ಹುಬ್ಬಳ್ಳಿಗೆ 10 ಹೊಸ ಮೆಮು ರೈಲು ಸಂಚಾರ ಆರಂಭಿಸಿ : ಜೋಶಿ ಮನವಿ

KannadaprabhaNewsNetwork |  
Published : Jul 31, 2025, 12:46 AM ISTUpdated : Jul 31, 2025, 01:17 PM IST
ಜೋಶಿ | Kannada Prabha

ಸಾರಾಂಶ

ಹುಬ್ಬಳ್ಳಿ ಉತ್ತರ ಕರ್ನಾಟಕದ ವಾಣಿಜ್ಯ ನಗರವಾಗಿದೆ. ಅಕ್ಕಪಕ್ಕದ ಪಟ್ಟಣ, ಗ್ರಾಮೀಣ ಪ್ರದೇಶಗಳಿಂದ ಪ್ರತಿನಿತ್ಯ ಲಕ್ಷಾಂತರ ಮಂದಿ ಸಂಚರಿಸುತ್ತಾರೆ. ಹಾಗಾಗಿ ಇಲ್ಲಿ ಹೊಸ ಮೆಮು ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು.

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅಕ್ಕಪಕ್ಕದ ಪಟ್ಟಣಗಳಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ 10 ಹೊಸ ಮೆಮು (ಮೇನ್‌ಲೈನ್‌ ಎಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌) ರೈಲುಗಳ ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು.

ನವದೆಹಲಿಯಲ್ಲಿ ಬುಧವಾರ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಭೇಟಿಯಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಹುಬ್ಬಳ್ಳಿ ಉತ್ತರ ಕರ್ನಾಟಕದ ವಾಣಿಜ್ಯ ನಗರವಾಗಿದೆ. ಅಕ್ಕಪಕ್ಕದ ಪಟ್ಟಣ, ಗ್ರಾಮೀಣ ಪ್ರದೇಶಗಳಿಂದ ಪ್ರತಿನಿತ್ಯ ಲಕ್ಷಾಂತರ ಮಂದಿ ಸಂಚರಿಸುತ್ತಾರೆ. ಹಾಗಾಗಿ ಇಲ್ಲಿ ಹೊಸ ಮೆಮು ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಪ್ಯಾಸೆಂಜರ್‌ ರೈಲು ಓಡಿಸಿ : ಹುಬ್ಬಳ್ಳಿ ನಗರಕ್ಕೆ ಶಿಕ್ಷಣ, ಉದ್ಯೋಗ, ವ್ಯಾಪಾರ, ಆಸ್ಪತ್ರೆಗಳಿಗಾಗಿ ಅಸಂಖ್ಯಾತ ಜನ ಸಂಚರಿಸುತ್ತಾರೆ. ದಿನನಿತ್ಯದ ರೈಲುಗಳು ಭರ್ತಿಯಾಗಿರುತ್ತವೆ. ಹಾಗಾಗಿ ಜನಸಂಚಾರ ಅನುಕೂಲಕ್ಕೆ ಮೆಮು ರೈಲುಗಳು ಅಗತ್ಯತೆಯಿದೆ. ಈ ಭಾಗದಲ್ಲಿ ರಸ್ತೆ ಸಾರಿಗೆಗಿಂತ ರೈಲು ಸಂಚಾರ ಅನುಕೂಲಕರವಾಗಿ ಪರಿಣಮಿಸಿದ್ದು, ಕೋವಿಡ್‌ ವೇಳೆ ಸ್ಥಗಿತಗೊಳಿಸಿದ್ದ ಅನೇಕ ಪ್ಯಾಸೆಂಜರ್‌ ರೈಲು ಸಂಚಾರ ಸಹ ಆರಂಭಿಸಬೇಕೆಂದರು.

ಬೆಂಗಳೂರು ರೈಲು ನಿಲ್ದಾಣ ಬಿಟ್ಟರೆ ಹುಬ್ಬಳ್ಳಿಯೇ ಅತ್ಯಂತ ಜನನಿಬಿಡ ರೈಲು ನಿಲ್ದಾಣವಾಗಿದ್ದು, ನಿತ್ಯ ಕಡಿಮೆ ಎಂದರೂ 50 ಸಾವಿರಕ್ಕೂ ಅಧಿಕ ಪ್ರಯಾಣಿಕರಿಂದ ತುಂಬಿರುತ್ತದೆ. ವಲಯದ ಮುಖ್ಯ ಕಚೇರಿ ಹೊಂದಿರುವ ಹುಬ್ಬಳ್ಳಿ ನಿಲ್ದಾಣ ಭಾರತೀಯ ರೈಲ್ವೆಯಲ್ಲಿ ಮಹತ್ತರವಾಗಿದ್ದು, ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿವರ್ತಿಸುವುದು ಅತ್ಯಗತ್ಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಮತ್ತೊಂದು ರೈಲ್ವೆ ಬ್ರಿಡ್ಜ್‌ : ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದ ರೈಲ್ವೆ ನಿಲ್ದಾಣವಾಗಿ ಪರಿವರ್ತಿಸುವ ಬಗ್ಗೆ ಸಹ ಮಹತ್ವದ ಚರ್ಚೆ ನಡೆಸಿದರು. ನಗರದ ಗದಗ ರಸ್ತೆ ಮೇಲಿರುವ ಡಬಲ್‌ ಲೈನ್ ರೈಲ್ವೆ ಬ್ರಿಡ್ಜ್‌ನ್ನು 4 ಲೈನ್‌ಗೆ ವಿಸ್ತರಿಸುವ ಸಲುವಾಗಿ ಇನ್ನೊಂದು ರೈಲ್ವೆ ಬ್ರಿಡ್ಜ್ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಮುಂದಿಟ್ಟರು. ಈ ವೇಳೆ ಸಚಿವ ವಿ. ಸೋಮಣ್ಣ ಸಹ ಈ ಬಗ್ಗೆ ಗಮನ ಸೆಳೆದರು.

ಆಧಾರ್‌ ಸೇವಾ ಕೇಂದ್ರ: ಇದೇ ವೇಳೆ ಕೇಂದ್ರ ಸಚಿವ ಜೋಶಿ ಅವರು ಹುಬ್ಬಳ್ಳಿಯಲ್ಲಿ ಈಗಿರುವ ʼಆಧಾರ್ ಸೇವಾ ಕೇಂದ್ರʼವನ್ನು ಮೇಲ್ದರ್ಜೆಗೇರಿಸಬೇಕು. ಆರ್‌ಎಫ್‌ಪಿ (ರಿಕ್ವೆಸ್ಟ್‌ ಫಾರ್‌ ಪ್ರೊಪಸಲ್‌) ಕೇಂದ್ರವಾಗಬೇಕು ಎಂದು ಕೋರಿದರು. ಇದಕ್ಕೆ ಅಶ್ವಿನಿ ವೈಷ್ಣವ ಸಕಾರಾತ್ಮಕವಾಗಿ ಸ್ಪಂದಿಸಿದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ