ಎಸ್ಸೆಸ್ಸೆಲ್ಸಿ ಫಲಿತಾಂಶ ನಾಚಿಕೆತರುವಂತಿದೆ

KannadaprabhaNewsNetwork | Published : May 14, 2025 2:05 AM
Follow Us

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ನಮ್ಮ ಜಿಲ್ಲೆಯ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶವು ತೀವ್ರ ನಾಚಿಕೆ ತರುವಂತಹದ್ದಾಗಿದೆ. ಈ ಹಿನ್ನಡೆಯ ಕುರಿತು ಶೈಕ್ಷಣಿಕ ವಲಯದಲ್ಲಿರುವ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಈ ಹಿಂದೆ ನಕಲು ಮಾಡುವುದರಿಂದಲೇ ಜಿಲ್ಲೆಯ ಫಲಿತಾಂಶ ಉತ್ತಮವಾಗಿ ಬರುತಿತ್ತು ಎಂಬುದನ್ನು ಕೇಳಿದಾಗ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ತೀವ್ರ ಆತಂಕವಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ನಮ್ಮ ಜಿಲ್ಲೆಯ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶವು ತೀವ್ರ ನಾಚಿಕೆ ತರುವಂತಹದ್ದಾಗಿದೆ. ಈ ಹಿನ್ನಡೆಯ ಕುರಿತು ಶೈಕ್ಷಣಿಕ ವಲಯದಲ್ಲಿರುವ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಈ ಹಿಂದೆ ನಕಲು ಮಾಡುವುದರಿಂದಲೇ ಜಿಲ್ಲೆಯ ಫಲಿತಾಂಶ ಉತ್ತಮವಾಗಿ ಬರುತಿತ್ತು ಎಂಬುದನ್ನು ಕೇಳಿದಾಗ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ತೀವ್ರ ಆತಂಕವಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಿವಿಧ ಘಟಕಗಳ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಜಿಟಿಡಿಸಿ ಕಾಲೇಜು ಇಂಡಿಯಲ್ಲಿ ಆರಂಭವಾಗುತ್ತಿದೆ, ಇಂತಹ ಹತ್ತಾರು ಶೈಕ್ಷಣಿಕ ಕಾರ್ಯಗಳು ಇಂಡಿಯಲ್ಲಿ ನಡೆದಿವೆ. ಅಲ್ಲದೇ, ಭೀಮೆಯ ನೀರು ಮತ್ತು ಕೃಷ್ಣೆಯ ನೀರು ಇಂಡಿ ಪಟ್ಟಣಕ್ಕೆ ಬರುತ್ತಿದ್ದು, ಎರಡು ನದಿಗಳ ನೀರನ್ನು ಬಳಕೆ ಮತ್ತು ಕುಡಿಯಲು ಸಿಗುತ್ತಿರುವುದು ನಮ್ಮ ಪೂರ್ವ ಜನ್ಮದ ಒಂದು ಭಾಗ್ಯವೇ ಎಂದು ಸ್ಮರಿಸಿದರು.ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರೊ.ಗುರುದೇವ ಬಳುಂಡಗಿ ಉಪನ್ಯಾಸ ನೀಡಿ, ದೇಶ ಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಹತ್ತಾರು ಕಾರ್ಯಕ್ರಮಗಳನ್ನು ನಡೆಸುವ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು. ಅಲ್ಲದೇ, ದೇಶದ ಭದ್ರತೆ, ಏಳ್ಗಗೆ ವಿದ್ಯಾರ್ಥಿ ಸಮುದಾಯದ ಪಾತ್ರ ಬಹಳ ದೊಡ್ಡದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಾಂಶುಪಾಲ ಪ್ರೊ.ಆರ್.ಎಚ್.ರಮೇಶ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮುಂದಿನ ವರ್ಷಗಳಲ್ಲಿ ಸ್ನಾತಕೋತ್ತರ ತರಗತಿಗಳು ಪ್ರಾರಂಭವಾಗಲಿವೆ. ಅಲ್ಲದೇ ಪ್ರಧಾನ ಮಂತ್ರಿ ಉಷಾ ಯೋಜನೆಗೆ ಈ ಕಾಲೇಜು ಆಯ್ಕೆಯಾಗಿದ್ದು, ಅದಕ್ಕಾಗಿ ಕಾಲೇಜಿಗೆ ₹ 5ಕೋಟಿ ಅನುದಾನವು ಸಿಗಲಿದೆ ಎಂದು ತಿಳಿಸಿದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಇಲಿಯಾಸ ಬೋರಾಮಣಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಪುರಸಭೆಯ ಅಧ್ಯಕ್ಷ ಅಂಬಾಜಿ ರಾಠೋಡ, ಜಟ್ಟೆಪ್ಪ ರವಳಿ, ಭೀಮಣ್ಣ ಕೌಲಗಿ ಮೊದಲಾದವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದರು. ಈ ವೇಳೆ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಯಿಂದ ಮೃತಪಟ್ಟಿರುವ ಪ್ರವಾಸಿಗರಿಗೆ ಹಾಗೂ ಆಪರೇಷನ್‌ ಸಿಂದೂರನಲ್ಲಿ ವೀರ ಮರಣ ಹೊಂದಿದ ಹುತಾತ್ಮರಾದ ಸೈನಿಕರಿಗೆ ಸಂತಾಪ ಸೂಚಿಸಿ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕ್ರೀಡಾ ವಿಭಾಗದ ಡಾ.ವಿಜಯ ಮಹಾಂತೇಶ ದೇವರ, ಗ್ರಂಥಪಾಲಕ ತಿಪ್ಪಣ್ಣ ವಾಗ್ದಾಳ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಸಂಗಮೇಶ ಹಿರೇಮಠ, ಎನ್.ಎಸ್.ಎಸ್‌ ಘಟಕದ ಸಂಚಾಲಕ ಪಿ.ಎಸ್.ದೇವರ ಸೇರಿದಂತೆ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು. ಐಕ್ಯೂಎಸಿ ಘಟಕದ ಸಂಚಾಲಕ ರವಿಕುಮಾರ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಕುಮಾರ ಬಿರಾದಾರ ಸ್ವಾಗತಿಸಿದರು, ಸುರೇಖಾ ರಾಠೋಡ ವಂದಿಸಿದರು. ಎಸ್.ಜೆ.ಮಾಡ್ಯಾಳ ಕಾರ್ಯಕ್ರಮ ನಿರೂಪಿಸಿದರು.