ಇಂದಿನಿಂದ ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ

KannadaprabhaNewsNetwork |  
Published : Mar 21, 2025, 12:31 AM IST
೨೦ಕೆಎಲ್‌ಆರ್-೧೧ಕೋಲಾರ ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.೨೧ರಿಂದ ಆರಂಭಗೊಂಡಿದ್ದು, ಗುರುವಾರವೇ ಕೇಂದ್ರಗಳಲ್ಲಿ ಡೆಸ್ಕ್‌ಗಳ ಮೇಲೆ ನೋಂದಣಿ ಸಂಖ್ಯೆ ದಾಖಲಿಸುವ ಕಾರ್ಯವನ್ನು  ಕೋಲಾರದ ಅಲಮಿನ್ ಶಾಲೆಯಲ್ಲಿ ಮುಖ್ಯ ಅಧೀಕ್ಷಕ  ವೇಣುಗೋಪಾಲ್ ನೇತೃತ್ವದಲ್ಲಿ ಶಿಕ್ಷಕರು ನಡೆಸಿದರು. | Kannada Prabha

ಸಾರಾಂಶ

ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ ವ್ಯಾಪ್ತಿಯಲ್ಲಿ ೧೪೪ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಾರಿ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಜಿಲ್ಲೆಯ ಎಲ್ಲಾ ೬೫ ಕೇಂದ್ರಗಳಲ್ಲೂ ಕೊಠಡಿಗಳಲ್ಲೂ ಸೌಲಭ್ಯಗಳ ಕುರಿತು ನಿಗಾ ವಹಿಸಿದ್ದು, ಯಾವುದೇ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಲು ಮಾ.೨೧ರಿಂದ ಏಪ್ರಿಲ್‌ ೪ರವರೆಗೆ ಒಟ್ಟು ೬೫ ಕೇಂದ್ರಗಳಲ್ಲಿ ನಡೆಯಲಿವೆ. ಪರೀಕ್ಷೆಗೆ ಒಟ್ಟು ೮೯೩೫ ಮಂದಿ ಬಾಲಕರು,೯೧೪೮ ಬಾಲಕಿಯರು, ೨೯೯೧ ಖಾಸಗಿ,ಪುನರಾವರ್ತಿತ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು ೨೧೦೭೫ ಮಂದಿ ವಿದ್ಯಾರ್ಥಿಗಳು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹೊಸದಾಗಿ ೧೮೦೮೪ ಮಂದಿ ವಿದ್ಯಾರ್ಥಿಗಳು ಹಾಗೂ ಖಾಸಗಿ ಮತ್ತು ಪುನರಾವರ್ತಿತ ೨೯೯೧ ವಿದ್ಯಾರ್ಥಿಗಳು ಪರೀಕ್ಷೆ ಬೆರೆಯಲಿದ್ದಾರೆ ಎಂದು ತಿಳಿಸಿದರು.

ತಾಲ್ಲೂಕುವಾರು ಕೇಂದ್ರಗಳು ಬಂಗಾರಪೇಟೆ ತಾಲ್ಲೂಕಿನ ೮ ಕೇಂದ್ರ, ಕೆಜಿಎಫ್ ತಾಲ್ಲೂಕಿನ ೯ ಕೇಂದ್ರ, ಕೋಲಾರದಲ್ಲಿ ೧೮ ಕೇಂದ್ರ, ಮಾಲೂರಿನಲ್ಲಿ ೮ ಕೇಂದ್ರ, ಮುಳಬಾಗಿಲು ತಾಲ್ಲೂಕಿನಲ್ಲಿ ೧೨ ಕೇಂದ್ರಗಳಲ್ಲಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ೧೦ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ, ಜಿಲ್ಲೆಯ ಒಟ್ಟು ೬೫ ಪರೀಕ್ಷಾ ಕೇಂದ್ರಗಳ ಪೈಕಿ ಗ್ರಾಮೀಣ ಕೇಂದ್ರಗಳು ೩೫, ನಗರ ಕೇಂದ್ರಗಳು ೩೦ ಇದೆ ಎಂದರು. ಪ್ರಶ್ನೆ ಪತ್ರಿಕೆಗಳನ್ನು ಕೇಂದ್ರಕ್ಕೆ ತಲುಪಿಸಲು ಹಾಗೂ ಪರೀಕ್ಷೆ ನಂತರ ಉತ್ತರ ಪತ್ರಿಕೆಗಳನ್ನು ಡಿಡಿಪಿಐ ಕಚೇರಿಗೆ ತಲುಪಿಸಲು ೨೮ ಮಾರ್ಗಗಳಿಗೆ ತಂಡಗಳನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವಾಟರ್‌ಬಾಯ್‌ಯಿಂದ ಮುಖ್ಯ ಅಧೀಕ್ಷಕರವರೆಗೂ ಎಲ್ಲರಿಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಗುರುತಿನ ಚೀಟಿ ಮುದ್ರಿಸಿ ಕಳುಹಿಸಿದೆ, ಗುರುತಿನ ಚೀಟಿ ಇಲ್ಲದೇ ಯಾರಿಗೂ ಒಳಗೆ ಪ್ರವೇಶ ನೀಡಬಾರದು ಎಂದು ತಿಳಿಸಲಾಗಿದೆ ಎಂದರು.

ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ ವ್ಯಾಪ್ತಿಯಲ್ಲಿ ೧೪೪ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜಾರಿ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಜಿಲ್ಲೆಯ ಎಲ್ಲಾ ೬೫ ಕೇಂದ್ರಗಳಲ್ಲೂ ಕೊಠಡಿ, ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳ ಕುರಿತು ನಿಗಾ ವಹಿಸಿದ್ದು, ಯಾವುದೇ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಥಮ ಚಿಕಿತ್ಸೆ ಸೌಲಭ್ಯ ಜಿಲ್ಲೆಯ ಎಲ್ಲಾ ೬೫ ಪರೀಕ್ಷಾ ಕೇಂದ್ರಗಳಲ್ಲಿಯೂ ಪರೀಕ್ಷೆ ನಡೆಯುವ ಮಾ.೨೧ ರಿಂದ ಏ.೪ ರವರೆಗೂ ಒಬ್ಬೊಬ್ಬ ಶುಶ್ರೂಷಕಿಯರನ್ನು ನೇಮಿಸಿ ಪ್ರಥಮ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿದೆ. ಇದರ ಜತೆಗೆ ಪ್ರತಿ ಕೇಂದ್ರಕ್ಕೂ ಪರೀಕ್ಷೆ ನಡೆಯುವಾಗ ಭದ್ರತೆಗಾಗಿ ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಒದಗಿಸಲು ಜಿಲ್ಲಾಧಿಕಾರಿ ಸೂಚನೆಯಂತೆ ಕ್ರಮವಹಿಸಲಾಗಿದೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಉಳಿದೆಲ್ಲಾ ಸಿಬ್ಬಂದಿ ಮೊಬೈಲ್ ಬಳಸದಿರುವಂತೆ ಕಟ್ಟಪ್ಪಣೆ ವಿಧಿಸಲಾಗಿದೆ. ಮುಖ್ಯ ಅಧೀಕ್ಷಕರು ಕೊಠಡಿ ಮೇಲ್ವಿಚಾರಕರು ಮೊಬೈಲ್ ತಂದಿದ್ದರೆ ಸ್ವಿಚ್ ಆಫ್ ಮಾಡಿಸಿ ವಶಕ್ಕೆ ಪಡೆಯಲು ಸೂಚಿಸಿದ್ದು, ಪ್ರತಿಕೇಂದ್ರಕ್ಕೂ ಒಬ್ಬ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಎಲೆಕ್ಟ್ರಾನಿಕ್ ವಸ್ತುಗಳು ನಿಷಿದ್ಧ

ವಿದ್ಯಾರ್ಥಿಗಳೂ ಸಹ ಮೊಬೈಲ್, ಎಲೆಕ್ಟ್ರಾನಿಕ್ ಗಡಿಯಾರ, ಉಪಕರಣಗಳನ್ನು ಕೇಂದ್ರದೊಳಕ್ಕೆ ತರಬಾರದು, ಕೇಂದ್ರದ ಮುಖ್ಯ ದ್ವಾರದಲ್ಲೇ ಈ ಸಂಬಂಧ ಪರಿಶೀಲಿಸಿ ಒಳ ಬಿಡುವಂತೆ ಪರೀಕ್ಷಾ ಮಂಡಳಿ ಸೂಚಿಸಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿ ಸಮುದಾಯ ವದಂತಿಗಳಿಗೆ ಕಿವಿಗೊಡದೇ, ಖಿನ್ನರಾಗದೇ ವಿಚಲಿತರಾಗದೇ ಪರೀಕ್ಷೆ ಬರೆದು ಗುಣಾತ್ಮಕ ಫಲಿತಾಂಶದ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪರವಾಗಿ ಡಿಡಿಪಿಐ ಕೃಷ್ಣಮೂರ್ತಿ, ಪರೀಕ್ಷಾ ನೋಡೆಲ್ ಅಧಿಕಾರಿ ಸಗೀರಾ ಅಂಜುಂ, ಶಿಕ್ಷಣಾಧಿಕಾರಿ ವೀಣಾ, ಡಿವೈಪಿಸಿಗಳಾದ ರಾಜೇಶ್ವರಿ, ಕೋಲಾರ ತಾಲ್ಲೂಕು ಬಿಇಒ ಮಧುಮಾಲತಿ ಪಡುವಣೆ, ವಿವಿಧ ತಾಲುಕುಗಳ ಬಿಇಒಗಳು ಶುಭ ಹಾರೈಸಿದ್ದಾರೆ.

PREV

Recommended Stories

ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ