ಕಾಲ್ತುಳಿತ: ಪೊಲೀಸರ ಅಮಾನತು ಖಂಡಿಸಿ ಬಿಜೆಪಿ ಹೋರಾಟ

KannadaprabhaNewsNetwork |  
Published : Jun 07, 2025, 01:23 AM IST
ಕಾಲ್ತುಳಿತ ಸಾವಿನ ಪ್ರಕರಣ : ಪೊಲೀಸರ ಅಮಾನತು ಖಂಡಿಸಿ ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಅಮಾನತು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಅಮಾನತು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ಪ್ರಕರಣದ ನೇರ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕು. ಯಾವುದೇ ಮುನ್ಸೂಚನೆ ಇಲ್ಲದೆ ಪೊಲೀಸ್ ಅನುಮತಿ ಇಲ್ಲದೆ ಸ್ವಾರ್ಥಕ್ಕಾಗಿ ಸರ್ಕಾರ ತರಾತುರಿಯಲ್ಲಿ ಆರ್‌ಸಿಬಿ ವಿಜಯೋತ್ಸವ ಆಚರಣೆ ಮಾಡಿದೆ ಎಂದರು. ಕಾಲ್ತುಳಿತದಲ್ಲಿ ೧೧ ಮಂದಿ ಅಮಾಯಕರನ್ನು ಬಲಿಪಡಿದಿದೆ. ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ್ ರಾಜೀನಾಮೆ ನೀಡಬೇಕು. ಅಮಾಯಕ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ಹಿಂಪಡೆಯಬೇಕು. ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ತರಾತುರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರ್‌ಸಿಬಿ ವಿಜಯೋತ್ಸವ ಆಚರಣೆ ಮಾಡಿದ್ದು, ತಮ್ಮ ತಪ್ಪನ್ನು ಪೋಲಿಸ್ ಅಧಿಕಾರ ಮೇಲೆ ಹಾಕಿ ಅವರನ್ನು ಅಮಾನತ್ತುಪಡಿಸಲಾಗಿದೆ. ಈ ಆದೇಶವನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ ಮಾಜಿ ಜಿಲ್ಲಾಧ್ಯಕ್ಷ ಆರ್, ಸುಂದರ್, ಮಂಡಲ ಅಧ್ಯಕ್ಷ ಶಿವರಾಜ್, ಅರಕಲವಾಡಿ ಮಹೇಶ್, ಚೂಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ, ನಗರಸಭಾ ಸದಸ್ಯ ಮನೋಜ್ ಪಾಟೀಲ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಕೂಸಣ್ಣ ,ಮಾಜಿ ನಗರಸಬಾ ಸದಸ್ಯ ಶಿವಣ್ಣ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಲೆಯೂರು ಕಮಲಮ್ಮ,ಮಹಿಳಾ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಶೈಲಾ, ಯುವ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಆನಂದ್ ಭಗಿರಥ, ಜಿಲ್ಲಾ ಮಾಧ್ಯಮ ವಕ್ತಾರ ಕಾಡಳ್ಳಿ ಕುಮಾರ್, ಜಿಲ್ಲಾ ಉಪಾಧ್ಯಕ್ಷ ವಿರಾಟ್ ಶಿವು, ಅರಕಲವಾಡಿ ನಾಗೇಂದ್ರ, ಕಾರ್ಯದರ್ಶಿ ನಟರಾಜ್, ಎಸ್ ಟಿ ಮೋರ್ಚಾದ ರಾಜ್ಯ ರಾಜಕಾರಣಿ ಸದಸ್ಯ ಅಗರರಾಜು, ದೊಡ್ಡರಾಯ ಪೇಟೆ ಮಹೇಶ್ವರಿ, ಜಯಶ್ರೀ, ವನಜಾಕ್ಷಮ್ಮ, ಜಿಲ್ಲಾ ಮಾಧ್ಯಮ ಸಂಚಾಲಕ ವೀರೇಂದ್ರ ಮಾಧ್ಯಮ ಸಹ ವಕ್ತಾರ ಮಂಜುನಾಥ್, ಜಿಲ್ಲಾ ಮಾಧ್ಯಮ್ ಪ್ರಮುಖ್ ರಾಮಸಮುದ್ರ ಶಿವಣ್ಣ, ಮಂಡಲ ಮಾಜಿ ಅಧ್ಯಕ್ಷ ನಾಗರಾಜು, ಹೈಟೆಕ್ ಶಿವು, ಮುಖಂಡ ಕಪನಿ ನಾಯಕ, ಬೃಂಗೇಶ್, ರಾಜಪ್ಪ, ಕಿರಣ್, ಭಾಸ್ಕರ್, ರುದ್ರ, ರಾಜೇಂದ್ರ ಭಾಗವಹಿಸಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌