ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿ ಜಿಲ್ಲೆಯ ಫಲಿತಾಂಶ ಕುಸಿದಿದೆ. ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೇ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 25ನೇ ಸ್ಥಾನದಲ್ಲಿದ್ದರೇ, ಬೆಳಗಾವಿ ಶೈಕ್ಷಣಿಕ ಜಿಲ್ಲೆ 29ನೇ ಸ್ಥಾನದಲ್ಲಿದೆ. ಹಿಂದುಳಿದ ಜಿಲ್ಲೆ ಎನ್ನುವ ಖ್ಯಾತಿಯನ್ನು ಮುಂದುವರೆಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಫಲಿತಾಂಶ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.ಕಳೆದ ಬಾರಿ 13ನೇ ಸ್ಥಾನದಲ್ಲಿದ್ದ ಚಿಕ್ಕೋಡಿ ಈ ಬಾರಿ 25ನೇ ಸ್ಥಾನಗಳಿಸುವ ಮೂಲಕ 12ನೇ ಸ್ಥಾನ ಕುಸಿತ ಕಂಡಿದೆ. 26ನೇ ಸ್ಥಾನದಲ್ಲಿದ್ದ ಬೆಳಗಾವಿ 3ನೇ ಸ್ಥಾನ ಕುಸಿದಿದೆ.
ಶಿಕ್ಷಕರ ಕೊರೆತೆಯಿಂದಾಗಿ ಫಲಿತಾಂಶ ಕಡಿಮೆಯಾಗುತ್ತಿತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಾರಿ ಶಿಕ್ಷಕರ ಕೊರತೆ ಇಲ್ಲ. ಶಿಕ್ಷಕರ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆದರೂ ಫಲಿತಾಂಶ ಕಡಿಮೆಯಾಗಿರುವುದು ಹಲವು ಚರ್ಚೆಗೆ ಕಾರಣವಾಗಿದೆ. ಅಕ್ಷರ ಆವಿಷ್ಕಾರ ಯೋಜನೆಯಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿಯೇ ಅನೇಕ ಶಿಕ್ಷಣ ತಜ್ಞರಿಂದ ಶಿಕ್ಷಕರಿಗೆ ತರಬೇತಿ ಕೊಡಿಸಲಾಗಿದೆ. ಜಿಲ್ಲೆಯಲ್ಲಿ ಕೂಡ ಶಿಕ್ಷಕರಿಗೆ ಫಲಿತಾಂಶ ಸುಧಾರಣೆ ಮಾಡೋದು ಹೇಗೆ?, ಯಾವ ರೀತಿ ಮಕ್ಕಳಿಗೆ ಬೋಧನೆ ಮಾಡಬೇಕು. ಕಲಿಕಾ ಸಾಮಾಗ್ರಿಗಳನ್ನು ನೀಡಬೇಕು ಎನ್ನುವುದರ ಬಗ್ಗೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ ತರಬೇತಿ ಕೊಡಿಸಲಾಗಿತ್ತು. ಆದರೆ, ತರಬೇತಿ,ಅತಿಥಿ ಶಿಕ್ಷಕರ ನೇಮಕಾತಿ ಸೇರಿದಂತೆ ಯಾವುದೇ ಪ್ರಯತ್ನಗಳು ಕೂಡ ಈ ಬಾರಿ ಫಲ ನೀಡಿಲ್ಲ. ಹೀಗಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಚಿಕ್ಕೋಡಿ ಮತ್ತು ಬೆಳಗಾವಿ ಜಿಲ್ಲೆ ಹಿನ್ನೆಡೆ ಸಾಧಿಸಿವೆ.ಈ ಹಿಂದೆ ಚಿಕ್ಕೋಡಿ ಎಸ್ಸೆಸ್ಸೆಲ್ಸಿ ಫಲಿತಾಂಶ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಫಲಿತಾಂಶ ಕುಸಿಯುತ್ತಲೇ ಬಂದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸಂಪೂರ್ಣ ಕುಸಿಯಲು ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಕಣ್ಗಾವಲು ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದೇ ಕಾರಣ ಎನ್ನಲಾಗಿದೆ.
ಶಿಕ್ಷಕರ ಕೊರತೆ, ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಶಿಕ್ಷಣದ ಬಗ್ಗೆ ಮಕ್ಕಳು ಮತ್ತು ಪಾಲಕರಲ್ಲಿ ಅರಿವಿನ ಕೊರೆತೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಇದನ್ನು ನಿವಾರಿಸಲು ಕೋಟಿ ಕೋಟಿ ಹಣವನ್ನು ಶಿಕ್ಷಣ ಇಲಾಖೆ ಅಲ್ಲದೆ ಕೆಕೆಆರ್ಡಿಬಿ ಯಿಂದ ಖರ್ಚು ಮಾಡಲಾಗುತ್ತಿದೆ. ಆದರೆ, ಫಲಿತಾಂಶದಲ್ಲಿ ಮಾತ್ರ ಯಾವುದೇ ಸುಧಾರಣೆಯಾಗುತ್ತಿಲ್ಲ. ಹೀಗಾಗಿ ಪರಿಣಾಮಕಾರಿ ಭೋಧನೆಯ ತಂತ್ರಗಳನ್ನು ಹೆಚ್ಚಿಸುವುದರ ಜೊತೆಗೆ ಮಕ್ಕಳಿಗೆ ಓದಲು ಇನ್ನಷ್ಟು ಉತ್ತೇಜನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಈ ಬಾರಿ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಆಗಿರುವ ಲೋಪದೋಷಗಳನ್ನು ಹುಡುಕಿ ಸರಿಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.ರಾಹುಲ ಶಿಂಧೆ,
ಸಿಇಒಒ ಜಿಪಂ. ಬೆಳಗಾವಿ.