ಎಫ್‌ಆರ್‌ಪಿ ದರ ಘೋಷಿಸಿಯೇ ಕಾರ್ಖಾನೆ ಆರಂಭಿಸಿ: ಕೋಡಿಹಳ್ಳಿ ಚಂದ್ರಶೇಖರ

KannadaprabhaNewsNetwork |  
Published : Oct 30, 2024, 01:38 AM IST
ಕೋಡಿಹಳ್ಳಿ | Kannada Prabha

ಸಾರಾಂಶ

ಕಬ್ಬಿನ ಎಫ್‌ ಆರ್‌ಪಿ ದರ ಘೋಷಣೆ ಮಾಡಿದ ಬಳಿಕವೇ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಬ್ಬಿನ ಎಫ್‌ ಆರ್‌ಪಿ ದರ ಘೋಷಣೆ ಮಾಡಿದ ಬಳಿಕವೇ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಬೆಳೆದ ಬೆಳೆಗಳು ಹಾನಿಗೀಡಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರ ಘೋಷಿಸಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ದರ ಘೋಷಣೆ ಮಾಡಿಲ್ಲ. ಸರ್ಕಾರಿ ನೌಕರರನ್ನು ಹಾಗೂ ರೈತರನ್ನು ನೋಡುವ ಸರ್ಕಾರದ ದೃಷ್ಟಿ ಬೇರೆಯಾಗಿದೆ. ಹಾಗಾಗಿ, ರೈತರು ಸರ್ಕಾರದ ಮೇಲೆ ಯಾವ ರೀತಿ ವಿಶ್ವಾಸ, ನಂಬಿಕೆ ಇಟ್ಟುಕೊಳ್ಳಬೇಕು ಎಂದು ಪ್ರಶ್ನಿಸಿದರು.

ರೈತರಿಗೆ ಸರ್ಕಾರ ವಂಚನೆ ಮಾಡುತ್ತಿವೆ. ವಂಚನೆ ತಕ್ಷಣವೇ ನಿಲ್ಲಿಸಬೇಕು. ರೈತರಿಗೆ ಪರಿಹಾರ ಕಾರ್ಯಕ್ರಮ ಮುಂದುವರೆಸಬೇಕು ಎಂದು ಆಗ್ರಹಿಸಿದ ಅವರು, ಕಬ್ಬಿನ ದರ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಂಡಿದೆ ಎಂಬುದನ್ನು ತಿಳಿಸಬೇಕು. ಈಗಾಗಲೇ ಸಕ್ಕರೆ ಕಾರ್ಖಾನೆ ಆರಂಭವಾಗಿವೆ. ದರ ಘೋಷಣೆ ಮಾಡದೇ ಕಾರ್ಖಾನೆಗಳು ಕಾರ್ಯಾರಂಭ ಮಾಡಿವೆ. ಈನಿಟ್ಟಿನಲ್ಲಿ ರಾಜ್ಯ ಸರ್ಕಾರದ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ಕಬ್ಬಿನ ದರ ವಿಚಾರದಲ್ಲಿ ರಾಜ್ಯ ಸರ್ಕಾರ ಈವರೆಗೂ ಯಾವುದೇ ತೀರ್ಮಾನ ಕೈಗೊಳ್ಳದಿರುವುದು ರೈತರ ದೊಡ್ಡ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿನ ಒಂದೊಂದು ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ಪ್ರಮಾಣ ಬೇರೆಬೇರೆಯಾಗಿದೆ. ಸಕ್ಕರೆ ಇಳುವರಿ ವ್ಯತ್ಯಾಸವಾಗಲು ಕಾರಣವೇನು ಎಂಬುದನ್ನು ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ತಜ್ಞರ ಕಮಿಟಿ ರಚಿಸಬೇಕು. ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣ, ಎಫ್‌ಆರ್‌ಪಿ ದರ ಘೋಷಣೆ ಮಾಡಲು ರಾಜ್ಯ ಸರ್ಕಾರಕ್ಕೆ ಈವರೆಗೂ ಆಗಿಲ್ಲ. ರೈತರ ಪಾಲಿಗೆ ಸರ್ಕಾರ ಬದುಕಿದೆಯಾ? ಸತ್ತಿದೆಯಾ? ಎಂಬುದನ್ನು ತಿಳಿಸಬೇಕು. ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸದಿದ್ದರೆ ಬೆಳಗಾವಿ ಅಧಿವೇಶನದಲ್ಲಿ ದೊಡ್ಡ ಪ್ರಮಾಣದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.----ಬಾಕ್ಸ್

ಪ್ರತಿಟನ್‌ ಕಬ್ಬಿಗೆ ₹4500 ದರ ಘೋಷಿಸಲು ರೈತರ ಆಗ್ರಹ:

ಬೆಳಗಾವಿ: ಪ್ರತಿ ಟನ್‌ ಕಬ್ಬಿಗೆ ₹ 4500 ದರ ನಿಗದಿ ಮಾಡಿ ಘೋಷಣೆ ಮಾಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ನಗರದ ಲಕ್ಷ್ಮೀಟೇಕಡಿಯ ಎಸ್‌. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರು ಒಕ್ಕೊರಲಿನಿಂದ ಆಗ್ರಹಿಸಿದರು. ಕೇಂದ್ರ ಸರ್ಕಾರದ ಎಫ್‌ಆರ್‌ಪಿಯನ್ನು ನಾವು ಒಪ್ಪಿಕೊಂಡಿಲ್ಲ. ಕೇಂದ್ರದ ಎಫ್‌ಆರ್‌ಪಿ ಪಾಲನೆಯಾದರೆ ರೈತರು ಯಾರೂ ಬದುಕಲು ಆಗದು. ಈ ಬಾರಿ ಪ್ರತಿಟನ್‌ ಕಬ್ಬಿಗೆ ₹ 4500 ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಮಹಾರಾಷ್ಟ್ರದಲ್ಲಿ ₹ 3700 ದರ ನಿಗದಿ ಮಾಡಲಾಗಿದೆ. ಅಲ್ಲಿ ದರ ಹೆಚ್ಚಳ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ದರ ಹೆಚ್ಚಳ ಮಾಡಿಲ್ಲ. ದರ ಘೋಷಣೆ ಮಾಡಿದ ಬಳಿಕವೇ ಸಕ್ಕರೆ ಕಾರ್ಖಾನೆಯವರು ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕು. ಹಳೆ ಬಾಕಿ ಕಬ್ಬಿನ ಬಿಲ್‌ ನ್ನು ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ