ಕಾರವಾರದಿಂದ ಬೆಂಗಳೂರು ಮಾರ್ಗವಾಗಿ 2 ಪಲ್ಲಕ್ಕಿ ಹೊಸ ಬಸ್ ಸಂಚಾರ ಮೂರು ದಿನದಲ್ಲಿ ಆರಂಭವಾಗಲಿದೆ.
ಕನ್ನಡಪ್ರಭ ವಾರ್ತೆ ಕಾರವಾರ
ತಾಲೂಕಿನಲ್ಲಿ ಬಸ್‌ಗಳ ಸಂಚಾರದ ಬೇಡಿಕೆ ಕುರಿತಂತೆ ಎಲ್ಲಾ ಪಿಡಿಓಗಳೊಂದಿಗೆ ಸಭೆ ನಡೆಸಿ ಬಸ್‌ಗಳ ಬೇಡಿಕೆಗೆ ಅನುಗುಣವಾಗಿ ಬಸ್ ಸಂಚಾರ ಆರಂಭಿಸುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಶಾಸಕ ಸತೀಶ್ ಕೆ. ಸೈಲ್ ಸೂಚಿಸಿದರು.
ಗುರುವಾರ ತಾಪಂ ಸಭಾಂಗಣದಲ್ಲಿ ನಡೆದ, ತಾಪಂ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಹಿಂದೆ ಕಾರವಾರದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಮಲ್ಟಿ ಎಕ್ಸಲ್ ಬಸ್ ಸಂಚಾರ ರದ್ದುಪಡಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ ಸಂಚಾರದ ವ್ಯವಸ್ಥೆ ಮಾಡುವಂತೆ ಹೇಳಿದರು.
ಕಾರವಾರದಿಂದ ಬೆಂಗಳೂರು ಮಾರ್ಗವಾಗಿ 2 ಪಲ್ಲಕ್ಕಿ ಹೊಸ ಬಸ್ ಸಂಚಾರ ಮೂರು ದಿನದಲ್ಲಿ ಆರಂಭವಾಗಲಿದೆ. ಜಿಲ್ಲೆಯಲ್ಲಿ ₹36 ಕೋಟಿ ನಷ್ಟದಲ್ಲಿದ್ದ ವಾ.ಕ.ರ.ಸಾ ಸಂಸ್ಥೆಯು ಗ್ಯಾರಂಟಿ ಯೋಜನೆಯ ಶಕ್ತಿ ಯೋಜನೆ ಮೂಲಕ ₹13 ಕೋಟಿ ಲಾಭದಲ್ಲಿದೆ ಎಂದು ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್ ಶಿವಕುಮಾರ್, ವಿಠಲ್ ಘಾಟ್‌ನಲ್ಲಿ ₹13 ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್ ಕಾಮಗಾರಿ ಆರಂಭವಾಗಿದೆ. ಬಿಣಗಾ, ಪತಂಜಲಿ, ಅಮದಳ್ಳಿ, ಹಾರವಾಡ, ಬೆಳಸೆ ಬಳಿಯಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಆದಷ್ಟು ಬೇಗ ಮುಕ್ತಾಯಗೊಳಿಸಲಾಗುವುದು. ಕಾಳಿ ಸೇತುವೆಯ ಕಾಮಗಾರಿಯನ್ನು ಎರಡು ವರ್ಷದಲ್ಲಿ ಮುಗಿಸಲಾಗುವುದು ಎಂದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿ ಇರುವ ವೈದ್ಯರ ಹೆಸರು, ಮೊಬೈಲ್ ನಂಬರ್, ಯಾವ ವಿಭಾಗದ ವೈದ್ಯರಿದ್ದಾರೆ ಮತ್ತು ಸಿಟಿ ಸ್ಕ್ಯಾನ್, ಎಕ್ಸರೇ ಮೆಷಿನ್ ಚಾಲ್ತಿಯಲ್ಲಿರುವ ಬಗ್ಗೆ ಮಾಹಿತಿಯುಳ್ಳ ಸ್ಕ್ರೋಲಿಂಗ್ ಬೋರ್ಡ್ ಅಳವಡಿಸಬೇಕೆಂದು ಕ್ರಿಮ್ಸ್ ನಿರ್ದೇಶಕರಿಗೆ ಸೂಚಿಸಿ, ಕಳೆದ ವರ್ಷಕಿಂತ ಈ ವರ್ಷದಲ್ಲಿ ಔಷಧಿಗಳು ಕಡಿಮೆ ಬಂದಿರುವ ಬಗ್ಗೆ ಜಿಲ್ಲಾ ಡ್ರಗ್ಸ್ ಹೌಸ್ ಇನ್‌ಚಾರ್ಜ್ ಅವರಿಂದ ಮಾಹಿತಿ ಪಡೆದು ಬೇಸರ ವ್ಯಕ್ತಪಡಿಸಿದರು.
ತಾಪಂ ಆಡಳಿತಾಧಿಕಾರಿ ಸೋಮಶೇಖರ್ ಮೇಸ್ತಾ, ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ.ಏನಗಗೌಡರ, ತಹಸೀಲ್ದಾರ ನಿಶ್ಚಲ್ ನರೋನಾ, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ರಾಜೇಂದ್ರ ರಾಣೆ, ನಗರಸಭೆ ಪೌರಾಯುಕ್ತ ಜಗದೀಶ ಹುಲಗಜ್ಜಿ, ಡಿವೈಎಸ್‌ಪಿ ಗಿರೀಶ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.