ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಉಡುಪಿಯಲ್ಲಿ 14,153 ವಿದ್ಯಾರ್ಥಿಗಳು

KannadaprabhaNewsNetwork |  
Published : Mar 20, 2025, 01:17 AM IST
32 | Kannada Prabha

ಸಾರಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾ. 21ರಿಂದ ಏ. 4ರವರೆಗೆ ನಡೆಯಲಿದ್ದು, ಉಡುಪಿ ಜಿಲ್ಲಾಡಳಿತದ ವತಿಯಿಂದ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 7152 ಹುಡುಗರು ಮತ್ತು 6646 ಹುಡುಗಿಯರು, 350 ಖಾಸಗಿ, ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 14153 ಮಂದಿ ಪರೀಕ್ಷೆ ಬರೆಯಲಿದ್ದಾರೆ.

ಅಭ್ಯರ್ಥಿಗಳಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಬಿಸಿಯೂಟ, ಅಣಕು ಪರೀಕ್ಷೆ: ರಾಜ್ಯದಲ್ಲೇ ಇದು ಪ್ರಥಮಕನ್ನಡಪ್ರಭ ವಾರ್ತೆ ಉಡುಪಿ

2024 - 25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾ. 21ರಿಂದ ಏ. 4ರವರೆಗೆ ನಡೆಯಲಿದ್ದು, ಉಡುಪಿ ಜಿಲ್ಲಾಡಳಿತದ ವತಿಯಿಂದ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 7152 ಹುಡುಗರು ಮತ್ತು 6646 ಹುಡುಗಿಯರು, 350 ಖಾಸಗಿ, ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 14153 ಮಂದಿ ಪರೀಕ್ಷೆ ಬರೆಯಲಿದ್ದಾರೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 51 ಪರೀಕ್ಷಾ ಕೇಂದ್ರಗಳನ್ನು ಅಣಿಗೊಳಿಸಲಾಗಿದೆ. ಜಿಲ್ಲೆಯ 115 ಸರ್ಕಾರಿ, 68 ಅನುದಾನಿತ, 89 ಅನುದಾನರಹಿತ ಶಾಲೆಗಳ 14,153 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. 51 ಪರೀಕ್ಷಾ ಕೇಂದ್ರಗಳ 590 ಕೊಠಡಿಗಳಿಗೆ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ಸುಗಳಲ್ಲಿ ಹಾಲ್‌ ಟಿಕೆಟ್ ತೋರಿಸಿದರೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಅವ್ಯವಹಾರ ತಡೆಯಲು 3 ತಂಡಗಳನ್ನು ಮತ್ತು ವಲಯ ಮಟ್ಟದಲ್ಲಿ ಪ್ರತಿ ತಾಲೂಕಿನ ವಿಚಕ್ಷಣಾ ದಳಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿ ನಂಬಬೇಡಿ:

ಪರೀಕ್ಷೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಪ್ರಶ್ನಾಪತ್ರಿಕೆ ಬಹಿರಂಗ, ಮುಂದೂಡಿಕೆ ಇತ್ಯಾದಿ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಚೆನ್ನಾಗಿ ಓದಿ, ಯಾವುದೇ ಭಯ - ಒತ್ತಡವಿಲ್ಲದೇ ಪರೀಕ್ಷೆಗಳನ್ನು ಎದುರಿಸಬೇಕು ಎಂದವರು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದ್ದಾರೆ.

ಕಳೆದ ಬಾರಿ ಶೇ 97ರಷ್ಟು ಫಲಿತಾಂಶ ಸಾಧಿಸಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿತ್ತು. ಈ ಬಾರಿಯೂ ಅದಕ್ಕಿಂತ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ ಎಂದ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಮಾರುತಿ, ಅದಕ್ಕಾಗಿ 2 ಬಾರಿ ಶಾಲಾ ಮುಖ್ಯೋಪಾಧ್ಯಾಯರ ಸಭೆ ನಡೆಸಲಾಗಿದೆ. ಮಕ್ಕಳ ಹೆತ್ತವರ ಸಭೆಯನ್ನೂ ನಡೆಸಲಾಗಿದೆ. ಪ್ರತಿದಿನ ಮಕ್ಕಳಿಗೆ ಓದುವುದಕ್ಕೆ ಅನುಕೂಲವಾಗುವಂತೆ 5 ಗಂಟೆಗೆ ವೇಕಪ್‌ ಅಲರಾಮ್‌ ವ್ಯವಸ್ಥೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಉಪಕಾರ್ಯದರ್ಶಿ ಶ್ರೀನಿವಾಸ ರಾವ್, ನೋಡಲ್ ಅಧಿಕಾರಿಗಳಾದ ಬಾಲಕೃಷ್ಣ ಮತ್ತು ನಾಗರಾಜ್‌, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್‌ ಇದ್ದರು.

..............ಬೆಳಗ್ಗೆ ತಿಂಡಿ, ಮಧ್ಯಾಹ್ನ ಬಿಸಿಯೂಟ ಕಳೆದ ವರ್ಷದಂತೆ ಈ ಬಾರಿಯೂ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರ ಕಾಳಜಿಯಂತೆ ದೂರದೂರುಗಳಿಂದ ಬರುವ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಮನೆಗೆ ಹೋಗುವಾಗ ತಡವಾಗುವುದರಿಂದ ಅವರಿಗೆ ಆಯಾ ಪರೀಕ್ಷಾ ಕೇಂದ್ರಗಳಲ್ಲಿಯೂ ಮಧ್ಯಾಹ್ನದ ಬಿಸಿಯೂಟಕ್ಕೆ ಮತ್ತು ಬೆಳಗ್ಗೆ ತಿಂಡಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ರಾಜ್ಯದಲ್ಲಿ ಈ ವ್ಯವಸ್ಥೆ ಉಡುಪಿಯಲ್ಲಿ ಮಾತ್ರ ಮಾಡಲಾಗುತ್ತಿದೆ.......................ರಾಜ್ಯದಲ್ಲಿ ಪ್ರಥಮ ಅಣಕು ಪರೀಕ್ಷೆಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿರುವ ಭಯ ಹೋಗಲಾಡಿಸಲು, ಅವರಿಗೆ ದೂರದೂರಿನ ಪರೀಕ್ಷಾ ಕೇಂದ್ರದ ಪರಿಚಯ ಮಾಡಿಸಲು ಮಾ.14ರಂದು ಆಯಾಯ ಪರೀಕ್ಷಾ ಕೇಂದ್ರಗಳಲ್ಲಿ 4 ವಿಷಯಗಳಲ್ಲಿ, ಅಂತಿಮ ಪರೀಕ್ಷೆಯಷ್ಟೇ ಸಿದ್ಧತೆಗಳನ್ನು ನಡೆಸಿ, ಮುದ್ರಿತ ಪ್ರಶ್ನಾಪತ್ರಿಕೆಯೊಂದಿಗೆ ಅಣಕು ಪರೀಕ್ಷೆಯನ್ನೂ ನಡೆಸಲಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮ ಪ್ರಯೋಗವಾಗಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ