ಅಧ್ಯಕ್ಷರ ಕಿರುಕುಳ ಖಂಡಿಸಿ ಸಿಬ್ಬಂದಿ ಸಾಮೂಹಿಕ ರಜೆ

KannadaprabhaNewsNetwork | Published : Feb 27, 2025 12:34 AM

ಸಾರಾಂಶ

ಅಧ್ಯಕ್ಷರು ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಸಾಮೂಹಿಕವಾಗಿ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಎಸ್) ಅಧ್ಯಕ್ಷರು ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಸಾಮೂಹಿಕವಾಗಿ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು. ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕ ಎಚ್.ಕೆ.ದೊಡ್ಡಸಿನ್ನವರಗೆ ಮನವಿ ಸಲ್ಲಿಸಿದರು.

ಪ್ರತಿದಿನ ಕಿರುಕುಳ ನೀಡುವುದು, ಕಾನೂನು ಬಾಹಿರ ವರ್ಗಾವಣೆ, ಹಣ ಕೇಳುವುದು, ಹಣ ಕೊಡದೆ ಇದ್ದರೆ ನಿಮ್ಮನ್ನು ಅಮಾನತು ಮಾಡುತ್ತೇನೆ ಎಂದು ಬೆದರಿಸುವುದು ಸೇರಿದಂತೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಸಿಬ್ಬಂದಿ ಆರೋಪಿಸಿದರು. ಬೋನಸ್ ಹಣದಲ್ಲಿ ಸಿಬ್ಬಂದಿಯಿಂದ ತಲಾ ₹2 ಸಾವಿರ ಪಡೆದಿದ್ದಾರೆ. ಒಂದು ದಿನದ ರಜೆಗೂ ತಮ್ಮನ್ನೇ ಕೇಳಿ ಪಡೆಯಬೇಕೆಂದು ಆದೇಶಿಸುತ್ತಿದ್ದಾರೆ. ಸಹಾಯಕ ವ್ಯವಸ್ಥಾಪಕ ಜಿ.ಟಿ ಕಾಲತಿಪ್ಪಿ ಹಾಗೂ ಹಿರಿಯ ಸಹಾಯಕ ಆರ್.ವೈ ವಾಜಂತ್ರಿಯನ್ನು ಸುಖಾಸುಮ್ಮನೆ ಕಿರುಕುಳ ನೀಡಿ ಸೇವೆಯಿಂದ ಅಮಾನತುಗೊಳಿಸಿ ತಮಗೆ ಬೇಕಾದ ಬೇರೆ ಸಿಬ್ಬಂದಿಯನ್ನು ಯಾವುದೇ ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸದೆ ನೇಮಿಸಿಕೊಂಡು ಅವರಿಗೆ ₹20 ಸಾವಿರ ವೇತನ ನೀಡುತ್ತಿದ್ದಾರೆ. ಅಧಿಕೃತವಾಗಿ ನೇಮಕಾತಿಗೊಂಡ ಸಿಬ್ಬಂದಿ, ನೌಕರರಿಗೆ ಕೇವಲ ₹10 ಸಾವಿರ ವೇತನ ನೀಡುತ್ತಿದ್ದಾರೆ ಎಂದು ಅಧ್ಯಕ್ಷರ ವಿರುದ್ಧ ಹರಿಹಾಯ್ದರು.

ಅಧ್ಯಕ್ಷರ ದುರಾಡಳಿತದಿಂದ ಸಂಘವು ದಿವಾಳಿ ಅಂಚಿಗೆ ತಲುಪುತ್ತಿದೆ. 2024 ಮಾರ್ಚ್‌ ತಿಂಗಳಿನಲ್ಲಿ ₹13 ರಿಂದ ₹14 ಲಕ್ಷ ಲಾಭದಲ್ಲಿದ್ದ ಸಂಸ್ಥೆ, ಪ್ರಸಕ್ತ ಸಾಲಿನಲ್ಲಿ ನಷ್ಟ ಅನುಭವಿಸುವಂತಾಗಿದೆ. ಸಂಘದ ಪರಿಸ್ಥಿತಿಯ ಬಗ್ಗೆ ಜಿಲ್ಲಾ ಉಪ ನಿಬಂಧಕರಿಗೆ, ಜಿಆರ್ ಹಾಗೂ ಸಹಾಯಕ ನಿಬಂಧಕರಿಗೆ ಹಲವಾರು ಬಾರಿ ಮನವಿ ಮೂಲಕ ತಿಳಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಇದೇ ರೀತಿ ಮುಂದುವರೆದರೆ ಸಂಘದ 16 ಜನ ನೌಕರರ ಕುಟುಂಬಗಳು ಬೀದಿಗೆ ಬೀಳಲಿವೆ. ಕೂಡಲೇ ಮೇಲಾಧಿಕಾರಿಗಳು ಅಧ್ಯಕ್ಷರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ದೇಶಕರು ಇದರ ಬಗ್ಗೆ ಚರ್ಚಿಸಿ ಸಿಬ್ಬಂದಿಗೆ ಸರಳ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡ ಬೇಕೆಂದು ಸಿಬ್ಬಂದಿ ಆಗ್ರಹಿಸಿದರು.

ಬಿ.ಆರ್ ಹಿಪ್ಪರಗಿ, ಎಸ್.ಎ ಬಾಗೇವಾಡಿ, ಎಸ್.ವೈ.ಭಗವತಿ, ಆರ್.ಎನ್.ಪೂಜಾರಿ, ಎನ್.ಎಸ್ ಕಕಮರಿ, ಎಸ್.ಎಸ್ ಮಾಳೇದ, ಎಸ್.ಎಸ್ ರಾಮಗೊಂಡ, ಬಿ.ಐ.ಹ್ಯಾಳನವರ, ಆರ್.ಕೆ ಕಸ್ಕಿ, ಸಿದ್ದು ತವನಿದಿ, ಬಿ.ಎಚ್ ಪಾಟೀಲ, ಪಿ.ಐ.ಹಿಪ್ಪರಗಿ, ಗುರುರಾಜ ಕೊಣ್ಣೂರ, ಮಂಜು ಮಾಳೇದ ಹಾಗೂ ಅಮಾನತಾದ ಸಿಬ್ಬಂದಿ ಜಿ.ಟಿ ಕಾಲತಿಪ್ಪಿ, ಆರ್.ವೈ.ವಾಜಂತ್ರಿ ಇದ್ದರು.

Share this article