ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ದ.ಕ.ದಲ್ಲಿ 29,760 ವಿದ್ಯಾರ್ಥಿಗಳು

KannadaprabhaNewsNetwork |  
Published : Mar 20, 2025, 01:19 AM IST
೩೨ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಒಟ್ಟು 29,760 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ೯೨ ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ.ಪರೀಕ್ಷೆಗೆ ನೋಂದಣಿ ಮಾಡಿಕೊಂಡ ಒಟ್ಟು ವಿದ್ಯಾರ್ಥಿಗಳ ಪೈಕಿ 28,446 ಮಂದಿ ಹೊಸದಾಗಿ ಪರೀಕ್ಷೆ ಬರೆಯುವವರು. ಇವರಲ್ಲಿ 14,735 ಬಾಲಕರಿದ್ದರೆ, 13,711 ಬಾಲಕಿಯರು. 831 ಮಂದಿ ಖಾಸಗಿಯಾಗಿ ಮೊದಲ ಸಲ ಪರೀಕ್ಷೆ ಬರೆಯುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯಾದ್ಯಂತ ಮಾ.21ರಿಂದ ಏಪ್ರಿಲ್‌ 4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವ ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 29,760 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ೯೨ ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ.ಪರೀಕ್ಷೆಗೆ ನೋಂದಣಿ ಮಾಡಿಕೊಂಡ ಒಟ್ಟು ವಿದ್ಯಾರ್ಥಿಗಳ ಪೈಕಿ 28,446 ಮಂದಿ ಹೊಸದಾಗಿ ಪರೀಕ್ಷೆ ಬರೆಯುವವರು. ಇವರಲ್ಲಿ 14,735 ಬಾಲಕರಿದ್ದರೆ, 13,711 ಬಾಲಕಿಯರು. 831 ಮಂದಿ ಖಾಸಗಿಯಾಗಿ ಮೊದಲ ಸಲ ಪರೀಕ್ಷೆ ಬರೆಯುತ್ತಿದ್ದಾರೆ. ಇವರಲ್ಲಿ 579 ಮಂದಿ ಪುರುಷ ಅಭ್ಯರ್ಥಿಗಳಿದ್ದರೆ, 252 ಮಂದಿ ಮಹಿಳಾ ಅಭ್ಯರ್ಥಿಗಳು. ಉಳಿದ 259 ಅಭ್ಯರ್ಥಿಗಳು ಖಾಸಗಿಯಾಗಿ ಮರು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 211 ಮಂದಿ ಪುರುಷರು ಹಾಗೂ 48 ಮಹಿಳೆಯರು.

ತಾಲೂಕುವಾರು ವಿದ್ಯಾರ್ಥಿಗಳು:

ಬೆಳ್ತಂಗಡಿಯಲ್ಲಿ 4204 ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಿದ್ದರೆ, ಬಂಟ್ವಾಳದಲ್ಲಿ 6007, ಸುಳ್ಯದಲ್ಲಿ 1992, ಪುತ್ತೂರಿನಲ್ಲಿ 4926, ಮೂಡುಬಿದಿರೆಯಲ್ಲಿ 2006, ಮಂಗಳೂರು ದಕ್ಷಿಣದಲ್ಲಿ 5182, ಮಂಗಳೂರು ಉತ್ತರದಲ್ಲಿ 5443 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

೯೨ ಶಾಲೆಗಳಲ್ಲಿ ಪರೀಕ್ಷೆ:

ಜಿಲ್ಲೆಯ ಒಟ್ಟು 521 ಶಾಲೆಗಳ 1332 ಕೊಠಡಿಗಳಲ್ಲಿ ಪರೀಕ್ಷೆ ನೆರವೇರಲಿದೆ. ಬೆಳ್ತಂಗಡಿಯಲ್ಲಿ 76 ಶಾಲೆಗಳು, ಬಂಟ್ವಾಳದಲ್ಲಿ 97, ಸುಳ್ಯ 36, ಪುತ್ತೂರು 82, ಮೂಡುಬಿದಿರೆ 29, ಮಂಗಳೂರು ದಕ್ಷಿಣದಲ್ಲಿ 105, ಮಂಗಳೂರು ಉತ್ತರದಲ್ಲಿ 96 ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಶಿಸ್ತುಬದ್ಧವಾಗಿ ನಡೆಸುವ ಉದ್ದೇಶದಿಂದ ಒಟ್ಟು 1678 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಹೊಸದಾಗಿ ಪರೀಕ್ಷೆ ಬರೆಯುವ 28,446 ವಿದ್ಯಾರ್ಥಿಗಳ ಪೈಕಿ 8892 ಮಂದಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಾಗಿದ್ದರೆ, 7864 ಮಂದಿ ಅನುದಾನಿತ ಶಾಲೆ ಮಕ್ಕಳು, 11,690 ಮಂದಿ ಅನುದಾನರಹಿತ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ.

ಅಧಿಕಾರಿಗಳು, ಸಿಬ್ಬಂದಿ ನೇಮಕ:

ಪರೀಕ್ಷೆ ಸುಸೂತ್ರವಾಗಿ ನಡೆಸಲು 1332 ಪರೀಕ್ಷಾ ಕೊಠಡಿ ಮೇಲ್ವಿಚಾರಕರು, 92 ಸಿಟ್ಟಿಂಗ್‌ ಸ್ಕ್ವಾಡ್‌, 92 ಸೆಂಟರ್‌ ಚೀಫ್‌ಗಳು, 92 ಕಚೇರಿ ಸಿಬ್ಬಂದಿ, 236 ಗ್ರೂಪ್‌ ಡಿ ಸಿಬ್ಬಂದಿ ಸೇರಿದಂತೆ ಒಟ್ಟು 2057 ಅಧಿಕಾರಿಗಳು, ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸಾಗಾಟ ಭದ್ರತೆಗೆ 34 ಪೊಲೀಸ್‌, ಪರೀಕ್ಷಾ ಕೇಂದ್ರಗಳ ಉಸ್ತುವಾರಿಗೆ 184 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ಬಾಲಕರಿಗೂ ಬಸ್‌ ಪ್ರಯಾಣ ಉಚಿತ

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಬಾಲಕರಿಗೂ ಕೆಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ದಿನದಂದು ಬಸ್ಸಿನಲ್ಲಿ ಹಾಲ್‌ ಟಿಕೆಟ್‌ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು. ಈ ಕುರಿತು ಕೆಎಸ್ಸಾರ್ಟಿಸಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಪರೀಕ್ಷಾ ಕೇಂದ್ರದ ಎದುರಲ್ಲೇ ಬಸ್ಸು ನಿಲ್ಲಿಸಲೂ ಸೂಚಿಸಲಾಗಿದೆ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಗೋವಿಂದ ಮಡಿವಾಳ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಸರ್ವ ರೀತಿಯ ಸಿದ್ಧತೆ ಮಾಡಲಾಗಿದೆ. ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಸಾಕಷ್ಟು ಫ್ಯಾನ್‌, ವಿದ್ಯುದ್ದೀಪ, ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಿಸಿ ಕ್ಯಾಮರಾಗಳ ಮೇಲ್ವಿಚಾರಣೆ ನೋಡಿಕೊಳ್ಳಲು 20 ಮಂದಿಯ ತಂಡ ರಚಿಸಿದ್ದೇವೆ. ಪರೀಕ್ಷೆಯ ವಿವಿಧ ಹಂತಗಳ ಎಲ್ಲ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈಗಾಗಲೇ ಪ್ರಶ್ನೆಪತ್ರಿಕೆ ತಲುಪಿದ್ದು ಖಜಾನೆಯಲ್ಲಿ ಇರಿಸಲಾಗಿದೆ. ಮಕ್ಕಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಲು ಅನುಕೂಲಕರ ವಾತಾವರಣ ಕಲ್ಪಿಸಿದ್ದೇವೆ.

- ಗೋವಿಂದ ಮಡಿವಾಳ, ಡಿಡಿಪಿಐ, ದಕ್ಷಿಣ ಕನ್ನಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ