ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ತಮ್ಮ ಗೃಹ ಕಚೇರಿ ಶಿವ ಪಾರ್ವತಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಇದೇ ವೇಳೆ ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾದ ಉತ್ತರ, ದಕ್ಷಿಣ ಕ್ಷೇತ್ರಗಳ ಮತದಾರರಿಗೆ ಅಭಿನಂದಿಸಲಾಗುವುದು ಎಂದರು.
ಮಹಾ ನಗರದಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಅದು ಎಸ್.ಎಸ. ಮಲ್ಲಿಕಾರ್ಜುನರ ಹಬ್ಬ ಎಂಬುದಾಗಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಆಚರಿಸುತ್ತಿದ್ದಾರೆ. ಈಗಾಗಲೇ ಸಮಾರಂಭಕ್ಕೆ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಗೋ ಶಾಲೆಗಳಿಗೆ ಮೇವು ವಿತರಣೆಯೊಂದಿಗೆ ಎಸ್‌ಎಸ್‌ಎಂ ಜನ್ಮ ದಿನಾಚರಣೆಗೆ ಸಮಾಜಮುಖಿ ಕಾರ್ಯ ಶುರುವಾಗಿದೆ. ನಿತ್ಯವೂ ವಿವಿಧ ಭಾಗಗಳಲ್ಲಿ ಕಾರ್ಯಕ್ರಮ ನಡೆಯುತ್ತಿವೆ ಎಂದು ಅವರು ಹೇಳಿದರು.ಎಂಸಿಸಿ ಬಿ ಬ್ಲಾಕ್‌ನ ಐಎಂಎ ಸಭಾಂಗಣ, ವಿನೋಬ ನಗರದ ಶ್ರೀ ಶಂಭುಲಿಂಗೇಶ್ವರ ಕಲ್ಯಾಣ ಮಂಟಪ ಸೇರಿದಂತೆ ಪಾಲಿಕೆಯ 16, 17, 22 ಹಾಗೂ 24ನೇ ವಾರ್ಡ್‌ನ ಸಮಸ್ತ ನಾಗರೀಕರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಎಸ್‌ಎಸ್ ಮಲ್ಲಿಕಾರ್ಜುನರ 55ನೇ ದಿನದ ಅಂಗವಾಗಿ ಕಳೆದ ವರ್ಷ 5,555 ಯುನಿಟ್ ರಕ್ತದಾನ ಸಂಗ್ರಹ ಅಭಿಯಾನದಲ್ಲಿ ಈವರೆಗೆ 3500 ಯುನಿಟ್ ಸಂಗ್ರಹಿಸಿ, ಅಗತ್ಯವಿದ್ದವರಿಗೆ ಉಚಿತವಾಗಿ ನೀಡಲಾಗಿದೆ. ಗುರಿಯಂತೆ 5555 ಯುನಿಟ್ ಸಂಗ್ರಹವಾಗುವವರೆಗೂ ಅಭಿಯಾನ ಮುಂದುವರಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಮುಂದಿನ ದಿನಗಳಲ್ಲಿ ದಾವಣಗೆರೆ ನಗರ, ಜಿಲ್ಲೆಗೆ ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಗಾರ್ಮೆಂಟ್ಸ್ ಗಳನ್ನು ತರುವ ಬಗ್ಗೆ ಗಮನ ಹರಿಸಲಾಗುವುದು. ರೈತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು, ಕೂಲಿ ಕಾರ್ಮಿಕರು, ವಿಕಲಚೇತನರು ಹೀಗೆ ಎಲ್ಲರ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕ ಪ್ರಯತ್ನಿಸಲಾಗುವುದು. ಲೀಡ್ ಬ್ಯಾಂಕ್ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಬಗ್ಗೆ ಬ್ಯಾಂಕ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಗರ, ಜಿಲ್ಲೆಯ ಅಭಿವೃದ್ಧಿಗೆ ತಾವು ಬದ್ಧರಿದ್ದು, ಸೆ.25ರಂದು ಜಿಪಂ ಸಭಾಂಗಣದಲ್ಲಿ ನಡೆಯುವ ದಿಶಾ ಸಮಿತಿ ಸಭೆಯಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ಆಸ್ಪತ್ರೆಗೆ ಸಿಸಿ ಕ್ಯಾಮೆರಾ, ಭದ್ರತೆಗೆ ಸೂಚನೆ: ಡಾ.ಪ್ರಭಾ
ಕೊಲ್ಕತಾದಲ್ಲಿ ವೈದ್ಯೆ ಹತ್ಯೆ ಪ್ರಕರಣದ ನಂತರ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ತಾವು ಭೇಟಿ ನೀಡಿ, ವೈದ್ಯಾಧಿಕಾರಿಗಳು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿ ಜೊತೆಗೆ ಸಭೆ ನಡೆಸಿ, ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲಿಡುವ ಜೊತೆಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ಜಿಲ್ಲಾಸ್ಪತ್ರೆ ಅಧೀಕ್ಷಕರಿಗೆ ಕಾಲಮಿತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗೆ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆಯೂ ಆಲಿಸಿದ್ದೇವೆ ಎಂದು ಅವರು ಹೇಳಿದರು.