಜತೆಗೆ ಆರೋಗ್ಯ ಸಿಬ್ಬಂದಿ ಕೂಡ ಹಾಜರಿರುವುದು ಕಂಡುಬಂದಿತು.
ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ನಡೆದ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆ ಪರೀಕ್ಷೆಗಳು ಶಾಂತಿಯುತ ಮತ್ತು ಸುಗಮವಾಗಿ ನಡೆದಿವೆ. ಯಾವುದೇ ನಕಲು ಪ್ರಕರಣಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ ಎಂದು ಡಿಡಿಪಿಐ ಮೋಹನ್ ದಂಡಿನ ತಿಳಿಸಿದರು.22,213 ವಿದ್ಯಾರ್ಥಿಗಳು ಹಾಜರು: ಜಿಲ್ಲೆಯ ಎಂಟು ತಾಲೂಕಿನ 81 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನ ನಡೆದ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷಾ (ಕನ್ನಡ, ಇಂಗ್ಲಿಷ್ ಹಾಗೂ ಉರ್ದು) ವಿಷಯದ ಪರೀಕ್ಷೆಗಳಿಗೆ ಫ್ರೆಷರ್ಸ್ ಹಾಗೂ ರಿಪೀಟರ್ಸ್ ಸೇರಿದಂತೆ ಒಟ್ಟು 22,469 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ ಫ್ರೆಷರ್ಸ್ ಹಾಗೂ ಪಿರೀಟರ್ಸ್ ಸೇರಿದಂತೆ ಒಟ್ಟು 22,213 ವಿದ್ಯಾರ್ಥಿಗಳು ಹಾಜರಾಗಿದ್ದರು. ಒಟ್ಟು 256 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಡಿಡಿಪಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಹೂ ನೀಡಿ ಶುಭ ಕೋರಿದ ಅಧಿಕಾರಿಗಳು: ಹಾವೇರಿ ನಗರದ ಸರ್ ಎಂ. ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಡಿಡಿಪಿಐ ಮೋಹನ್ ದಂಡಿನ, ಡಯಟ್ ಪ್ರಾಚಾರ್ಯ ಝೆಡ್.ಎಂ. ಖಾಜಿ, ತಹಸೀಲ್ದಾರ್ ಶರಣಮ್ಮ, ಬಿಇಒ ಎಂ.ಎಚ್. ಪಾಟೀಲ ಸೇರಿದಂತೆ ವಿವಿಧ ಹಂತದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಪರೀಕ್ಷೆ ಚೆನ್ನಾಗಿ ಬರೆಯುವಂತೆ ಶುಭ ಹಾರೈಸಿದರು.
ರಾಣಿಬೆನ್ನೂರು ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ಬುಧವಾರ 15 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಥಮ ಭಾಷೆ ಪತ್ರಿಕೆ ಪ್ರಾರಂಭವಾಗಿದೆ. ಮೊದಲ ದಿನ ಒಟ್ಟು 4787 ವಿದ್ಯಾರ್ಥಿಗಳ ಪೈಕಿ 4705 ಪರೀಕ್ಷೆಗೆ ಹಾಜರಾಗಿದ್ದು, 82 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಪತ್ರಿಕೆಗೆ ತಿಳಿಸಿದ್ದಾರೆ.