ಕನ್ನಡಪ್ರಭ ವಾರ್ತೆ ಮಂಗಳೂರು
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೆಲವು ವರ್ಷಗಳ ಬಳಿಕ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮೊದಲೆರಡು ಸ್ಥಾನಗಳನ್ನು ಪಡೆಯುವುದರೊಂದಿಗೆ ಟಾಪರ್ಸ್ ಆಗಿ ಹೊರಹೊಮ್ಮಿವೆ. ಉಡುಪಿ ಜಿಲ್ಲೆ ಶೇ.94 ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ಜಿಲ್ಲೆ ಶೇ. 92.12 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.ಎಸ್ಸೆಸ್ಸೆಲ್ಸಿಯಲ್ಲಿ ಕಳೆದ ಆರು ವರ್ಷಗಳಿಂದ ದ.ಕ. ಜಿಲ್ಲೆ ಕಳಪೆ ಸಾಧನೆ ಮಾಡಿತ್ತು. ಕಳೆದ ವರ್ಷವಂತೂ ದ.ಕ. ಜಿಲ್ಲೆ 17ನೇ ಸ್ಥಾನಕ್ಕೆ ಕುಸಿದಿತ್ತು. ಇಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಹಲವೆಡೆಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವತಃ ಸಿಎಂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಕೊನೆಗೂ ಈ ಬಾರಿ ಉತ್ತಮ ಸಾಧನೆ ದಾಖಲಿಸುವುದರೊಂದಿಗೆ ಹಳೆಯ ಸ್ಥಾನವನ್ನು ಮರಳಿ ತೆಕ್ಕೆಗೆ ತೆಗೆದುಕೊಂಡಿದೆ.ಬೆಳ್ತಂಗಡಿಯ ಚಿನ್ಮಯ್ ಟಾಪ್-2: ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. 624 ಅಂಕ ಗಳಿಸಿ ರಾಜ್ಯ ಟಾಪರ್ಸ್ ಲಿಸ್ಟ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಚಿನ್ಮಯ್ ಅವರ ತಂದೆ ಗಣೇಶ ರಾಮಚಂದ್ರ ಭಟ್ ಉಪನ್ಯಾಸಕರಾಗಿದ್ದು, ತಾಯಿ ಮಾಲಿನಿ ಹೆಗ್ಡೆ ಸರ್ಕಾರಿ ಶಾಲೆಯ ಶಿಕ್ಷಕಿ.
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ 29,701 ಮಂದಿ ಪರೀಕ್ಷೆ ಬರೆದಿದ್ದು, 27,360 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 92.12 ಫಲಿತಾಂಶ ದಾಖಲಿಸಿದೆ.ಬ್ಲಾಕ್‌ವಾರು ಫಲಿತಾಂಶ: ಬಂಟ್ವಾಳ ತಾಲೂಕಿನಲ್ಲಿ ಶೇ. 89.79 ಫಲಿತಾಂಶ ಬಂದಿದ್ದರೆ, ಬೆಳ್ತಂಗಡಿಯಲ್ಲಿ ಶೇ. 94.18, ಮಂಗಳೂರು ಉತ್ತರದಲ್ಲಿ ಶೇ.90.81, ಮಂಗಳೂರು ದಕ್ಷಿಣದಲ್ಲಿ ಶೇ. 91.59, ಮೂಡುಬಿದಿರೆಯಲ್ಲಿ ಶೇ.94.27, ಪುತ್ತೂರಿನಲ್ಲಿ ಶೇ.94.47, ಸುಳ್ಯದಲ್ಲಿ ಶೇ.92.43 ಫಲಿತಾಂಶ ದಾಖಲಾಗಿದೆ.
270 ಶಾಲೆಗಳಿಗೆ ಶೇ.100 ಫಲಿತಾಂಶ: ಜಿಲ್ಲೆಯ ಒಟ್ಟು 527 ಶಾಲೆಗಳ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರೆ, ಅವುಗಳಲ್ಲಿ 270 ಶಾಲೆಗಳಿಗೆ ಶೇ.100 ಫಲಿತಾಂಶ ದೊರೆತಿದೆ. ಇವುಗಳ ಪೈಕಿ 84 ಸರ್ಕಾರಿ ಶಾಲೆಗಳು ಎನ್ನುವುದು ಗಮನಾರ್ಹ. ಉಳಿದಂತೆ 36 ಅನುದಾನಿತ ಹಾಗೂ 150 ಅನುದಾನರಹಿತ ಶಾಲೆಗಳು. ಬಂಟ್ವಾಳದ 47 ಶಾಲೆಗಳು, ಬೆಳ್ತಂಗಡಿಯ 43, ಮಂಗಳೂರು ಉತ್ತರದ 49, ಮಂಗಳೂರು ದಕ್ಷಿಣದ 47, ಮೂಡುಬಿದಿರೆಯ 12, ಪುತ್ತೂರಿನ 55, ಸುಳ್ಯದ 17 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ.ವಿಷಯವಾರು ಫಲಿತಾಂಶ:ಜಿಲ್ಲೆಯಲ್ಲಿ ಪ್ರಥಮ ಭಾಷೆ ಪರೀಕ್ಷೆಯಲ್ಲಿ ಶೇ.95.80 ಫಲಿತಾಂಶ ದೊರೆತಿದ್ದರೆ, ದ್ವಿತೀಯ ಭಾಷಾ ಪರೀಕ್ಷೆಯಲ್ಲಿ ಶೇ.94.45, ತೃತೀಯ ಭಾಷೆಯಲ್ಲಿ ಶೇ.95.64, ಗಣಿತದಲ್ಲಿ ಶೇ.94.92, ವಿಜ್ಞಾನದಲ್ಲಿ ಶೇ.92.43, ಸಮಾಜ ವಿಜ್ಞಾನದಲ್ಲಿ ಶೇ.92.98 ಫಲಿತಾಂಶ ದೊರೆತಿದೆ.
ಕನ್ನಡ ಮಾಧ್ಯಮ ಟಾಪರ್ಸ್‌ಜಿಲ್ಲೆಯ ಕನ್ನಡ ಮಾಧ್ಯಮದಲ್ಲಿ ಬೆಳ್ತಂಗಡಿ ಕಲ್ಮಂಜದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ತನುಶ್ರೀ (617), ಮೂಡುಬಿದಿರೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಪುತ್ತುರಾಜ್ ರಾಮಕೃಷ್ಣ ಚಿನಗೆ (617), ಸುಳ್ಯ ಗುತ್ತಿಗಾರಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನ ನಮಿತಾ ಮರಿಯಾ ಕ್ಯಾಸ್ತಲಿನೊ (617), ಮೂಡುಬಿದಿರೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುರುಗೇಶ್ ಬಿರಾದಾರ್ ಪಾಟೀಲ್ (616), ಬೆಳ್ತಂಗಡಿ ಸುಲ್ಕೇರಿಯ ಶ್ರೀರಾಮ ಹೈಸ್ಕೂಲ್‌ನ ತ್ರಿಶಾ (615), ಪುತ್ತೂರು ಕೆಯ್ಯೂರು ಮಾಡಾವಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸೌಜನ್ಯಾ ರೈ (615), ಕಲ್ಲಡ್ಕ ಶ್ರೀರಾಮ ಹೈಸ್ಕೂಲ್‌ನ ಭೂಷಣ್ (614), ಕಡೇಶ್ವಾಲ್ಯ ಸರ್ಕಾರಿ ಹೈಸ್ಕೂಲ್‌ನ ಮನ್ಮಿತಾ (614), ಮೂಡುಬಿದಿರೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮಲ್ಲಿಕಾರ್ಜುನ್ ರಾಮಲಿಂಗಯ್ಯ ಮಠಪತಿ (614) ಹಾಗೂ ಗೋಪಾಲ ಕೆಂಚಪ್ಪ ಸುಣಧೋಳಿ (614) ಟಾಪರ್ಸ್ ಆಗಿ ಹೊರಹೊಮ್ಮಿದ್ದಾರೆ.ಇಂಗ್ಲಿಷ್ ಮಾಧ್ಯಮ ಟಾಪರ್ಸ್‌ಇಂಗ್ಲಿಷ್ ಮಾಧ್ಯಮದಲ್ಲಿ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯ ಚಿನ್ಮಯ್ ಜಿ.ಕೆ. (624), ಮಂಗಳೂರು ಉತ್ತರದ ಸೈಂಟ್ ಜೋಸೆಫ್ ಶಾಲೆಯ ಅಭಿಷೇಕ್ ಹಣಮಂತ ಗೌಡರ್ (622), ಬಂಟ್ವಾಳ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್‌ನ ಗೌತಮ್ ಎಂ. (621), ಪುತ್ತೂರು ವಿವೇಕಾನಂದ ಇಂಗ್ಲಿಷ್ ಮಿಡಿಯಂ ಸ್ಕೂಲ್‌ನ ಶ್ರೀಯಾ (621), ವಿಟ್ಲ ಜೇಸಿಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮನೋನ್ಮಯೀ ಕೆ. (620), ಬಂಟ್ವಾಳ ಎಸ್‌ವಿಎಸ್ ಹೈಸ್ಕೂಲ್‌ನ ಅಭಿರಾಮ್ ವಿ. ಭಟ್ (620), ಮಂಗಳೂರು ಕೆನರಾ ಹೈಸ್ಕೂಲ್‌ನ ಅಕ್ಷಯ ಮಲ್ಯ (620), ವ್ಯಾಸಮಹರ್ಷಿ ವಿದ್ಯಾಪೀಠದ ಭಾರ್ಗವಿ ಮಯ್ಯ ಯು.ಎನ್. (620), ಶ್ರೀ ರಾಮಕೃಷ್ಣ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ತ್ರಿಷಾ ಎಸ್. (620), ಮೂಡುಬಿದಿರೆ ಎಕ್ಸಲೆಂಟ್ ಸ್ಕೂಲ್‌ನ ಆದಿತ್ಯ ಆರ್. ಪುಂಚಿತ್ತಾಯ (620), ಪುತ್ತೂರು ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯ ಬಾಲಾಜಿ (620), ಸುಳ್ಯ ರೋಟರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಣಮ್ಯ ಎನ್. ಆಳ್ವ (620) ಟಾಪರ್ಸ್ ಆಗಿದ್ದಾರೆ.