ಉದ್ಯೋಗಕ್ಕಾಗಿ ಅಲೆಯದೆ ಸ್ವಯಂ ಉದ್ಯೋಗ ಆರಂಭಿಸಿ

KannadaprabhaNewsNetwork |  
Published : Nov 24, 2024, 01:45 AM IST
ಸಿಕೆಬಿ-3 ವಿಷ್ಣುಪ್ರಿಯ ಪದವಿ ಕಾಲೇಜಿನಲ್ಲಿ  ಆಯೋಜಿಸಿದ್ದ ಗ್ರಾಜುಯೇಷನ್ ಡೇ ಮತ್ತು ಪ್ರಶರ್ಸ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಪ್ರದೀಪ್ ಈಶ್ವರ್ ಪದವಿ ಪ್ರಧಾನ ಮಾಡಿದರು | Kannada Prabha

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ಸುಖವನ್ನು ಅಪೇಕ್ಷಿಸಿದರೆ ಸಾಧಕರ ಸಾಲಿನಲ್ಲಿ ನಿಲ್ಲಲ್ಲು ಸಾಧ್ಯವಾಗುವುದಿಲ್ಲ. ಶೈಕ್ಷಣಿಕ ಜೀವನ ಹೂವಿನ ಹಾಸಿಗೆಯಂತಲ್ಲ, ಬದಲಿಗೆ ಮುಳ್ಳಿನ ಹಾದಿಯಂತಿರುತ್ತದೆ. ಯಾರು ಇಂತಹ ಕಠಿಣ ಹಾದಿಯನ್ನು ಯಶಸ್ವಿಯಾಗಿ ಕ್ರಮಿಸಿ ಮುಂದೆ ಸಾಗುತ್ತಾರೋ ಅವರಿಗೆ ಮಾತ್ರ ಬಂಗಾರದಂತಹ ಜೀವನ ದೊರೆಯಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿದ್ಯಾರ್ಥಿಗಳೇ ಆಗಿರಲಿ, ಯುವಕರೇ ಆಗಿರಲಿ ತಾನು ಏನಾಗಬೇಕು ಎಂಬ ಬಗ್ಗೆ ಸ್ಪಷ್ಟತೆಯಿಟ್ಟುಕೊಂಡು ಪರಿಶ್ರಮದ ಜತೆಗೆ ಗುರುಗಳ ಮಾರ್ಗದರ್ಶನ ಪಡೆದರೆ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.ನಗರದ ಹೊರವಲಯ ವಿಷ್ಣುಪ್ರಿಯ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಜುಯೇಷನ್ ಡೇ ಮತ್ತು ಪ್ರಷರ್ಸ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸುಖವನ್ನು ಅಪೇಕ್ಷಿಸಿದರೆ ಸಾಧಕರ ಸಾಲಿನಲ್ಲಿ ನಿಲ್ಲಲ್ಲು ಸಾಧ್ಯವಾಗುವುದಿಲ್ಲ. ಶೈಕ್ಷಣಿಕ ಜೀವನ ಹೂವಿನ ಹಾಸಿಗೆಯಂತಲ್ಲ, ಬದಲಿಗೆ ಮುಳ್ಳಿನ ಹಾದಿಯಂತಿರುತ್ತದೆ. ಯಾರು ಇಂತಹ ಕಠಿಣ ಹಾದಿಯನ್ನು ಯಶಸ್ವಿಯಾಗಿ ಕ್ರಮಿಸಿ ಮುಂದೆ ಸಾಗುತ್ತಾರೋ ಅವರಿಗೆ ಮಾತ್ರ ಬಂಗಾರದಂತಹ ಜೀವನ ದೊರೆಯಲಿದೆ ಎಂದರು.ಸ್ವಯಂ ಉದ್ಯೋಗ ಆರಂಭಿಸಿ

ವಿದ್ಯಾರ್ಥಿಗಳೇ ಉನ್ನತ ಶಿಕ್ಷಣದ ನಂತರ ಉದ್ಯೋಗ ಹುಡುಕಿಕೊಂಡು ಕಂಪನಿಗಳ ಬಳಿ ಉದ್ಯೋಗಕ್ಕೆ ಅಲೆಯದೆ ಸ್ವಯಂ ಉದ್ಯೋಗ ಕೈಗೊಂಡು ಉದ್ಯಮಪತಿಗಳಾಗಲು ಗುರಿಯಿಟ್ಟುಕೊಳ್ಳಿ. ನನ್ನಂತೆ ಹಳ್ಳಿಯಿಂದ ಬಂದು ನಗರ ಸೇರಿ ಸಂಸ್ಥೆಯನ್ನು ಕಟ್ಟಿದಂತೆ ನೀವೂ ಕೂಡ ಮಾಡಲು ಸಾಧ್ಯವಿದೆ. ನೀವೇ ನಾಲ್ಕು ಮಂದಿಗೆ ಉದ್ಯೋಗ ಕೊಟ್ಟಾಗ ಸಿಗುವ ನೆಮ್ಮದಿ ಕೆಲಸ ಮಾಡಿದಾಗ ದೊರೆಯುವುದಿಲ್ಲ. ಈ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ ಎಂದರು.ಮಕ್ಕಳೇ ಅಪ್ಪ ಅಮ್ಮನ ಕಷ್ಟವನ್ನು ಅರ್ಥಮಾಡಿಕೊಂಡು ಅವರಿಗೆ ಗೌರವ ಬರುವ ಹಾಗೆ ನಡೆದುಕೊಳ್ಳಿ. ಪೋಷಕರ ಪರಿಶ್ರಮ ಗೌರವಿಸುವುದು ಭಾರತೀಯ ಸಂಸ್ಕೃತಿಯಾಗಿದೆ. ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳಿವೆ. ಪ್ರೀತಿ ಪ್ರೇಮದಲ್ಲಿ ಬಿದ್ದು ಭವಿಷ್ಯ ಹಾಳು ಮಾಡಿಕೊಳ್ಳದೆ, ಸಮಾಜಕ್ಕೆ ಆದರ್ಶವಾಗುವ ಹಾಗೆ ಬದುಕುವುದು ಕಲಿಯಿರಿ. ನಾನು ಪರಿಶ್ರಮ ಅಕಾಡೆಮಿಯಲ್ಲಿ ದುಡಿದ ನನ್ನ ಸ್ವಂತ ಸಂಪಾದನೆಯಲ್ಲಿ ಬಡಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದೇನೆ. ಇದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದರು.ಪೋಷಕರನ್ನು ಕಡೆಗಣಿಸದಿರಿ

ಅಪ್ಪ ಹೆಣ್ಣು ಮಕ್ಕಳನ್ನು ಸದಾಕಾಲ ಗಾಡಿಯಲ್ಲಿ ಮುಂದೆ ಕೂಡಿಸಿಕೊಂಡೇ ಜಗತ್ತನ್ನು ತೋರಿಸಿದರೆ, ಮದುವೆಯಾದ ಮೇಲೆ ಗಂಡ ಹಿಂದೆ ಕೂರಿಸಿಕೊಂಡು ನೀನು ಯಾವಾಗಲೂ ನನ್ನ ಹಿಂದೆಯೇ ಇರಬೇಕು ಎಂದು ಭಾವಿಸುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಮುಂದೆ ಮುನ್ನಡೆಯುವುದನ್ನು ಕಲಿಯಬೇಕು. ಪ್ರೀತಿಯಲ್ಲಿ ವಿಫಲರಾದಾಗ ತಕ್ಷಣ ಜೀವನ ಹಾಳುಮಾಡಿಕೊಳ್ಳುವ ಮೂಲಕ ತಂದೆತಾಯಿಗಳಿಗೆ ನೋವು ಕೊಡಬೇಡಿ. ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಕಡಿಮೆ, ಕೈಕೊಡುವವರ ಸಂಖ್ಯೆಯೇ ಅಧಿಕ. ಈಸತ್ಯವನ್ನು ಮನಗಂಡು ಯಾವ ಬದುಕು ಬೇಕೋ ಬೇಕೋ ಅದನ್ನು ಆರಿಸಿಕೊಳ್ಳಿ ಎಂದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ನಟರಾಜ್, ಕಾರ್ಯಕಾರಿ ನಿರ್ದೇಶಕ ರಕ್ಷಿತ್‌ರೆಡ್ಡಿ, ಸಂಸ್ಥೆಯ ಅಧ್ಯಕ್ಷ ರಾಮಚಂದ್ರರೆಡ್ಡಿ, ಕಾರ್ಯದರ್ಶಿ ಶ್ಯಾಮಲಾರೆಡ್ಡಿ ಬೋದಕ ಬೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ