25 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಜಿಲ್ಲಾಧಿಕಾರಿ ಸಿದ್ಧತಾ ಸಭೆ

KannadaprabhaNewsNetwork |  
Published : Mar 22, 2024, 01:01 AM IST
ಚಿತ್ರ : 21ಎಂಡಿಕೆ1 : ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಸಂಬಂಧ ಗುರುವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಾಂಶುಪಾಲರು.  | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.25 ರಿಂದ ಏ.6 ರವರೆಗೆ ನಡೆಯಲಿದ್ದು, ಕೊಡಗು ಜಿಲ್ಲೆಯ 27 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಮಡಿಕೇರಿ ತಾಲೂಕಿನ 8, ಸೋಮವಾರಪೇಟೆ ತಾಲೂಕಿನ 11, ವಿರಾಜಪೇಟೆ ತಾಲೂಕಿನ 8 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುರುವಾರ ಸಿದ್ಧತಾ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯದಲ್ಲಿ 25ರಂದು ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಸಂಬಂಧ ಗುರುವಾರ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿರ್ದೇಶನದಂತೆ ಎಸ್‌ಒಪಿ ಮಾರ್ಗಸೂಚಿಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಪರೀಕ್ಷೆ ಕೇಂದ್ರಗಳಲ್ಲಿ ಸೂಕ್ತವಾದ ಪೀಠೋಪಕರಣ/ ಆಸನದ ವ್ಯವಸ್ಥೆ, ಕುಡಿಯಲು ಶುದ್ಧವಾದ ನೀರು ಮತ್ತಿತರ ಮೂಲ ಸೌಲಭ್ಯಗಳು ಇರಬೇಕು ಎಂದರು.

ಪರೀಕ್ಷಾ ದಿನಗಳಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಬೇಕು/ಹೋಗಬೇಕು. ಪ್ರವೇಶ ಪತ್ರ ತೋರಿಸಿದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಬೇಕು ಎಂದರು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶದಂತೆ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವುದು, ವೆಬ್‌ಕಾಸ್ಟ್ ಮಾಡುವುದು ಮತ್ತಿತರ ಗಮನಹರಿಸುವಂತೆ ಜಿಲ್ಲಾಧಿಕಾರಿ ಹೇಳಿದರು.

ಜಿ.ಪಂ. ಸಿಇಒ ವರ್ಣಿತ್ ನೇಗಿ ಮಾತನಾಡಿ, ವಿದ್ಯಾರ್ಥಿಗಳನ್ನು ಭಯಪಡಿಸಬಾರದು. ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ನೀಡದೆ, ಸುಗಮವಾಗಿ ಪರೀಕ್ಷೆ ನಡೆಸಬೇಕು ಎಂದರು.

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಜೊತೆಗೆ ವೆಬ್‌ಕಾಸ್ಟಿಂಗ್ ಮೂಲಕ ಜಿಲ್ಲಾ ಪಂಚಾಯಿತಿಯ ಸ್ವೀಕೃತಿ ಕೇಂದ್ರದಲ್ಲಿ ಪರೀಕ್ಷೆಯ ಆಗುಹೋಗುಗಳ ಬಗ್ಗೆ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎಂ.ಚಂದ್ರಕಾಂತ್ ಅವರು ಮಾಹಿತಿ ನೀಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.25 ರಿಂದ ಏ.6 ರವರೆಗೆ ನಡೆಯಲಿದ್ದು, ಜಿಲ್ಲೆಯ 27 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಮಡಿಕೇರಿ ತಾಲೂಕಿನ 8, ಸೋಮವಾರಪೇಟೆ ತಾಲೂಕಿನ 11, ವಿರಾಜಪೇಟೆ ತಾಲೂಕಿನ 8 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

6517 ಅಭ್ಯರ್ಥಿಗಳು:

ಜಿಲ್ಲೆಯ 171 ಪ್ರೌಢಶಾಲೆಯ 6,517 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇವರಲ್ಲಿ 3,340 ಬಾಲಕರು ಮತ್ತು 3,177 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಮಡಿಕೇರಿ ತಾಲೂಕಿನ 43, ಸೋಮವಾರಪೇಟೆ ತಾಲೂಕಿನ 71 ಮತ್ತು ವಿರಾಜಪೇಟೆ ತಾಲೂಕಿನ 57 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ನಿಯೋಜಿಸಲು ಕೋರಲಾಗಿದೆ. ಹಾಗೆಯೇ ಆರೋಗ್ಯ ಸಿಬ್ಬಂದಿ ನಿಯೋಜಿಸಲು ಮನವಿ ಮಾಡಲಾಗಿದೆ. ಸಿಸಿಟಿವಿ ಅಳವಡಿಸಲಾಗುತ್ತದೆ. ಜೊತೆಗೆ ವೆಬ್‌ಕಾಸ್ಟ್ ಮಾಡಲಾಗುತ್ತದೆ ಎಂದು ಎಂ.ಚಂದ್ರಕಾಂತ್ ವಿವರಿಸಿದರು. ಡಯಟ್ ಹಿರಿಯ ಉಪನ್ಯಾಸಕರ ತಂಡ ರಚಿಸಿ ಜಾಗೃತಿ ದಳ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಅವರು ಮಾತನಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನೋಡಲಾಧಿಕಾರಿ ಮಹದೇವಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ (ಮಡಿಕೇರಿ), ಎಸ್. ಭಾಗ್ಯಮ್ಮ (ಸೋಮವಾರಪೇಟೆ), ಡಿವೈಪಿಸಿ ಎಂ.ಕೃಷ್ಣಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಪಲ್ಲೇದ್, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಪ್ರಶ್ನೆ ಪತ್ರಿಕಾ ಅಭಿರಕ್ಷಕರು, ವಿವಿಧ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಇದ್ದರು.

-----------------------

ಪರೀಕ್ಷಾ ಕೇಂದ್ರಗಳ ವಿವರ

ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಮೈಕಲರ ಪ್ರೌಢಶಾಲೆ, ಸಂತ ಜೋಸೆಫರ ಪ್ರೌಢಶಾಲೆ, ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆ, ಚೇರಂಬಾಣೆ ಅರುಣಾ ಪದವಿ ಪೂರ್ವ ಕಾಲೇಜು, ಮೂರ್ನಾಡು ಪ್ರೌಢಶಾಲೆ, ಸಿದ್ದಾಪುರ ಪ್ರೌಢಶಾಲೆ, ಸಂಪಾಜೆ ಪ್ರೌಢಶಾಲೆ,

ಸೋಮವಾರಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಒಎಲ್‌ವಿ ಆಂಗ್ಲ ಮಾಧ್ಯಮ ಶಾಲೆ, ಕುಶಾಲನಗರದ ಫಾತಿಮಾ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಶನಿವಾರಸಂತೆ ಪದವಿ ಪೂರ್ವ ಕಾಲೇಜು, ಸೇಕ್ರೇಡ್ ಹಾರ್ಟ್ ಪ್ರೌಢಶಾಲೆ, ಸುಂಟಿಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಮೇರೀಸ್ ಪ್ರೌಢಶಾಲೆ, ಕೊಡ್ಲಿಪೇಟೆಯ ಪದವಿ ಪೂರ್ವ ಕಾಲೇಜು, ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆ, ಹೆಬ್ಬಾಲೆಯ ಪದವಿ ಪೂರ್ವ ಕಾಲೇಜು,

ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಅನ್ನಮ್ಮ ಪ್ರೌಢಶಾಲೆ, ಅಮ್ಮತ್ತಿಯ ಗುಡ್ ಸೆಫರ್ಡ್ ಶಾಲೆ (ಹೊಸ ಕೇಂದ್ರ), ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆ, ಗೋಣಿಕೊಪ್ಪದ ಸಂತ ಥಾಮಸ್ ಶಾಲೆ, ತಿತಿಮತಿಯ ಸರ್ಕಾರಿ ಪ್ರೌಢಶಾಲೆ, ಪೊನ್ನಂಪೇಟೆಯ ಪಬ್ಲಿಕ್ ಶಾಲೆ, ಶ್ರೀಮಂಗಲದ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ