ಎಸ್ಸೆಸ್ಸೆಲ್ಸಿ ಫಲಿತಾಂಶ: ಗಣಿಜಿಲ್ಲೆ ಬಳ್ಳಾರಿ 29ನೇ ಸ್ಥಾನದಿಂದ 24ಕ್ಕೆ ಜಿಗಿತ

KannadaprabhaNewsNetwork |  
Published : Apr 24, 2026, 12:45 AM IST
ಎಂ.ಜುಹಾ ಫಾತಿಮಾ | Kannada Prabha

ಸಾರಾಂಶ

ಟಾಪ್ 15ರಲ್ಲಾದರೂ ಸ್ಥಾನ ಪಡೆಯುತ್ತೇವೆ ಎಂಬ ಉತ್ಸುಕದಲ್ಲಿದ್ದ ಜಿಲ್ಲಾ ಶಿಕ್ಷಣ ಇಲಾಖೆಯ ನಿರೀಕ್ಷೆ ಹುಸಿಯಾಗಿದೆ.

ಬಳ್ಳಾರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಣಿಜಿಲ್ಲೆ ಬಳ್ಳಾರಿ ಈ ಬಾರಿ ರಾಜ್ಯಕ್ಕೆ 24ನೇ ಸ್ಥಾನಕ್ಕೆ ತೃಪ್ತಿಕೊಂಡಿದೆ. ಟಾಪ್ 15ರಲ್ಲಾದರೂ ಸ್ಥಾನ ಪಡೆಯುತ್ತೇವೆ ಎಂಬ ಉತ್ಸುಕದಲ್ಲಿದ್ದ ಜಿಲ್ಲಾ ಶಿಕ್ಷಣ ಇಲಾಖೆಯ ನಿರೀಕ್ಷೆ ಹುಸಿಯಾಗಿದೆ.

ರಾಜ್ಯದ ಪಟ್ಟಿಯಲ್ಲಿ ಬಳ್ಳಾರಿ ಜಿಲ್ಲೆ ಕಳೆದ ಬಾರಿ 29ನೇ ಸ್ಥಾನದಲ್ಲಿತ್ತು. ಈ ಸಲ ಒಂದಷ್ಟು ಜಿಗಿತ ಕಂಡಿದೆ ಎಂಬುದಷ್ಟೇ ಸಮಾಧಾನದ ಸಂಗತಿಯಾಗಿದೆ. ಜಿಲ್ಲೆಯ ಪೈಕಿ ಸಂಡೂರು ತಾಲೂಕು ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಬಳ್ಳಾರಿ ಪೂರ್ವ ವಲಯ ಕೊನೆಯ ಸ್ಥಾನದಲ್ಲಿದೆ. ಎಂದಿನಂತೆ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಹಾಗೂ ಬಾಲಕಿಯರು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಜಿಲ್ಲೆಯ ಐದು ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ 337ಪ್ರೌಢ ಶಾಲೆಗಳಿದ್ದು, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 18995 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು, ಇದರಲ್ಲಿ17733 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.93.36ರಷ್ಟು ಫಲಿತಾಂಶ ಪಡೆದಿದೆ. ಈ ಪೈಕಿ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಒಟ್ಟು 9289 ವಿದ್ಯಾರ್ಥಿಗಳಲ್ಲಿ 8711 (ಶೇ.93.78), ಅನುದಾನಿತ 2526ರಲ್ಲಿ 2275 (ಶೇ.90.06), ಅನುದಾನ ರಹಿತ 7183 ವಿದ್ಯಾರ್ಥಿಗಳಲ್ಲಿ 6747 (ಶೇ.93.34) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಆಂಗ್ಲ, ಕನ್ನಡ, ತೆಲುಗು, ಉರ್ದು ಮಾಧ್ಯಮ ಪೈಕಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳೇ ಹೆಚ್ಚು ಫಲಿತಾಂಶ ಪಡೆದಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಶೇ.94.90ರಷ್ಟು ಫಲಿತಾಂಶ ಪಡೆದರೆ, ಕನ್ನಡ ಮಾಧ್ಯಮ 92.15ರಷ್ಟು ಫಲಿತಾಂಶ ಪಡೆದಿದೆ. ಇದರ ಹೊರತಾಗಿ ತೆಲುಗು ಮಾಧ್ಯಮದಲ್ಲಿ ಅಭ್ಯಾಸ ಮಾಡುತ್ತಿದ್ದ 17 ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆ ಹೊಂದಿ ಶೇ.100ರಷ್ಟು ಫಲಿತಾಂಶ, ಉರ್ದು ಮಾಧ್ಯಮದಲ್ಲಿ ಒಟ್ಟು 126 ವಿದ್ಯಾರ್ಥಿಗಳಲ್ಲಿ 122 ಉತ್ತೀರ್ಣರಾಗಿ ಶೇ.96.83ರಷ್ಟು ಫಲಿತಾಂಶ ಪಡೆದಿದೆ.

ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸಂಡೂರು ತಾಲೂಕಿನಲ್ಲಿ 3,286 ವಿದ್ಯಾರ್ಥಿಗಳಲ್ಲಿ 3172 ಉತ್ತೀರ್ಣರಾಗಿದ್ದು, ಶೇ.96.53ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆಗೆ ಮೊದಲನೇ ಸ್ಥಾನ ಪಡೆದುಕೊಂಡಿದೆ. ಸಿರುಗುಪ್ಪ ತಾಲೂಕಿನಲ್ಲಿ 3594ವಿದ್ಯಾರ್ಥಿಗಳಲ್ಲಿ3,378ಮಕ್ಕಳು ತೇರ್ಗಡೆಯಾಗಿ ಶೇ.93.99ರಷ್ಟು ಫಲಿತಾಂಶ ಪಡೆದು ಎರಡನೇ ಸ್ಥಾನ, ಬಳ್ಳಾರಿ ಪಶ್ಚಿಮ 7426 ವಿದ್ಯಾರ್ಥಿಗಳಲ್ಲಿ 6,860 ವಿದ್ಯಾರ್ಥಿಗಳು ಪಾಸ್‌ ಆಗಿದ್ದು ಶೇ.92.38 ಫಲಿತಾಂಶದೊಂದಿಗೆ 3ನೇ ಸ್ಥಾನ ಹಾಗೂ ಬಳ್ಳಾರಿ ಪೂರ್ವ ವಲಯದಲ್ಲಿ 4692 ವಿದ್ಯಾರ್ಥಿಗಳಲ್ಲಿ 4,323 ಉತ್ತೀರ್ಣರಾಗಿದ್ದು ಶೇ.92.14ರಷ್ಟು ಫಲಿತಾಂಶ ಪಡೆದು ನಾಲ್ಕನೇ ಸ್ಥಾನ ಪಡೆದು ಕೊನೆ ಸ್ಥಾನದಲ್ಲಿದೆ. ಗ್ರಾಮೀಣ ಭಾಗದಿಂದ ಒಟ್ಟು 9581ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 9,044 ತೇರ್ಗಡೆಯಾಗಿದ್ದಾರೆ. ನಗರ ಭಾಗದಿಂದ 9,417ಮಕ್ಕಳು ಪರೀಕ್ಷೆಗೆ ಕುಳಿತಿದ್ದು 8,689 ಉತ್ತೀರ್ಣರಾಗಿದ್ದಾರೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಒಟ್ಟು 10,044 ವಿದ್ಯಾರ್ಥಿನಿಯರಲ್ಲಿ 9,583 ಉತ್ತೀರ್ಣಗೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ ಒಟ್ಟು 8954 ರಲ್ಲಿ 8150 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಪೈಕಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು

1) ಎಂ.ಜುಹಾ ಫಾತಿಮಾ (620 ಅಂಕಗಳು), ಶ್ರೀವಿದ್ಯಾಸಾಗರ ವಸತಿ ಶಾಲೆ, ಕಂಪ್ಲಿ.

2) ಕೆ.ಎಂ.ಅನು (617) ಮೊರಾರ್ಜಿ ದೇಸಾಯಿ ಶಾಲೆ, ಯರಗುಡಿ, ಬಳ್ಳಾರಿ ತಾಲೂಕು.

3) ರಾಧಿಕಾ (617) ತಿರುಮಲ ಪ್ರೌಢಶಾಲೆ, ಗೋಡೆಹಾಳು, ಬಳ್ಳಾರಿ ತಾಲೂಕು.

4) ರೇವಣಸಿದ್ದಪ್ಪ (617), ತಿರುಮಲ ಪ್ರೌಢಶಾಲೆ, ಗೋಡೆಹಾಳು, ಬಳ್ಳಾರಿ ತಾಲೂಕು.

5) ಸುಹಾಂತಾಜ್‌ (617) ಮೊರಾರ್ಜಿ ದೇಸಾಯಿಶಾಲೆ, ಸುಶೀಲಾನಗರ, ಸಂಡೂರು ತಾಲೂಕು.

6) ಜಿ.ಯಶ್ವಂತ್ ( 616) ಗಾಯತ್ರಿ ಪ್ರೌಢಶಾಲೆ, ದಮ್ಮೂರು, ಕುರುಗೋಡು ತಾಲೂಕು.

7) ವಿಷ್ಣುಪ್ರಿಯ ಎಚ್.ಎಂ. (616) ವಿಜಡಮ್‌ಲ್ಯಾಂಡ್ ಶಾಲೆ, ಸಂಗನಕಲ್ಲು, ಬಳ್ಳಾರಿ ತಾಲೂಕು.

ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆಯಿಟ್ಟುಕೊಂಡಿದ್ದೆವು. ಫಲಿತಾಂಶ ಸುಧಾರಣೆಗೆ ಸಾಕಷ್ಟು ಕ್ರಮ ವಹಿಸಿದ್ದೆವು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಡೆ ವಿಶೇಷ ಗಮನ ಹರಿಸಿ ತರಬೇತಿ ನೀಡಿದ್ದೆವು. ಆದಾಗ್ಯೂ ಜಿಲ್ಲೆಯ ಫಲಿತಾಂಶ ಹೆಚ್ಚು ಖುಷಿ ನೀಡಿಲ್ಲ. ಬರುವ ವರ್ಷವಾದರೂ ಉತ್ತಮ ಫಲಿತಾಂಶಕ್ಕೆ ಶ್ರಮಿಸಲಾಗುವುದು ಎನ್ನುತ್ತಾರೆ ಡಿಡಿಪಿಐ ಬಿ.ಉಮಾದೇವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಯಿಂದ ನಾಳೆಯಿಂದ ಐದು ದಿನ ಇನ್‌ಕಾಮೆಕ್ಸ್‌
ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದು ಗೆದ್ದ ಬಡ ಮಕ್ಕಳು !