ಗ್ರಾಹಕರಿಗೆ ಅನುಕೂಲವಾಗುವ ಕಡೆ ವಿದ್ಯುತ್ ಬಿಲ್ ಕೌಂಟರ್ ಆರಂಭಿಸಿ

KannadaprabhaNewsNetwork |  
Published : Jun 03, 2025, 01:11 AM ISTUpdated : Jun 03, 2025, 01:12 AM IST
ಸ | Kannada Prabha

ಸಾರಾಂಶ

ವಿದ್ಯುತ್ ಗ್ರಾಹಕರಿಗೆ ಎನಿ ಟೈಮ್ ಪೇಮೆಂಟ್ (ಎಟಿಪಿ) ಕೇಂದ್ರ ರದ್ದಾಗಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ.

ಹೊನ್ನಾವರ: ಪಟ್ಟಣದಲ್ಲಿರುವ ವಿದ್ಯುತ್ ಗ್ರಾಹಕರಿಗೆ ಎನಿ ಟೈಮ್ ಪೇಮೆಂಟ್ (ಎಟಿಪಿ) ಕೇಂದ್ರ ರದ್ದಾಗಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಗ್ರಾಹಕರಿಗೆ ಅನುಕೂಲವಾಗುವ ಸ್ಥಳದಲ್ಲಿ ವಿದ್ಯುತ್ ಬಿಲ್ ಕೌಂಟರ್ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ ಪದಾಧಿಕಾರಿಗಳು ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು.

ತಾಲೂಕಿನ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಬಿಲ್ ತುಂಬಲು ಬಸ್ ನಿಲ್ದಾಣದಿಂದ ಹೆಸ್ಕಾಂ ಕಚೇರಿಗೆ ಹೋಗಿ ಬರಲು ದೂರವಾಗುವುದರಿಂದ ಪಟ್ಟಣದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸಾಯಿ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಎನಿ ಟೈಮ್ ಪೇಮೆಂಟ್ ಬಿಲ್ ಕೌಂಟರ್ ಕಾರ್ಯ ನಿರ್ವಹಿಸುತ್ತಿತ್ತು. ಇದರಿಂದ ಗ್ರಾಮೀಣ ಪ್ರದೇಶದ ಮತ್ತು ಎಲ್ಲ ಗ್ರಾಹಕರಿಗೆ ತುಂಬ ಅನುಕೂಲವಾಗುತ್ತಿತ್ತು. ಆದರೆ ಕಳೆದ ಒಂದು ತಿಂಗಳಿಂದ ಇದನ್ನು ಬಂದ್ ಮಾಡಲಾಗಿದೆ. ಇದರಿಂದ ವಿದ್ಯುತ್ ಬಿಲ್ ತುಂಬಲು ಹೆಸ್ಕಾಂ ಕಚೇರಿಗೆ ಹೋಗಿ ಬರಲು ಸಮಯ ಮತ್ತು ಆರ್ಥಿಕ ಹಾನಿ ಉಂಟಾಗುತ್ತಿದೆ. ವಯೋವೃದ್ಧರಿಗೆ, ಮಹಿಳೆಯರಿಗೆ ತುಂಬ ತೊಂದರೆಯಾಗುತ್ತಿದೆ. ಲಕ್ಷಾಂತರ ಗ್ರಾಹಕರನ್ನು ಹೊಂದಿರುವ ಹೊನ್ನಾವರ ಉಪವಿಭಾಗ ವ್ಯಾಪ್ತಿಯಲ್ಲಿ ಹೆಸ್ಕಾಂಗೆ ಕೋಟ್ಯಂತರ ರುಪಾಯಿ ಸಂದಾಯವಾಗುತ್ತಿದೆ. ಗ್ರಾಹಕರಿಗೆ ಅನುಕೂಲ ಅನುಕೂಲವಾಗುವಂತೆ ಬಸ್ ನಿಲ್ದಾಣ ಅಥವಾ ಮಿನಿ ವಿಧಾನಸೌಧದ ಇಲ್ಲವೇ ಪಪಂ ಅಕ್ಕಪಕ್ಕ ವಿದ್ಯುತ್ ಬಿಲ್ ಕೇಂದ್ರ ತೆರೆದು ವಿದ್ಯುತ್ ಗ್ರಾಹಕರಿಗೆ ಸೌಲಭ್ಯ ಒದಗಿಸಿ ಕೊಡಬೇಕು. ಇಲ್ಲದಿದ್ದರೆ ಜುಲೈ ೫ ರಂದು ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸೇರಿಕೊಂಡು ಹೊನ್ನಾವರ ಹೆಸ್ಕಾಂ ಕಚೇರಿ ಎದುರು ಪ್ರತಿಭಟಿಸಲಾಗುವುದು ಎಂದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ ಅಧ್ಯಕ್ಷ ಜಿ.ಎನ್.ಗೌಡ, ಕಾರ್ಯದರ್ಶಿ ಪ್ರಭು ಮಾಸ್ತಿ ಪಟಗಾರ, ರೈತ ಮುಖಂಡರಾದ ಎಲ್.ಪಿ.ಹೆಗಡೆ ಆಳಂಕಿ, ನಾಗಪ್ಪ ಗೌಡ ಕೆಕ್ಕಾರ, ಕೇಶವ ನಾಯ್ಕ ಕೆರವಳ್ಳಿ, ನೋಟರಿ ವಕೀಲರಾದ ಎಸ್.ಎನ್ ನಾಯ್ಕ, ರಕ್ಷಣಾ ವೇದಿಕೆಯ ಅಧ್ಯಕ್ಷ ನಸೂರುಲ್ಲ, ಮಂಜುನಾಥ ಗೌಡ ವಂದೂರ ಇತರರಿದ್ದರು. ಹೆಸ್ಕಾಂ ಸಹಾಯಕ ಎಂಜಿನಿಯರ್ ರಾಮಕೃಷ್ಣ ಭಟ್ ಮತ್ತು ಶಂಕರ ಗೌಡ ಮನವಿ ಸ್ವೀಕರಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ