ಕನ್ನಡಪ್ರಭ ವಾರ್ತೆ ಉಡುಪಿಜಾತಿಗಣತಿಯ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡ ತೀರ್ಮಾನದಿಂದ ಖುಷಿಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.ಅವರು ಗುರುವಾರ ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಮಾಡಿರುವ ಗಣತಿಯನ್ನು ರಾಜ್ಯದ ಬಿಜೆಪಿಯರು ಟೀಕಿಸುತಿದ್ದರು, ಆದರೆ ಈಗ ಜಾತಿ ಗಣತಿಯ ಬಗ್ಗೆ ಬಿಜೆಪಿ ಹೈಕಮಾಂಡ್‌ನವರೇ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಂಡಿರುವಾಗ, ರಾಜ್ಯದ ಬಿಜೆಪಿಯವರು ಅದನ್ನೀಗ ಒಪ್ಪಲೇಬೇಕು ಎಂದರು. ಜಾತಿ ಜನಗಣತಿಯಿಂದ ಮೀಸಲಾತಿ ಕೊಡುವುದು ಕಷ್ಟ. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಬಗ್ಗೆ ಗಣತಿ ಮಾಡಿದರೇ ಮೀಸಲಾತಿ ಕೊಡುವುದು ಸುಲಭ. ಅದಕ್ಕೆ ಕರ್ನಾಟಕದಲ್ಲಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡಿದ್ದೇವೆ ಎಂದವರು ಸಮರ್ಥಿಸಿಕೊಂಡರು.ಬಿಜೆಪಿಯವರು ಅದು ವೈಜ್ಞಾನಿಕ ಅಲ್ಲ ಎಂದರೆ ಕಾರಣ, ದಾಖಲೆ ಕೊಡಲಿ. ಹಿಂದೆ ಜಯಪ್ರಕಾಶ್ ಹೆಗ್ಡೆ ವರದಿಯನ್ನು ಸದನದ ಮುಂದೆ ಮಂಡಿಸುತ್ತೇವೆ ಎಂದು ಆಗ ಮಂತ್ರಿಯಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಹೇಳುತ್ತಿದ್ದರು. ಆದರೆ ಬಿಜೆಪಿ ಸರ್ಕಾರ ನಮ್ಮ ವರದಿಯನ್ನು ತೆಗೆದುಕೊಳ್ಳಲೇ ಇಲ್ಲ. ತೆಗೆದುಕೊಂಡಿದ್ದರೆ ನಾವು ಅವತ್ತೇ ಸರ್ಕಾರಕ್ಕೆ ಹಸ್ತಾಂತರ ಮಾಡುತ್ತಿದ್ದೆವು ಎಂದರು. ನಮ್ಮ ಜವಾಬ್ದಾರಿ ನಿರ್ವಹಿಸಿದ್ದೇವೆ. ತೀರ್ಮಾನ ತೆಗೆದುಕೊಳ್ಳುವುದು ಸರ್ಕಾರ, ವರದಿ ಮಂಡನೆ ಆಗಲಿ ಎಂಬುದು ನಮ್ಮ ಅಭಿಪ್ರಾಯ. ಕ್ಯಾಬಿನೆಟ್ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ನೋಡೋಣ, ಎಲ್ಲಾ ರಾಜ್ಯಗಳು ಕರ್ನಾಟಕ ಮಾದರಿಯ ಗಣತಿಯನ್ನು ಮಾಡಬೇಕು ಎಂಬುದು ನನ್ನ ಆಕಾಂಕ್ಷೆಯಾಗಿದೆ ಎಂದರು. .....................ಯುದ್ಧ ಕೇಂದ್ರ ಸರ್ಕಾರದ ತೀರ್ಮಾನಯುದ್ಧ ಬೇಕೋ ಬೇಡವೋ ಎಂದು ತೀರ್ಮಾನ ತೆಗೆದುಕೊಳ್ಳುವುದು ಕೇಂದ್ರ ಸರ್ಕಾರ. ಯುದ್ದ ಬಿಟ್ಟು ಬೇರೆ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗುವುದಾದರೆ ಮಾಡಬೇಕು. ಸಿಎಂ ಸಿದ್ದರಾಮಯ್ಯ ಮಾತ್ರ ಅಲ್ಲ, ಪೇಜಾವರ ಸ್ವಾಮೀಜಿಗಳೂ ಅದನ್ನೇ ಹೇಳಿದ್ದಾರೆ ಎಂದು ಹೆಗ್ಡೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪಹಲ್ಗಾಮ್ ಘಟನೆಯಲ್ಲಿ ಆದ ನೋವು ಆ ಕುಟುಂಬಗಳಿಗೆ ಮಾತ್ರ ಅಲ್ಲ, ಇಡೀ ದೇಶಕ್ಕಾದ ನೋವು, ನೋವಲ್ಲಿರುವ ಕುಟುಂಬಸ್ಥರ ಹೇಳಿಕೆಗಳನ್ನು ಟೀಕೆ ಮಾಡುವುದು ಸರಿಯಲ್ಲ, ಘಟನೆ ಬಗ್ಗೆ ಹೀಗೆ ಆಗಿದೆ ಎಂಬ ಸ್ಕ್ರಿಪ್ಟ್ ಕೊಡುವ ಪರಿಸ್ಥಿತಿ ಬರಬಾರದು. ಪ್ರತ್ಯಕ್ಷ ಘಟನೆಯನ್ನು ಕುಟುಂಬಗಳು ವಿವರಿಸಿವೆ. ಅದನ್ನು ಯಾರು ಟೀಕೆ ಮಾಡಬಾರದು ಎಂದಭಿಪ್ರಾಯಪಟ್ಟರು.