ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮತಗಳವು ಆರೋಪಕ್ಕೆ ವಿರುದ್ಧವಾಗಿ ಮಾತನಾಡಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡು ಅಸಮಾಧಾನಗೊಂಡಿರುವ ರಾಜಣ್ಣ ಅವರ ನಿವಾಸಕ್ಕೆ ಬುಧವಾರ ಆಗಮಿಸಿದ ಕಾಂಗ್ರೆಸ್ ಜನಪ್ರತಿನಿಧಿಗಳ ತಂಡ ರಾಜಣ್ಣರನ್ನು ಸಮಾಧಾನಪಡಿಸುವ ಕಾರ್ಯಕ್ಕೆ ಮುಂದಾಗಿದೆ.
‘ಮುಂಗಾರು ಅಧಿವೇಶನ ಬಳಿಕ ದೆಹಲಿಗೆ ನಿಯೋಗ ತೆರಳಿ ವಸ್ತುಸ್ಥಿತಿಯನ್ನು ವರಿಷ್ಠರಿಗೆ ವಿವರಿಸುತ್ತೇವೆ. ಮತಗಳವಿಗೆ ಸಂಬಂಧಿಸಿ ನೀವೇನೂ ಕೆಟ್ಟದಾಗಿ, ತೀಕ್ಷ್ಣವಾಗಿ ಆರೋಪ ಮಾಡಿಲ್ಲ. ಆದರೆ ಇದನ್ನು ಒಂದು ಬಣ ವಿಪರೀತಕ್ಕೆ ಕೊಂಡೊಯ್ದಿದ್ದರಿಂದ ಈ ರೀತಿ ಆಗಿದೆ. ಈ ಬಗ್ಗೆ ಬೇಸರ ಮಾಡಿಕೊಳ್ಳಬೇಡಿ. ಭವಿಷ್ಯದಲ್ಲಿ ಎಲ್ಲವೂ ಸರಿಯಾಗಲಿದೆ’ ಎಂದು ಈ ತಂಡ ಅಭಯ ನೀಡಿದೆ ಎಂದು ಹೇಳಲಾಗಿದೆ.ಈ ಹಿಂದೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಇದೇ ಸಮುದಾಯಕ್ಕೇ ಸೇರಿರುವ ರಾಜಣ್ಣ ಅವರೂ ಸಂಪುಟದಿಂದ ವಜಾಗೊಂಡಿರುವುದರಿಂದ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ವಾಲ್ಮೀಕಿ ಸಮುದಾಯದವರನ್ನೇ ಪರಿಗಣಿಸಲು ವರಿಷ್ಠರಿಗೆ ಮನವಿ ಮಾಡಬೇಕು ಎಂದು ಈ ಸಂದರ್ಭದಲ್ಲಿ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
ಸ್ಥಾನ ನೀಡಲು ಸಿಎಂಗೆ ಮನವಿ
ನಾಗೇಂದ್ರ ಮತ್ತು ರಾಜಣ್ಣ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದು, ಇದರಿಂದ ತೆರವಾಗಿರುವ ಸ್ಥಾನಗಳನ್ನು ಭರ್ತಿ ಮಾಡುವಾಗ ವಾಲ್ಮೀಕಿ ಸಮುದಾಯದವರನ್ನೇ ಪರಿಗಣಿಸಬೇಕು ಎಂದು ನಿಯೋಗ ಕೋರಿಕೊಂಡಿದೆ. ಆಗ ಸಿದ್ದರಾಮಯ್ಯ ಅವರು, ‘ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತೇನೆ’ ಎಂದು ಸಕಾರಾತ್ಮಕವಾಗಿ ಭರವಸೆ ನೀಡಿದರು ಎಂದು ಮೂಲಗಳು ಸ್ಪಷ್ಟಪಡಿಸಿವೆ.