ಕನ್ನಡಪ್ರಭ ವಾರ್ತೆ ಹರಿಹರ
ರಾಜ್ಯಾದ್ಯಂತ ಮಾ.೨೫ ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹರಿಹರ ತಾಲೂಕಿನಾದ್ಯಂತ ೩೩೫೦ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.ನಗರದಲ್ಲಿ ೫ ಹಾಗೂ ಗ್ರಾಮಾಂತರ ಭಾಗದ ೭ ಪರೀಕ್ಷಾ ಕೇಂದ್ರಗಳಲ್ಲಿ ೮೨ ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ೧೭೦೭ ಬಾಲಕರು ಹಾಗೂ ೧೬೪೩ ಬಾಲಕಿಯರು ೨೦೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ತಾಲೂಕಿನಾದ್ಯಂತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸರ್ಕಾರದ ಮಾರ್ಗಸೂಚನೆಯಂತೆ ಪ್ರತಿಯೊಂದು ಕೇಂದ್ರಗಳಲ್ಲಿ ಒಬ್ಬ ಪೊಲೀಸ್ ಹಾಗೂ ಆರೋಗ್ಯ ಸಹಾಯಕರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಪರೀಕ್ಷಾ ಕೇಂದ್ರ ೨೦೦ ಮೀಟರ್ ಸುತ್ತಳತೆ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಗುರುತಿಸಲಾಗಿದೆ.ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ಮಾ.೨೫ ರಿಂದ ಏಪ್ರಿಲ್ ೦೬ರವರೆಗೆ ಬೆಳಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೩೦ ರವರೆಗೆ ನಡೆಯಲಿದೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಸ್ಥಾನಿಕ ಜಾಗೃತ ದಳ ನೇಮಕ ಮಾಡಲಾಗಿದೆ. ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ೧೫೦ ಶಿಕ್ಷಕರು ಹಾಗೂ ೧೨ ಮೊಬೈಲ್ ಸ್ವಾಧೀನಾಧಿಕಾರಿ ನೀಯೋಜನೆ ಹಾಗೂ ಪ್ರಥಮ ಬಾರಿಗೆ ಪ್ರತಿಯೊಂದು ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಅತಿ ಮುಖ್ಯವಾದ ಘಟ್ಟವಾಗಿದೆ. ಈ ಹಿನ್ನೆಲೆ ತಾಲೂಕಿನಲ್ಲಿ ಮೂರು ಪೂರ್ವಸಿದ್ಧತಾ ಪರೀಕ್ಷೆ, ವ್ಯಕ್ತಿತ್ವ ವಿಕಸನ ಶಿಬಿರಗಳ ಆಯೋಜನೆ ಮೂಲಕ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಪರೀಕ್ಷೆಗೆ ಸಿದ್ಧಗೊಳಿಸಲಾಗಿದೆ. ಈ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವ ಗುರಿಯನ್ನಿಟ್ಟು ಕೊಳ್ಳಲಾಗಿದೆ. ವಿದ್ಯಾರ್ಥಿಗಳು ಅನ್ಯ ವಿಷಯಗಳ ಬಗ್ಗೆ ಭಯಪಡದೇ. ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಸಲಹೆ ಹೇಳಿದರು.- - -
-೨೪ಎಚ್‌ಆರ್‌ಆರ್೩:ಹರಿಹರದ ಎಂಕೆಇಟಿ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು. ಕೇಂದ್ರ ಮೇಲ್ವಿಚಾರಕ ಎ.ಬಿ.ಕೋಟ್ರೇಶಪ್ಪ, ಧನ್ಯಕುಮಾರ್ ಇದ್ದರು.