ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶೇ.40 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಶನಿವಾರ ಹೇಳಿದರು.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಗತಿ ಕುರಿತು ಸುದ್ದಿಗಾರರಿಗೆ ವಿವರಿಸಿದ ಅವರು, ಪಟ್ಟಣದ ಜವಹರ್ ಪ್ರೌಢಶಾಲೆ, ಸರ್ಕಾರಿ ಜ್ಯೂನಿಯರ್ ಕಾಲೇಜು, ಸೋಮನಹಳ್ಳಿ ಎಸ್.ಸಿ.ಮಲ್ಲಯ್ಯ, ಕೆ.ಎಂ.ದೊಡ್ಡಿ ಭಾರತೀ, ಡಿ.ಎ.ಕೆರೆ ಕಾಳಿಕಾಂಬ, ಚಿಕ್ಕರಸಿಕೆರೆ, ಬಿದರಹೊಸಹಳ್ಳಿ ಮತ್ತು ಚಂದೂಪುರ ಸರ್ಕಾರಿ ಪ್ರೌಢಶಾಲೆ, ವಳಗೆರೆಹಳ್ಳಿಯ ಪ್ರಮೀಳ ವೀರಪ್ಪ, ಕೊಪ್ಪ ಹೋಬಳಿ ಗೊಲ್ಲರದೊಡ್ಡಿಯ ಶ್ರೀಕಂಠೇಶ್ವರ ಬಾಲಕಿಯರ ಪ್ರೌಢಶಾಲೆ, ಹುರಗಲವಾಡಿ ಗೇಟ್ ಚನ್ನೇಗೌಡ ಪ್ರೌಢಶಾಲೆ, ಕೆಸ್ತೂರಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಶಾಲೆಗಳು ಶೇ.40 ಕ್ಕಿಂತ ಕಡಿಮೆ ಫಲಿತಾಂಶ ಪಡೆದುಕೊಂಡಿವೆ ಎಂದರು.
ಇಂತಹ ಶಾಲೆಗಳು ಫಲಿತಾಂಶದಲ್ಲಿ ಹಿನ್ನೆಡೆ ಅನುಭವಿಸಲು ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಹೊಣೆಗಾಗಿದ್ದಾರೆ. ಶಿಕ್ಷಕರುಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು. ಸ್ಪಷ್ಟಿಕರಣ ಪಡೆದ ನಂತರ ಫಲಿತಾಂಶ ಸುಧಾರಣೆಗೆ ಗುರಿ ನಿಗಧಿಪಡಿಸಲಾಗುವುದು ಎಂದರು.ಮುಂದಿನ ಶೈಕ್ಷಣಿಕ ವರ್ಷಕ್ಕೆ ಫಲಿತಾಂಶ ಉತ್ತಮ ಪಡಿಸಲು ಸೂಚನೆ ನೀಡಲಾಗುವುದು. ಫಲಿತಾಂಶದಲ್ಲಿ ಸುಧಾರಣೆ ಕಂಡು ಬರದಿದ್ದಲ್ಲಿ ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ಬಾರಿಗಿಂತ ಉತ್ತಮ ಫಲಿತಾಂಶ:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಉತ್ತಮ 5 ನೇ ಸ್ಥಾನ ದಕ್ಕಿದೆ. ಸರ್ಕಾರಿ ಪ್ರೌಢಶಾಲೆಗಳು ಒಟ್ಟು ಶೇ.62.49 ರಷ್ಟು ಫಲಿತಾಂಶ ಪಡೆದಿವೆ. ಅನುದಾನಿತ ಪ್ರೌಢಶಾಲೆಗಳು ಶೇ.49.82, ಅನುದಾನ ರಹಿತ ಪ್ರೌಢಶಾಲೆಗಳು ಒಟ್ಟು ಶೇ.76.75 ಫಲಿತಾಂಶ ಪಡೆದು ಒಟ್ಟಾರೆ ಶೇ.65.65 ಫಲಿತಾಂಶ ಪಡೆದಂತ್ತಾಗಿದೆ ಎಂದರು.
ಪಟ್ಣಣದ ಶಿವಪುರದ ಪೂರ್ಣಪ್ರಜ್ಞಾ ಶಾಲೆ ಸಿ.ಪುನೀತಾ 625 ಕ್ಕೆ 624 ಅಂಕಗಳಿಸಿ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ದ್ವಿತೀಯ ಮತ್ತು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ಶಾಲೆಯ ಮತ್ತೊರ್ವ ವಿದ್ಯಾರ್ಥಿನಿ ಅನನ್ಯ 625 ಕ್ಕೆ 622 ಅಂಕಗಳಿಸಿ ರಾಜ್ಯಕ್ಕೆ 4 ನೇ ಸ್ಥಾನ ಪಡೆದಿದ್ದು, ಅಷ್ಟೇ ಅಲ್ಲದೇ, ಹಲವು ವಿದ್ಯಾರ್ಥಿ ಕೂಡ ಅತಿ ಹೆಚ್ಚು ಅಂಕಗಳನ್ನು ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ವೇಳೆ ಉತ್ತಮ ಸ್ಥಾನ ಬರಲು ಕಾರಣರಾದ ವಿದ್ಯಾರ್ಥಿಗಳು ಹಾಗೂ ಶಾಲೆ ಪ್ರೌಡಶಾಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು, ರಾಜ್ಯಕ್ಕೆ 2, ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸಿ.ಪುನೀತಾ ವಿದ್ಯಾರ್ಥಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಅನಂತೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯವಸ್ಥಾಪಕರಾದ ಶಿವಸುಂದರ್, ಇದ್ದರು.