ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ರಂಗ ಚಟುವಟಿಕೆಯೇ ನನ್ನ ಬದುಕಿನ ಯಶಸ್ಸಿನ ಸೂತ್ರ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು.ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’ ಅಂಗವಾಗಿ ಶುಕ್ರವಾರ ಹಮ್ಮಿಕೊಂಡ ‘ರಂಗಗೀತೆ- ಉಪನ್ಯಾಸ- ಸನ್ಮಾನ- ನಾಟಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ಹಿರಿಯ ರಂಗಕರ್ಮಿ ಡಾ.ನರಸಿಂಹಮೂರ್ತಿ ಆರ್. ಮಾತನಾಡಿ, ಲಲಿತಕಲೆಗಳ ಸಂಗಮ ಕ್ಷೇತ್ರವೇ ರಂಗಭೂಮಿ. ಪಂಚೇಂದ್ರಿಯ ಮೂಲಕ ನೆಮ್ಮದಿ ನೀಡುವ ಮನುಷ್ಯ ಕೃತ ಕ್ರಿಯೆಗಳೇ ಕಲೆ. ಪ್ರಾಚೀನ ಭಾರತದಲ್ಲಿ ೬೪ ಕಲೆಗಳನ್ನು ಗುರುತಿಸಲಾಗಿದೆ. ನಾಟಕ ಎಂಬುದು ಕಲಾ ರಸಾಯನ. ಹಲವು ಕಲೆಗಳ ಮೇಳೈಸುವಿಕೆ ಎಂದು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೀವನ್ ರಾಮ್ ಸುಳ್ಯ, ನಾಟಕವಿಲ್ಲದೇ ಜೀವನ ಇಲ್ಲ. ನಾವು ರಂಗದಲ್ಲಿ ನಾಟಕಕಾರರು, ಆದರೆ ಎಲ್ಲರೂ ಜೀವನದಲ್ಲಿ ನಾಟಕಕಾರರು. ಪಾತ್ರಗಳು ಮಾತ್ರ ವಿಭಿನ್ನ. ಎಲ್ಲ ವೃತ್ತಿಗಳು ನಾಟಕ ಬಯಸುತ್ತವೆ ಎಂದು ರಂಗಭೂಮಿ ದಿನದ ಕುರಿತು ಮಾಹಿತಿ ಹಂಚಿಕೊಂಡರು.ವಿಶ್ವರಂಗ ಸನ್ಮಾನ: ರಂಗಭೂಮಿಯ ಹಿರಿಯ ಮತ್ತು ಚಲನಚಿತ್ರ ಕಲಾವಿದ ಎಂ.ಭೋಜ ಶೆಟ್ಟಿ ತೋಟದಮನೆ ಅವರನ್ನು ಸನ್ಮಾನಿಸಲಾಯಿತು.ಜೀವನ್ ರಾಮ್ ಸುಳ್ಯ, ವಿದುಷಿ ಸುಮನಾ ಪ್ರಸಾದ್ ಮತ್ತು ಮಮತಾ ಕಲ್ಮಕಾರು, ‘ಸಾವಿರದ ಮಾಯೆ’, ‘ಸಣ್ಣ ಹುಡುಗಿ ನಿನ್ನ’, ‘ಮದುವೆ ಎಂಬ ಮೂರಕ್ಷರ’, ‘ಅಂತಿಂಥ ಮದುವೆಯಲ್ಲ, ಊಟ’, ‘ಗೋರ್ ಮಾಟಿ’ ರಂಗಗೀತೆಗಳನ್ನು ಹಾಡಿದರು. ಚಿನ್ಮಯ ಕಮಲಾಕರ ಭಟ್ ಹಾಗೂ ಮನುಜ ನೇಹಿಗೆ ಸುಳ್ಯ ಹಿನ್ನೆಲೆಯಲ್ಲಿ ಸಾಥ್ ನೀಡಿದರು.ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಮ್ ಸುಳ್ಯ ನಿರ್ದೇಶನದಲ್ಲಿ ಶಶಿರಾಜ್ ಕಾವೂರು ಬರೆದ ‘ಏಕಾದಶಾನನ’ ನಾಟಕವನ್ನು ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಮನುಜ ನೇಹಿಗೆ ಸುಳ್ಯ ಸಂಗೀತ ನೀಡಿದರು.