ಶೈಕ್ಷಣಿಕ ವರ್ಷ ಆರಂಭ: ಸರ್ಕಾರಿ ಶಾಲಾ ಮಕ್ಕಳಿಂದ ಸಂಭ್ರಮ

KannadaprabhaNewsNetwork |  
Published : Jun 02, 2026, 02:00 AM IST
1ಕೆಎಂಎನ್ ಡಿ18,19 | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳೆರಡೂ ಖಾಸಗೀಕರಣದ ಹಿಡಿತದಿಂದ ಬಿಡುಗಡೆಯಾಗಬೇಕು. ಸರ್ಕಾರಿ ಶಾಲೆಗಳು ಉಳಿದು ಬೆಳೆಯದಿದ್ದರೆ ಮುಂದಿನ ದಿನಗಳಲ್ಲಿ ಬಡವರು, ರೈತಾಪಿ ಜನ ಮತ್ತು ಮದ್ಯಮ ವರ್ಗದ ಜನರ ಮಕ್ಕಳಿಗೆ ಶಿಕ್ಷಣ ಗಗನ ಕುಸುಮವಾಗಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶೈಕ್ಷಣಿಕ ವರ್ಷ ಆರಂಭದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಶಿಕ್ಷಕ ಸಮುದಾಯ ಸಡಗರ ಸಂಭ್ರಮದಿಂದ ವಿದ್ಯಾರ್ಥಿಗಳನ್ನು ತಮ್ಮ ಶಾಲಾ ಕಾಲೇಜುಗಳಿಗೆ ಸ್ವಾಗತಿಸಿದರು.

ಸರ್ಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಸೇರಿದಂತೆ ತಾಲೂಕಿನಲ್ಲಿ ಒಟ್ಟು 376 ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳು ನಿಗದಿತ ಸಮಯಕ್ಕೆ ಆರಂಭಗೊಂಡವು.

ಶಾಲಾ ಪ್ರವೇಶ ದ್ವಾರದಲ್ಲಿ ಕಾದುನಿಂತ ಶಿಕ್ಷಕರು ಮಕ್ಕಳಿಗೆ ಗುಲಾಬಿ ನೀಡಿ ಬರಮಾಡಿಕೊಂಡರು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಗುಲಾಬಿ ಜೊತೆಗೆ ಶಿಕ್ಷಕ ಸಮುದಾಯ ಹಾಗೂ ಎಸ್‌ಡಿಎಂಸಿ ಸಮಿತಿಯ ಸದಸ್ಯರು ಸಿಹಿ ನೀಡಿ ಮಕ್ಕಳನ್ನು ಸ್ವಾಗತಿಸಿದರು. ತಾಲೂಕಿನ ಉದ್ದಗಲಕ್ಕೂ ಸಂಚರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಶಿಕ್ಷಕರೊಂದಿಗೆ ಸೇರಿ ಮಕ್ಕಳ ಶಾಲಾ ಪ್ರವೇಶಾತಿ ಸಂಭ್ರಮಿಸಿದರು.

ಪಟ್ಟಣದ ಕೆಪಿಎಸ್ ಶಾಲೆ ಮತ್ತು ಬೂಕನಕೆರೆ ಕೆಪಿಎಸ್ ಶಾಲೆಗೆ ಆಗಮಿಸಿದ ಶಾಸಕ ಎಚ್.ಟಿ.ಮಂಜು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸೇರಿ ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತಿಸಿದರು. ಸರ್ಕಾರದಿಂದ ನೀಡಲಾಗುತ್ತಿರುವ ಶಾಲಾ ಸಮವಸ್ತ್ರ, ಪಠ್ಯ ಪುಸ್ತಕ ಮತ್ತಿತರ ಶೈಕ್ಷಣಿಕ ಪರಿಕರ ವಿತರಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳೆರಡೂ ಖಾಸಗೀಕರಣದ ಹಿಡಿತದಿಂದ ಬಿಡುಗಡೆಯಾಗಬೇಕು. ಸರ್ಕಾರಿ ಶಾಲೆಗಳು ಉಳಿದು ಬೆಳೆಯದಿದ್ದರೆ ಮುಂದಿನ ದಿನಗಳಲ್ಲಿ ಬಡವರು, ರೈತಾಪಿ ಜನ ಮತ್ತು ಮದ್ಯಮ ವರ್ಗದ ಜನರ ಮಕ್ಕಳಿಗೆ ಶಿಕ್ಷಣ ಗಗನ ಕುಸುಮವಾಗಲಿದೆ ಎಂದು ಎಚ್ಚರಿಸಿದರು.

ಸರ್ಕಾರಿ ಶಾಲೆಗಳ ಉಳಿವಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ವಹಿಸಬೇಕು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಕ್ಷೇತ್ರದ ಶಾಸಕನಾಗಿ ನಾನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.

ಪಟ್ಟಣದ ಕೆಪಿಎಸ್ ಶಾಲೆ ಆವರಣದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ 108 ವರ್ಷಗಳು ತುಂಬಿವೆ. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಶತಮಾನದ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಸರತಿ ಸಾಲಿನಲ್ಲಿ ನಿಲ್ಲುವ ಹಂತಕ್ಕೆ ಸದರಿ ಶಾಲೆ ಬೆಳೆದಿದೆ ಎಂದರು.

ಕೆಪಿಎಸ್ ಶಾಲೆಯಲ್ಲಿ 2500ಕ್ಕೂ ಅಧಿಕ ಮಕ್ಕಳು ಕಲಿಕೆ ಮಾಡುತ್ತಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ ತಾಲೂಕಿನ ಎಲ್ಲಾ ಭಾಗಗಳಲ್ಲೂ ಪೋಷಕರು ಮತ್ತು ಶಿಕ್ಷಕರು ಒಡಗೂಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದರೆ ಶಿಕ್ಷಣ ಕ್ಷೇತ್ರ ಖಾಸಗೀಕರಣದ ಹಾವಳಿಯಿಂದ ತನ್ನಿಂದ ತಾನೇ ಮುಕ್ತಾಯಗೊಳ್ಳಲಿದೆ ಎಂದರು.

ತಾಲೂಕಿನ ಬೂಕನಕೆರೆಯಲ್ಲಿ ಗ್ರಾಮಸ್ಥರು ಗ್ರಾಮದ ಗೋಗಾಲಮ್ಮ ದೇವಾಲಯದ ಆವರಣದಿಂದ ಶಾಸಕ ಎಚ್.ಟಿ.ಮಂಜು ಮತ್ತು ವಿದ್ಯಾರ್ಥಿಗಳನ್ನು ಎತ್ತಿನ ಗಾಡಿಯಲ್ಲಿ ಕೂರಿಸಿಕೊಂಡು ಮೆರವಣಿಗೆಯ ಮೂಲಕ ಶಾಲಾ ಆವರಣಕ್ಕೆ ಕರೆತಂದರು. ಮಕ್ಕಳಿಂದಲೇ ಟೇಪ್ ಕತ್ತರಿಸುವ ಮೂಲಕ ಶಾಸಕರು ಮಕ್ಕಳನ್ನು ಶಾಲಾ ಆವರಣಕ್ಕೆ ಬರಮಾಡಿಕೊಂಡರು.

ತಾಲೂಕಿನ ದೊದ್ದನಕಟ್ಟೆ, ತೆಂಡೇಕೆರೆ ಮುಂತಾದ ಕಡೆ ಗ್ರಾಮಸ್ಥರು ಶಿಕ್ಷಕರು ಹಾಗೂ ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ಮೆರವಣಿಗೆ ಮೂಲಕ ಸಾಲೆಗಳಿಗೆ ಕರೆತಂದು ಸಂಭ್ರಮಿಸಿದರು. ಬಹುತೇಕ ಶಾಲೆಗಳಿಗಳಲ್ಲಿ ಪೋಷಕರ ಸಭೆ ನಡೆದು ಸರ್ಕಾರಿ ಶಾಲೆಗಳ ಉಳಿವಿನ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿ ಶಾಲೆಗಳ ಅಭಿವೃದ್ದಿಗೆ ಪೋಷಕರು ಸಹಕಾರ ಕೋರಲಾಯಿತು. ತಾಲೂಕಿನ ಮಾರ್ಗೋನಹಳ್ಳಿ, ಹರಿಹರಪುರ ಮುಂತಾದ ಕಡೆ ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸುವ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಜಾಗೃತಿ ಜಾಥಾ ನಡೆಸಲಾಯಿತು.

ಮಕ್ಕಳನ್ನು ಕರೆತರಲು ಸರ್ಕಾರಿ ಶಾಲೆಗೆ ಬಸ್ ನೀಡಿದ ಗ್ರಾಮಸ್ಥರು

ಕೆ.ಆರ್.ಪೇಟೆ:

ತಾಲೂಕಿನ ಕತ್ತರಘಟ್ಟ ಗ್ರಾಮಸ್ಥರು ಪಟ್ಟಣ ಹಾಗೂ ಸುತ್ತಮುತ್ತಲ ಹಳ್ಳಿಗಳಿಂದ ಮಕ್ಕಳನ್ನು ತಮ್ಮೂರಿನ ಶಾಲೆಗೆ ಆಕರ್ಷಿಸಲು ಖಾಸಗಿ ಬಸ್ ಒಂದನ್ನು ಲೀಸ್ ಪಡೆದು ಮಕ್ಕಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿ ಗಮನ ಸೆಳೆದಿದ್ದಾರೆ.

ಗ್ರಾಮದ ನಿವೃತ್ತ ಎಂಜಿನಿಯರ್ ಶಿವಕುಮಾರ್ ಸರ್ಕಾರಿ ಉಳಿವಿಗಾಗಿ 1.45 ಕೋಟಿ ರು. ನೀಡಿ ತಮ್ಮ ತಂದೆ ತಾಯಿ ಹೆಸರಿನಲ್ಲಿ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿ ಮಕ್ಕಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಿಕೊಟ್ಟಿದ್ದಾರೆ.

ಇದರ ಪರಿಣಾಮ ಸದರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ 145 ಕ್ಕೇರಿದೆ. ತಮ್ಮೂರಿನ ಶಾಲೆಯನ್ನು ಕಾನ್ವೆಂಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿಲು ನಿರ್ಧರಿಸಿರುವ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಶಾಲೆಗಾಗಿಯೇ ಸ್ವಂತ ಬಸ್ ಖರೀದಿಸಿ ಕೊಡುವುದಾಗಿ ಗ್ರಾಪಂ ಮಾಜಿ ಸದಸ್ಯ ಪರಮೇಶ್ ನೇತೃತ್ವದಲ್ಲಿ ನಡೆದ ಪೋಷಕರ ಸಭೆಯಲ್ಲಿ ನಿರ್ಧರಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದು ಮೇಲೆ ಎಲ್ಲೇ ಹಲ್ಲೆ ಆದ್ರೂ ಧರಣಿ: ಬಿವೈವಿ
ವೈದ್ಯ ಡಾ.ಚಂದ್ರಶೇಖರ್ ಅವರ ’ಹೆಜ್ಜೆಗುರುತು’ ಕವನ ಸಂಕಲನ ಬಿಡುಗಡೆ