ಮುಂಡಗೋಡ: ತಾಲೂಕಿನಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ತೀವ್ರ ಕುಸಿತ ಕಂಡಿದ್ದು, ಪ್ರಮುಖವಾಗಿ ತಾಲೂಕಿನಲ್ಲಿಯೇ ಅತಿಹೆಚ್ಚು ಮಕ್ಕಳನ್ನು ಹೊಂದಿರುವ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಕೇವಲ ಶೇ.೩೪.೩೯ ಫಲಿತಾಂಶ ಪಡೆದು ತೀವ್ರ ಕಳಪೆ ಸಾಧನೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿರುವುದು ತಾಲೂಕಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.ತಾಲೂಕಿನ ೨೦ ಪ್ರೌಢಶಾಲೆಗಳ ಪೈಕಿ ಯಾವ ಶಾಲೆಯೂ ಈ ಬಾರಿ ನೂರರಷ್ಟು ಫಲಿತಾಂಶ ದಾಖಲಿಸದೇ ಇರುವುದು ಗಮನಾರ್ಹ ಸಂಗತಿ. ಮುಂಡಗೋಡ ಪಟ್ಟಣದ ಮೌಲಾನ ಅಜಾದ ಪ್ರೌಢಶಾಲೆ ಶೇ.೯೭.೫೦, ಇಂದಿರಾಗಾಂಧಿ ವಸತಿ ನಿಲಯ ಪಾಳಾ ಶೇ.೯೭.೩೭, ಮುಂಡಗೋಡದ ಬ್ಲೂಮಿಂಗ್ ಬಡ್ಸ್ ಆಂಗ್ಲ ಮಾಧ್ಯಮ ಶಾಲೆ ಶೇ.೯೪.೪೪, ಅಂದಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶೇ.೯೩.೮೮, ಹುನಗುಂದ ಸರ್ಕಾರಿ ಪ್ರೌಢಶಾಲೆ ೮೭.೮೦ ರಷ್ಟು ಫಲಿತಾಂಶ ಪಡೆದಿದ್ದು, ಈ ಐದು ಪ್ರೌಢಶಾಲೆಗಳು ಮಾತ್ರ ಎ ಗ್ರೇಡ್ ಪಡೆದುಕೊಂಡಿವೆ.
ಹುನಗುಂದ ಸರ್ಕಾರಿ ಪ್ರೌಢಶಾಲೆ, ಕರಗಿನಕೊಪ್ಪ ಲೊಯೋಲಾ ಪ್ರೌಢಶಾಲೆ, ಕಾತೂರ ಸರ್ಕಾರಿ ಪ್ರೌಢಶಾಲೆ, ಪಾಳಾ ಸರ್ಕಾರಿ ಉರ್ದು ಪ್ರೌಢಶಾಲೆ, ಮುಂಡಗೋಡದ ಲೋಟಸ ಹೆಣ್ಣು ಮಕ್ಕಳ ಪ್ರೌಢಶಾಲೆ, ಮೈನಳ್ಳಿ ಸರ್ಕಾರಿ ಪ್ರೌಢಶಾಲೆ, ಪಾಳಾ ಪಾಳಾ ಮಹಾತ್ಮಾಜಿ ಪ್ರೌಢಶಾಲೆ, ಚಿಗಳ್ಳಿ ಸರ್ಕಾರಿ ಪ್ರೌಢ ಶಾಲೆ, ಮುಂಡಗೋಡ ರೋಟರಿ ಕನ್ನಡ ಮಾಧ್ಯಮ ಪ್ರೌಢಶಾಲೆ, ಮಳಗಿ ಕೆಪಿಎಸ್ (ಪ್ರೌಢಶಾಲಾ ವಿಭಾಗ) ಸೇರಿದಂತೆ ೧೦ ಪ್ರೌಢ ಶಾಲೆಗಳು ಬಿ ಗ್ರೇಡ್ ಹೊಂದಿದೆ.ಮುಂಡಗೋಡ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ (ಪ್ರೌಢಶಾಲಾ ವಿಭಾಗ), ದಸ್ತಗಿರಿಯ ಪ್ರೌಢಶಾಲೆ, ಆದಿಜಾಂಬವ ಪ್ರೌಢಶಾಲೆ ಜ್ಞಾನ ಪ್ರಜ್ಞಾ ಪ್ರೌಢಶಾಲೆ ಹಾಗೂ ಇಂದೂರ ಗ್ರಾಮದ ಅನುದಾನಿತ ಪ್ರೌಢಶಾಲೆ ಸೇರಿದಂತೆ ೫ ಪ್ರೌಢಶಾಲೆಗಳು ಸಿ ಗ್ರೇಡ್ ಪಡೆದುಕೊಂಡಿವೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ನೆಪದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಸಕಲ ಸಿದ್ಧತೆ ನಡೆಸಿದ್ದೇವೆ. ಮಕ್ಕಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ ಎಂದು ಪ್ರೌಢ ಶಾಲೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ದೊಡ್ಡದಾಗಿ ಹೇಳಿಕೊಂಡಿದ್ದರು. ಇದರಿಂದ ಈ ಬಾರಿ ಉತ್ತಮ ಫಲಿತಾಂಶ ಬರಲಿದೆ ಎಂಬ ನಿರೀಕ್ಷೆ ಮುಂಡಗೋಡ ಜನರಲ್ಲಿ ಮೂಡಿತ್ತು. ಆದರೆ ಫಲಿತಾಂಶ ಮಾತ್ರ ಬಿಗ್ ಜೀರೋ ಎಂಬುದನ್ನು ಎಸ್.ಎಸ್.ಎಲ್.ಸಿ. ಫಲಿತಾಂಶ ಸಾಬೀತುಪಡಿಸಿದೆ.ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದರು. ಆದರೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಮಾತ್ರ ತೀವ್ರ ಕುಸಿತ ಕಂಡಿದೆ. ಇದಕ್ಕೆ ಕಾರಣ ಯಾರು? ಎಂಬ ಪ್ರಶ್ನೆ ಉದ್ಭವಿಸಿದೆ.
ತಾಲೂಕಿನಲ್ಲಿ ಕೆಲವಷ್ಟು ಶಿಕ್ಷಕರಿಗೆ ಶಿಕ್ಷಣದ ಅರಿವೇ ಇಲ್ಲ. ಮಕ್ಕಳಿಗೆ ಪಾಠ ಮಾಡುವುದಕ್ಕಿಂತ ಜಾಸ್ತಿ ರಾಜಕೀಯ ಮಾಡುತ್ತ ತಿರುಗಾಡುತ್ತಾರೆ. ಅಂತಹ ಶಿಕ್ಷಕರಿಂದಲೇ ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ ಎಂಬ ಆರೋಪ ಕೂಡ ಸಾರ್ವಜನಿಕರಿಂದ ಕೆಳಿಬರುತ್ತಿದೆ. ಅಂತಹ ಶಿಕ್ಷಕರನ್ನು ಸರಿದಾರಿಗೆ ತರುವ ಪ್ರಯತ್ನ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ನಡೆಯಬೇಕಿದೆ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.ಕಳೆದ ಬಾರಿ ಶೇ.೮೬ ಫಲಿತಾಂಶ ಪಡೆದು ನಾಲ್ಕನೇ ಸ್ಥಾನದಲ್ಲಿದ್ದ ನಾವು ಈ ಬಾರಿ ಇನ್ನು ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆ ಇತ್ತು. ಆದರೆ ಈ ಬಾರಿ ತಾಲೂಕಿನ ಫಲಿತಾಂಶ ಕೊನೆಯ ಸ್ಥಾನಕ್ಕೆ ಹೋಗಿರುವುದು ತೀವ್ರ ಬೇಸರ ಮೂಡಿಸಿದೆ ಎನ್ನುತ್ತಾರೆ ಬಿಇಒ ಜಿ.ಸುಮಾ.