ಸಾರ್ವಜನಿಕ ಶೌಚಾಲಯದಲ್ಲಿ ಮಹಿಳೆಯರ ವಿಡಿಯೋ ಮಾಡುತ್ತಿದ್ದ ಸಿಬ್ಬಂದಿ ವಶ

KannadaprabhaNewsNetwork |  
Published : Jul 02, 2026, 01:15 AM IST
೦೧ಬಿಹೆಚ್‌ಆರ್ ೪: ಬಾಳೆಹೊನ್ನೂರಿನ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ. | Kannada Prabha

ಸಾರಾಂಶ

ಬಾಳೆಹೊನ್ನೂರುಪಟ್ಟಣದ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ ಮಹಿಳೆಯರು, ಯುವತಿಯರು ಶೌಚಕ್ಕೆ ತೆರಳಿದ ವೇಳೆ ವಿಡಿಯೋ ಮಾಡುತ್ತಿದ್ದ ಶೌಚಾಲಯದ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ ಮಹಿಳೆಯರು, ಯುವತಿಯರು ಶೌಚಕ್ಕೆ ತೆರಳಿದ ವೇಳೆ ವಿಡಿಯೋ ಮಾಡುತ್ತಿದ್ದ ಶೌಚಾಲಯದ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಿಹಾರ ಮೂಲದ ರೋಶನ್ ಕುಮಾರ್ ಬಂಧಿತ ಆರೋಪಿ.

ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಪಟ್ಟಣದ ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯವನ್ನು ಶುಚಿ ಇಂಟರ್ ನ್ಯಾಶನಲ್ ಎಂಬ ಸಂಸ್ಥೆಗೆ ನಿರ್ವಹಣೆಗೆ ವಹಿಸಿದ್ದು ಬಿಹಾರ ಮೂಲದ ಸಿಬ್ಬಂದಿ ಇದರ ನಿರ್ವಹಣೆ ಮಾಡುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಕಾಲೇಜು ಯುವತಿಯೊಬ್ಬಳು ಶೌಚಾಲಯಕ್ಕೆ ತೆರಳಿದ್ದು ಈ ವೇಳೆ ಅಲ್ಲಿನ ಸಿಬ್ಬಂದಿ ರೋಶನ್ ಕುಮಾರ್ ಗುಪ್ತವಾಗಿ ಮೊಬೈಲ್ ಮೂಲಕ ಶೌಚಕ್ಕೆ ತೆರಳಿದ ಮಹಿಳೆಯರು, ಯುವತಿಯರ ವಿಡಿಯೋ ಚಿತ್ರೀಕರಿಸುವುದು ಕಂಡುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಗಾಬರಿಗೊಂಡು ಯುವತಿ ಹೊರಗೆ ಓಡಿ ಬಂದು ಸ್ಥಳೀಯ ಅಂಗಡಿಯವರಿಗೆ ತಿಳಿಸಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೊಬೈಲ್‌ ಸಮೇತ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲವು ವಿಡಿಯೋಗಳು ಪತ್ತೆಯಾಗಿವೆ. ಶೌಚಾಲಯ ನಿರ್ವಹಣೆ ಮಾಡುತ್ತಿರುವ ಶುಚಿ ಇಂಟರ್ ನ್ಯಾಶನಲ್ ಸಂಸ್ಥೆ ಮುಖ್ಯಸ್ಥರನ್ನು ಠಾಣೆಗೆ ಕರೆಯಿಸಿ ಸಿಬ್ಬಂದಿ ಬದಲಾಯಿಸಲು ಸೂಚಿಸಿದ್ದಾರೆ. ಕಾಲೇಜು ಯುವ ತಿಯ ಪೋಷಕರು ಘಟನೆ ದೂರು ನೀಡಲು ನಿರಾಕರಿಸಿದ್ದು ಪೊಲೀಸರು ಆರೋಪಿ ರೋಶನ್ ಕುಮಾರ ನಿಂದ ಮುಚ್ಚಳಿಕೆ ಬರೆಯಿಸಿಕೊಂಡು ಬಿಡುಗಡೆಗೊಳಿಸಿದ್ದಾರೆ. ಸಾರ್ವಜನಿಕ ಶೌಚಾಲಯದಲ್ಲಿ ಇಂತಹ ಘಟನೆ ನಡೆದಿರುವುದು ಆತಂಕಕಾರಿ. ಶೌಚಾಲಯ ನಿರ್ವಹಣೆ ಶುಚಿ ಇಂಟರ್ ನ್ಯಾಶನಲ್ ಸಂಸ್ಥೆಗೆ ಬಿ.ಕಣಬೂರು ಗ್ರಾಪಂಯಿಂದ ಕೂಡಲೇ ಪತ್ರ ಬರೆದಿದ್ದು ಇಂತಹ ಘಟನೆಗಳು ಮರುಕಳಿಸಿದಲ್ಲಿ ಶೌಚಾಲಯ ನಿರ್ವಹಣೆ ಕರಾರನ್ನು ರದ್ದುಗೊಳಿ ಸಲಾಗುವುದು ಎಂದು ಪಿಡಿಒ ಕಾಶಪ್ಪ ತಿಳಿಸಿದ್ದಾರೆ.

೦೧ಬಿಹೆಚ್‌ಆರ್ ೪:

ಬಾಳೆಹೊನ್ನೂರಿನ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಿಂದ ಮತದಾನದ ಹಕ್ಕು ಕಸಿಯುವ ಕುತಂತ್ರ
ನಕಲಿ ಜಾತಿ ಪ್ರಮಾಣಪತ್ರ ರದ್ಧತಿಗೆ ಒತ್ತಾಯ