ಬ್ಯಾಡಗಿ: ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಬ್ಯಾಡಗಿ ತಾಲೂಕು ಶೇ.೮೯.೦೫ರಷ್ಟು ಫಲಿತಾಂಶ ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬ್ಯಾಡಗಿ ತಾಲೂಕು ಶೇ.೯೦ರಷ್ಟು ಸಾಧನೆ ಮಾಡಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದ ಬ್ಯಾಡಗಿ ಪ್ರಸಕ್ತ ವರ್ಷವೂ ಸಹ ತನ್ನ ಸ್ಥಾನ ಭದ್ರವಾಗಿ ಉಳಿಸಿಕೊಂಡಿದೆ. ತಾಲೂಕಿನಲ್ಲಿ ಒಟ್ಟು ೨೧೧೯ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅದರಲ್ಲಿ ೧೮೯೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಳಿದಂತೆ ೨೨೧ ಅನುತ್ತೀರ್ಣರಾಗಿದ್ದಾರೆ.ಹೇಮಂತ ಛತ್ರದ ಜಿಲ್ಲೆಗೆ ಟಾಪರ್: ಪಟ್ಟಣದ ಬಿಇಎಸ್ ಪ್ರೌಢಶಾಲೆ ವಿದ್ಯಾರ್ಥಿನಿ ಹೇಮಂತ ಉಮೇಶ ಛತ್ರದ, ಜಿಲ್ಲೆ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ (೬೧೭), ಉಳಿದಂತೆ ಮೋಟೆಬೆನ್ನೂರ ನವೋದಯ ವಿದ್ಯಾ ಸಂಸ್ಥೆಯ ತರುಣ ತಿರಕಯ್ಯ ಹಿರೇಮಠ (೬೧೬) ಜಿಲ್ಲೆಗೆ ಹಾಗೂ ತಾಲೂಕಿನಲ್ಲಿಯೂ ದ್ವಿತೀಯ ಸ್ಥಾನ ಪಡೆದುಕೊಂಡರೇ, ಸ್ಪಂದನ ಕದರಮಂಡಲಗಿ ಪ್ರೌಢಶಾಲೆಯ ನಿಖಿಲ್ ಬೆಳವಗಿ ತೃತೀಯ (೬೧೨) ಸ್ಥಾನ ಪಡೆದಿದ್ದಾರೆ.ನಿರಂತರ ಅಧ್ಯಯನ ಹಾಗೂ ಶಾಲೆಯಲ್ಲಿನ ಎಲ್ಲಾ ಶಿಕ್ಷಕರು ನೀಡಿದ ಮಾರ್ಗದರ್ಶನ ಹಾಗೂ ಪರೀಕ್ಷೆಯಲ್ಲಿ ಪ್ರಶ್ನೋತ್ತರಿಗಳಿಗೆ ಉತ್ತರಿಸುವ ಹಾಗೂ ಪರೀಕ್ಷೆಯಲ್ಲಿ ಸಮಯದ ಸದುಪಯೋಗ ಮಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನ ತಿಳಿಸಿದ್ದು ತುಂಬಾ ಸಹಕಾರಿಯಾಯಿತು, ನನ್ನ ಸಾಧನೆಯಲ್ಲಿ ಪೋಷಕರ ಸಹಕಾರವು ಸಹ ಪ್ರಮುಖ ಪಾತ್ರ ವಹಿಸಿದೆ. ಯಾವುದಕ್ಕೂ ಒತ್ತಡ ಹಾಕದೇ ಸ್ವತಂತ್ರವಾಗಿ ಓದಲು ಪ್ರೋತ್ಸಾಹ ನೀಡಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗಿದೆ ಎಂದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹೇಮಂತ ಉಮೇಶ ಛತ್ರದ ಹೇಳುತ್ತಾರೆ.ನಿರಂತರ ಅಧ್ಯಯನ ನನ್ನ ಯಶಸ್ಸಿನ ಗುಟ್ಟು, ನನ್ನ ನಿರೀಕ್ಷೆಗೆ ತಕ್ಕಂತೆ ಅಂಕಗಳು ಬಂದಿಲ್ಲ ಇನ್ನೂ ನಾಲ್ಕೈದು ಅಂಕ ಕಡಿಮೆಯಾಗಿದೆ. ಇದರಿಂದ ಮತ್ತೆ ಅಂಕ ಮರುಪರಿಶೀಲನೆಗೆ ಹಾಕಲಿದ್ದೇನೆ, ಶಾಲೆಯಲ್ಲಿನ ಶಿಕ್ಷಕರ ಪ್ರೋತ್ಸಾಹ ನನ್ನ ಸಾಧನೆಗೆ ಬುನಾದಿಯಾಗಿದೆ. ಹುಟ್ಟುತ್ತಲೆ ತಂದೆಯನ್ನು ಕಳೆದುಕೊಂಡು ಮನೆಯಲ್ಲಿ ಬಡತವಿದ್ದರೂ ಸಹ ಅದ್ಯಾವುದನ್ನೂ ನನ್ನ ಅರಿವಿಗೆ ಬರದಂತೆ ನೊಡಿಕೊಂಡ ನನ್ನ ತಾಯಿ ಹಾಗೂ ಸೋದರ ಮಾವನವರ ಪ್ರೋತ್ಸಾಹ ನನ್ನ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ದ್ವಿತೀಯ ಸ್ಥಾನ ಪಡೆದ ತರುಣ ತಿರಕಯ್ಯ ಹಿರೇಮಠ ಹೇಳುತ್ತಾರೆ.ಉತ್ತಮ ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರ ಬರಲು ಎಲ್ಲ ಶಿಕ್ಷಕರ ಪೋಷಕರ ಹಾಗೂ ಮಕ್ಕಳ ಶ್ರಮವಿದೆ, ಉಳಿದಂತೆ ತಾಲೂಕಿನಲ್ಲಿನ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿ, ಪೋಷಕರು ಹಾಗೂ ತಾಯಂದಿರ ಸಭೆ, ನಿಗದಿತ ಸಮಯಕ್ಕೆ ಪಠ್ಯ ಮುಗಿಸುವ ನಿಯಮ, ಮನೆ ಮನೆ ಭೇಟಿ, ಧಾರವಾಡದಿಂದ ಅಕಾಡೆಮಿಯಿಂದ ವಿಶೇಷ ತರಬೇತಿ. ಪರೀಕ್ಷೆಗೆ ಸೂಕ್ತ ತಯಾರಿ ಬಗೆ ಹೇಗೆ ಎಂಬುದನ್ನ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿತ್ತು, ಇದರೊಟ್ಟಿಗೆ ಎಲ್ಲ ಶಿಕ್ಷಕರು ಮಕ್ಕಳಲ್ಲಿ ಆತ್ಮಸೈರ್ಯ ತುಂಬಿದ ಪರಿಣಾಮ ಈ ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಹೇಳುತ್ತಾರೆ.