ಕೂಡ್ಲಿಗಿ: ಇಲ್ಲಿನ ಕೂಡ್ಲಿಗಿ ರಂಗಕಲಾವಿದರ ತವರೂರು. ರಂಗಾಯಣ ನೀನಾಸಂ ರೀತಿ ಕೂಡ್ಲಿಗಿಯಲ್ಲಿ ರಂಗ ತರಬೇತಿ ಕೇಂದ್ರ ಪ್ರಾರಂಭವಾಗಬೇಕು. ಈ ಮೂಲಕ ಕೂಡ್ಲಿಗಿಯಲ್ಲಿ ಮುಂದಿನ ಪೀಳಿಗೆಗೆ ನಾಟಕ, ರಂಗಭೂಮಿ, ಜಾನಪದ ಕಲೆಗಳನ್ನು ವರ್ಗಾಯಿಸುವ ಕಾರ್ಯ ಆಗಬೇಕಿದೆ ಎಂದು ಹಿರಿಯ ರಂಗಭೂಮಿ ಕಲಾವಿದ ಭಜನೆ ನರಸಿಂಹಪ್ಪ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ತಾಲೂಕು ಬಿಸಿಎಂ ಅಧಿಕಾರಿ ಶ್ಯಾಮಪ್ಪ ಮಾತನಾಡಿ, ತಾಲೂಕಿನಲ್ಲಿ ಕಲಾವಿದರ ಪರಂಪರೆ ಇಂದು ನಿನ್ನೆಯದಲ್ಲ. ಕೂಡ್ಲಿಗಿಯಲ್ಲೊಂದೇ ನೂರಾರು ರಂಗನಟಿಯರು ನಾಲ್ಕು ಐದು ತಲೆಮಾರುಗಳಿಂದ ನಾಟಕಗಳನ್ನೇ ನಂಬಿ ಜೀವನ ಸವೆಸಿದ ಇತಿಹಾಸ ಇದೆ. ಈಗಲೂ ಉತ್ತರ ಕರ್ನಾಟಕದಲ್ಲಿ ಬಯಲಾಟ ಅಂದರೆ ಕೂಡ್ಲಿಗಿಯ ರಂಗನಟಿಯರೇ ಬೇಕು ಎನ್ನುವಷ್ಟರ ಮಟ್ಟಿಗೆ ಇವರ ಕಲಾಸಿರಿವಂತಿಕೆ ಇರುವುದು ಶ್ಲಾಘನೀಯ ಎಂದರು.
ಕೂಡ್ಲಿಗಿಯ ಕೆ.ದುರುಗಮ್ಮ ಮತ್ತು ತಂಡದವರಿಂದ ರಂಗಗೀತೆಗಳ ಗಾಯನ ಪ್ರೇಕ್ಷಕರ ಮನಸೆಳೆಯಿತು. ಕಂಪ್ಲಿಯ ಕೆ.ವಾಲ್ಮೀಕಿ ವೀರಣ್ಣ ತಂಡದವರಿಂದ ಬಯಲಾಟ ಮುಮ್ಮೇಳ ಪದಗಳು, ಗುಡೇಕೋಟೆಯ ಹೆಚ್.ಪಿ.ಯರ್ರಯ್ಯ ತಂಡದಿಂದ ಜೋಗುತಿ ನೖತ್ಯ, ನಂತರ ಬಿಜಿ ದಿನ್ನಿ ಗ್ರಾಮದ ಕೆ.ಹನುಮಂತಪ್ಪ ಮತ್ತು ತಂಡದವರಿಂದ ಮನೆ ಮನೆ ಕಥೆ, ಅರ್ಥಾತ್ ಇಕ್ಕಟ್ಟಿನ ಸಂಸಾರ ಎನ್ನುವ ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ವಿನಾಯಕ ಜ್ಯೋತಿ ಕಲಾ ಟ್ರಸ್ಟ್ ನ ಅಧ್ಯಕ್ಷೆ ಜಿ.ಜ್ಯೋತಿ, ಹಿರಿಯ ಕಲಾವಿದೆ ಸಿರಿಮಲ್ಲಮ್ಮ, ವಿಭೂತಿ ವೀರಣ್ಣ, ತಿಂದಪ್ಪ, ಮಲ್ಲನಗೌಡ, ಗುರುಸಿದ್ದಣ್ಣ, ಸೋಮಣ್ಣ, ಕುಪ್ಪಳ್ಳಿ ಮೂಗಣ್ಣ, ಕಂಪ್ಲಿ ವೀರಣ್ಣ, ಯು. ದೊಡ್ಡಬಸಪ್ಪ ಮುದ್ದಾಪುರ, ಚಿರಿಬಿ ಅಂಜಿನಪ್ಪ, ಹಿರಿಯ ರಂಗನಟಿಯರಾದ ಸಿರಿಬಿ ಗೌರಮ್ಮ, ಕೋಟೆ ಅಂಜಿನಮ್ಮ, ಜಿ.ಗೀತಾ, ವೈಟ್ ಸುಮಾ, ಓಬಳಮ್ಮ ಮುಂತಾದವರು ಉಪಸ್ಥಿತರಿದ್ದರು.