ಗಂಗಾವತಿಯಲ್ಲಿ ಹಿಂದೂ ಸಮಾವೇಶಕ್ಕೆ ವೇದಿಕೆ ಸಿದ್ಧ

KannadaprabhaNewsNetwork |  
Published : Nov 03, 2026, 02:30 AM IST
ಗಂಗಾವತಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜರುಗುವ ಹಿಂದೂ ಸಮಾವೇಶದ ವೇದಿಕೆಯನ್ನು ಕುಮಾರ ಸ್ವಾಮೀಜಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಶಾಸಕ ಪರಣ್ಣ ಮುನವಳ್ಳಿ ವೀಕ್ಷಿಸಿದರು. | Kannada Prabha

ಸಾರಾಂಶ

ಗಂಗಾವತಿ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ ನ.3 ರಂದು ಸಂಜೆ 6 ಗಂಟೆಗೆ ನಡೆಯುವ ಹಿಂದೂ ಸಮಾವೇಶಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿದ್ದು, ಬೃಹತ್ ವೇದಿಕೆ ನಿರ್ಮಾಣಗೊಂಡಿದೆ.

ರಾಮಮೂರ್ತಿ ನವಲಿ

ಗಂಗಾವತಿ: ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ ನ.3 ರಂದು ಸಂಜೆ 6 ಗಂಟೆಗೆ ನಡೆಯುವ ಹಿಂದೂ ಸಮಾವೇಶಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿದ್ದು, ಬೃಹತ್ ವೇದಿಕೆ ನಿರ್ಮಾಣಗೊಂಡಿದೆ.

ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ಜರುಗುವ ಹಿಂದೂ ಸಮಾವೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ 300ಕ್ಕೂ ಹೆಚ್ಚು ಸ್ವಾಮೀಜಿಗಳು ಆಗಮಿಸಲಿದ್ದು, 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.

1500 ಮಹಿಳೆಯರಿಂದ ಕುಂಭ ಮೆರವಣಿಗೆ: ಹಿಂದೂ ಸಮಾವೇಶದ ಹಿನ್ನೆಲೆಯಲ್ಲಿ 1500 ಮಹಿಳೆಯರಿಂದ ಕುಂಭ ಮೆರವಣಿಗೆ ಜರುಗಲಿದೆ. ಮಧ್ಯಾಹ್ನ 2 ಗಂಟೆಗೆ ನಗರದ ಶ್ರೀಚೆನ್ನಬಸವಸ್ವಾಮಿ ಮಠದಿಂದ ಪ್ರಾರಂಭಗೊಳ್ಳುವ ಮೆರವಣಿಗೆ ನಗರದ ಮಹಾತ್ಮಗಾಂಧಿ ವೃತ್ತ, ಬಸವಣ್ಣ ವೃತ್ತ, ಅಂಬೇಡ್ಕರ್‌ ವೃತ್ತದ ಮೂಲಕ ಜ್ಯೂನಿಯರ್ ಕಾಲೇಜು ಮೈದಾನ ತಲುಪಲಿದೆ. ಮೆರಣಿಗೆಯಲ್ಲಿ 300ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಜತೆಗೆ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಹಿಂದೂ ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ.

ವೇದಿಕೆ ಮೇಲೆ ಕೇವಲ ಸ್ವಾಮೀಜಿಗಳಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಮುಖರಿಗೆ ವೇದಿಕೆ ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಪ್ರಸಾದದ ವ್ಯವಸ್ಥೆ: ಹಿಂದೂ ಸಮಾವೇಶಕ್ಕೆ ಆಗಮಿಸುವ ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಒಂದು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಕಾರ್ಯ ನಿರ್ವಹಿಸಲಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆ ಕಾರ್ಯ ನಡೆದಿದೆ.

ಪೊಲೀಸ್ ಬಿಗಿ ಭದ್ರತೆ: ಹಿಂದೂ ಸಮಾವೇಶಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಪೊಲೀಸರು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈಗಾಗಲೇ ಪೊಲೀಸ್ ತಂಡ ನಗರಕ್ಕೆ ಆಗಮಿಸಿದ್ದು, 4 ಡಿವೈಎಸ್ಪಿ, 12 ಸಿಪಿಐ, 25 ಪಿಎಸ್‌ಐ, 300 ಪೊಲೀಸರು, 4 ಜಿಲ್ಲಾ ಮೀಸಲು ಪಡೆ, 2 ಕರ್ನಾಟಕ ಮೀಸಲು ಪಡೆ ಸೇರಿದಂತೆ ಇಲಾಖೆ ನಿಗಾವಹಿಸಿದೆ.

ನಗರದಲ್ಲಿ ಹಿಂದೂ ಸಮಾವೇಶಕ್ಕೆ ಸಿದ್ಧತೆ ನಡೆದಿದ್ದು, ಸ್ವಾಮೀಜಿಗಳ ಆಗಮನಕ್ಕೆ ಸ್ವಾಗತ ಕಮಾನುಗಳು ನಿರ್ಮಾಣಗೊಂಡಿವೆ.ಹಿಂದೂ ಸಮಾವೇಶದಲ್ಲಿ ವಿವಿಧ ಮಠಾಧೀಶರು ಆಗಮಿಸುತ್ತಿದ್ದು, ಬೆಳಗ್ಗೆ ನಡೆಯುವ ಕುಂಭ ಮೇಳದಲ್ಲಿ ಎಲ್ಲರೂ ಭಾಗವಹಿಸಬೇಕು. ಹಿಂದೂ ಸಂಸ್ಕೃತಿಯನ್ನು ಬೆಳೆಸೋಣ ಎಂದು ಕೆಆರ್‌ಜಿಎಸ್‌ ಪ್ರೌಢಶಾಲೆ ಮರಳಿ ಅಧ್ಯಕ್ಷ ಎಚ್.ಎಂ. ಗುರುಪಾದಯ್ಯ ಸ್ವಾಮಿ ಹಾಗೂ ಬಿ. ದುರಗಪ್ಪ ಸಿಂಗನಾಳ ಹೇಳಿದರು.

ಹಿಂದೂ ಸಮಾವೇಶದಿಂದ ನಗರ ಸೇರಿದಂತೆ ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಬೆಳೆಯಲಿ. ಯುವಕರು ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ನಗರಸಭಾ ಮಾಜಿ ಸದಸ್ಯ ವಾಸುದೇವ ನವಲಿ ಹೇಳಿದರು.

ಹಿಂದೂ ಸಮಾವೇಶ ಯುವಕರಿಗೆ ಮಾದರಿಯಾಗಬೇಕಾಗಿದೆ. ಸಂಸ್ಕಾರ, ಸಂಸ್ಕೃತಿ, ಧರ್ಮ ಜಾಗೃತಿ ಮೂಡಲಿ ಎಂದು ಪಂಪಾನಗರ ಪಂ.ಗೃ.ನಿ., ಸಂಘದ ಮಾಜಿ ಅಧ್ಯಕ್ಷ ಬದರಿನಾಥ ಜೋಷಿ ಆದಾಪುರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ