ಎಸ್ಸೆಸ್ಸೆಲ್ಸಿ ಪರೀಕ್ಷೆ: ಬಾರದ ಪ್ರವೇಶ ಪತ್ರ, ಹರನಗಿರಿ ಸರ್ಕಾರಿ ಶಾಲೆ ವಿದ್ಯಾರ್ಥಿ ಕಂಗಾಲು

KannadaprabhaNewsNetwork |  
Published : Mar 24, 2024, 01:33 AM ISTUpdated : Mar 24, 2024, 01:34 AM IST
ಫೋಟೊ ಶೀರ್ಷಿಕೆ: 23ಆರ್‌ಎನ್‌ಆರ್9ರಾಣಿಬೆನ್ನೂರು ತಾಲೂಕಿನ ಹರನಗಿರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪ್ರವೇಶ ಪತ್ರ ಬಾರದ ಹಿನ್ನೆಲೆಯಲ್ಲಿ ಪೋಷಕರು ಮುಖ್ಯ ಶಿಕ್ಷಕರ ಜತೆ ಮಾತುಕತೆ ನಡೆಸುತ್ತಿರುವುದು | Kannada Prabha

ಸಾರಾಂಶ

ಮುಖ್ಯ ಶಿಕ್ಷಕರು ಮಾಡಿದ ಎಡವಟ್ಟಿನಿಂದಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಪ್ರವೇಶ ಪತ್ರ ಬಾರದೆ ಆತನ ಭವಿಷ್ಯಕ್ಕೆ ಕಂಟಕವಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಪೋಷಕರು ಹರಿಹಾಯ್ದ ಘಟನೆ ಶನಿವಾರ ತಾಲೂಕಿನ ಹರನಗಿರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ರಾಣಿಬೆನ್ನೂರು: ಮುಖ್ಯ ಶಿಕ್ಷಕರು ಮಾಡಿದ ಎಡವಟ್ಟಿನಿಂದಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಪ್ರವೇಶ ಪತ್ರ ಬಾರದೆ ಆತನ ಭವಿಷ್ಯಕ್ಕೆ ಕಂಟಕವಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಪೋಷಕರು ಹರಿಹಾಯ್ದ ಘಟನೆ ಶನಿವಾರ ತಾಲೂಕಿನ ಹರನಗಿರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಹೊನ್ನಾಳಿ ತಾಲೂಕಿನ ಹೊಳೆಹಳ್ಳಳ್ಳಿ ಗ್ರಾಮದ ಅಭಿಷೇಕ ವಿಜಯಕುಮಾರ ಜರಮಲಿ ಎಂಬ ವಿದ್ಯಾರ್ಥಿ ಹರನಗಿರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಆದರೆ ಈತನು ಅನಾರೋಗ್ಯದಿಂದ ಕಳೆದ ಒಂದು ತಿಂಗಳ ಕಾಲ ಶಾಲೆಗೆ ಹೋಗಿರಲಿಲ್ಲ. ಇದರಿಂದಾಗಿ ಆತನ ಹಾಜರಾತಿಯನ್ನು ಗೈರು ಮಾಡಿ ಎಸ್‌ಎಸ್‌ಎಲ್‌ಸಿ ಪ್ರವೇಶ ಪತ್ರ ಬಾರದಂತೆ ಮುಖ್ಯೋಪಾಧ್ಯಾಯರು ಕ್ರಮ ಕೈಗೊಂಡಿದ್ದಾರೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಡಿಸೆಂಬರ್ ತಿಂಗಳ ವರೆಗೂ ನಮ್ಮ ಮಗ ಶಾಲೆಗೆ ಬಂದಿದ್ದಾನೆ. ಇತ್ತೀಚೆಗೆ ಒಂದು ತಿಂಗಳು ಶಾಲೆಗೆ ಬಂದಿಲ್ಲ. ಆದರೆ ನಮ್ಮ ಮಗ ಶಾಲೆ ಬಿಟ್ಟ ವಿಚಾರವನ್ನೂ ನಮಗೆ ತಿಳಿಸಿಲ್ಲ, ಪರೀಕ್ಷೆ ಪ್ರವೇಶಕ್ಕೆ ಹಾಜರಾತಿ ಎಷ್ಟಿರಬೇಕು? ಒಂದು ವೇಳೆ ಹಾಜರಾತಿ ಕಡಿಮೆ ಇದ್ದಿದ್ದರೆ ಪಾಲಕರನ್ನು ಭೇಟಿಯಾಗಿ ಶಿಕ್ಷಕರು ಮಾಹಿತಿ ತಿಳಿಸಬೇಕಾಗಿತ್ತು. ಇದ್ಯಾವುದನ್ನೂ ಮಾಡದೇ ಇದೀಗ ಪ್ರವೇಶ ಪತ್ರ ಬಂದಿಲ್ಲ ಎಂದು ಹೇಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಶಿಕ್ಷಕರ ವಿರುದ್ಧ ಪೋಷಕರು ಹರಿಹಾಯ್ದರು.

ಪಾಲಕರು ಶಿಕ್ಷಕರನ್ನು ದೂರವಾಣಿಯ ಮೂಲಕ ಫೆಬ್ರವರಿ ತಿಂಗಳಲ್ಲಿ ಸಂಪರ್ಕಿಸಿದಾಗ ಪ್ರವೇಶ ಪತ್ರ ಬರುವುದನ್ನು ಖಚಿತ ಪಡಿಸಿದ್ದರು. ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡುವುದನ್ನು ಅರಿತ ವಿದ್ಯಾರ್ಥಿ ಹಾಗೂ ಪಾಲಕರು ಶಾಲೆಗೆ ಆಗಮಿಸಿ ಪ್ರವೇಶ ಪತ್ರವನ್ನು ಕೇಳಿದಾಗ ನಿಮ್ಮ ಮಗನ ಹಾಜರಾತಿ ಕಡಿಮೆಯಿದ್ದು ಅವನು ಸರಿಯಾಗಿ ಶಾಲೆಗೆ ಬಂದಿಲ್ಲ. ಹೀಗಾಗಿ ಆತನ ಪ್ರವೇಶ ಪತ್ರ ಬರುವುದಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ. ನಾವು ನನ್ನ ಮಗನ ಹಾಜರಾತಿಯ ದಾಖಲಾತಿಯನ್ನು ನಮಗೆ ತೋರಿಸಿ ಎಂದರೂ ಶಿಕ್ಷಕರು ತೋರಿಸುತ್ತಿಲ್ಲ. ನಮ್ಮದೂ ತಪ್ಪಾಗಿದೆ, ನಿಮ್ಮದೂ ತಪ್ಪಿದೆ, ಇನ್ನೂ ಮುಂದೆ ತಪ್ಪಾಗದಂತೆ ನಾವು ನೋಡಿಕೊಳ್ಳುತ್ತೇವೆ. ಇನ್ನೂ ಮೂರು ತಿಂಗಳು ಬಿಟ್ಟು ಮತ್ತೆ ಪರೀಕ್ಷೆಗೆ ಅವಕಾಶ ಕಲ್ಪಿಸುತ್ತೇವೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ. ಆದರೆ ನನ್ನ ಮಗ ಡಿಸೆಂಬರ್ ತಿಂಗಳ ವರೆಗೆ ಶಾಲೆಗೆ ಬಂದಿರುವುದರಿಂದ ಹಾಜರಾತಿ ಸರಿಯಾಗಿಯೇ ಇದೆ. ಶಿಕ್ಷಕರ ಅಜಾಗರೂತೆಯಿಂದಾಗಿ ನನ್ನ ಮಗನ ಪ್ರವೇಶ ಪತ್ರ ಬಾರದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ಶಾಲೆಗೆ ಭೇಟಿ ನೀಡಿ ನನ್ನ ಮಗನ ಪ್ರವೇಶ ಪತ್ರ ಬಾರದೆ ಇರುವ ಕಾರಣ ಬಗ್ಗೆ ತಿಳಿದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನನ್ನ ಮಗ ಮನನೊಂದು ಜೀವಕ್ಕೆ ಏನಾದರೂ ಮಾಡಿಕೊಂಡರೆ ಮುಖ್ಯೋಪಾಧ್ಯಾಯರು, ಸಂಬಂಧಪಟ್ಟ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯವರೇ ನೇರ ಹೊಣೆಯಾಗುತ್ತಾರೆ ಎಂದು ವಿದ್ಯಾರ್ಥಿಯ ತಂದೆ ವಿಜಯಕುಮಾರ ತಾಯಿ ಮಲ್ಲಮ್ಮ ಕಣ್ಣೀರಿಡುತ್ತ ಶಿಕ್ಷಕರ ವಿರುದ್ಧ ಹರಿಹಾಯ್ದರು.

ಈ ಬಗ್ಗೆ ಮುಖ್ಯೋಪಾಧ್ಯಾಯ ರುದ್ರಪ್ಪ ಬಿ. ಅವರನ್ನು ಮಾಧ್ಯಮದವರು ವಿಚಾರಿಸಿದಾಗ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಹಾಜರಾತಿಯ ಪುಸ್ತಕವನ್ನೂ ತೋರಿಸಲಿಲ್ಲ.

PREV

Recommended Stories

ಭವಿಷ್ಯದಲ್ಲಿ ಆನೇಕಲ್‌ ಭಾಗ ಜಿಬಿಎ ವ್ಯಾಪ್ತಿಗೆ: ಡಿ.ಕೆ.ಶಿವಕುಮಾರ್‌
ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗಲ್ಲ ಎಂಬ ಸಂದೇಶ ರವಾನೆ!