ಕನ್ನಡಪ್ರಭ ವಾರ್ತೆ ಉಡುಪಿಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ತನ್ನ ಕೀರ್ತಿಯನ್ನು ಮರಳಿ ಗಳಿಸಿಕೊಂಡಿದೆ. ಉಡುಪಿ ಜಿಲ್ಲೆ ಶೇ.94 ಫಲಿತಾಂಶ ಸಾಧಿಸಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ.
ಅಲ್ಲದೇ ಕಾರ್ಕಳ ತಾಲೂಕಿನ ಜ್ಞಾನಸುಧಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹನಾ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 3ನೇ ಸ್ಥಾನ ಪಡೆದವರಲ್ಲಿ ಒಬ್ಬರಾಗಿದ್ದಾರೆ. ಕಾಪು ತಾಲೂಕಿನ ಮಣಿಪುರದ ಸಂಕೇತಾ ಎಚ್.ಎಸ್. 621 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಪಡೆದವರಲ್ಲೊಬ್ಬರಾಗಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ 13,453 ಹೊಸ, 578 ಖಾಸಗಿ ಮತ್ತು 65 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 14,096 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 13,246 ಮಂದಿ ಉತ್ತೀರ್ಣರಾಗಿದ್ದಾರೆ.ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯ ಕೊಠಡಿಗಳಲ್ಲಿ ಸಿಸಿ ಕ್ಯಾಮರ ಅಳವಡಿಕೆ ಮಾಡಲಾಗಿದ್ದು, ಇದರಿಂದ ನಕಲು ಮಾಡುವ ಅವಕಾಶ ಇಲ್ಲದೆ ಒಟ್ಟಾರೆ ರಾಜ್ಯದ ಫಲಿತಾಂಶ ಕುಸಿತವಾಗಿದೆ ಎನ್ನಲಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿಯೂ ಸಿಸಿ ಕ್ಯಾಮರ ಅಳವಡಿಸಿ ಕಟ್ಟುನಿಟ್ಟಿನ ಉಸ್ತುವಾರಿಯಲ್ಲಿ ಪರೀಕ್ಷೆ ನಡೆಸಲಾಗಿದ್ದರೂ ಒಟ್ಟಾರೇ ಫಲಿತಾಂಶ ಗಣನೀಯವಾಗಿ ಹೆಚ್ಚಾಗಿದೆ.
* ಶಿಕ್ಷಕರ ಪಾತ್ರ ದೊಡ್ಡದು: ಡಿಡಿಪಿಐಈ ಬಾರಿಯ ಉತ್ತಮ ಫಲಿತಾಂಶದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಫೇಲಾಗಬಹುದಾದ ವಿದ್ಯಾರ್ಥಿಗಳು ಹಿಂದಿನ ವರ್ಷಗಳ ಪ್ರಶ್ನಾಪತ್ರಿಕೆಗಳನ್ನು ನೀಡಿ ಉತ್ತರ ಬರೆಸುವ ಮೂಲಕ ಪಾಸಾಗುವಂತೆ ಮಾಡಿದ್ದಾರೆ. ಶಿಕ್ಷಕರು, ಅಧಿಕಾರಿಗಳು ವಿದ್ಯಾರ್ಥಿಗಳ ಮನೆಮನೆಗೆ ಭೇಟಿ ನೀಡಿ ಓದುವುದಕ್ಕೆ ಪ್ರೇರಣೆ ನೀಡಿದ್ದಾರೆ. ಟಿವಿ, ಮೊಬೈಲ್‌ಗಳಿಂದ ವಿದ್ಯಾರ್ಥಿಗಳನ್ನು ದೂರವಿಡುವಂತೆ ಹೆತ್ತವರಿಗೆ ಮನವರಿಕೆ ಮಾಡಲಾಗಿತ್ತು. ಅಣಕು ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಭಯವನ್ನು ದೂರ ಮಾಡಲಾಗಿತ್ತು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಕೆ.ಗಣಪತಿ ತಿಳಿಸಿದ್ದಾರೆ.