ರಾಜ್ಯ ಬಜೆಟ್‌ ಸಮಗ್ರ ಅಭಿವೃದ್ಧಿಗೆ ಪೂರಕ

KannadaprabhaNewsNetwork | Published : Mar 9, 2025 1:45 AM

ಸಾರಾಂಶ

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೇ ಸಮಾನತೆಯ ಬಜೆಟ್‌ ಮಂಡಿಸಿ, ಇದರ ಮೂಲಕ ಬಜೆಟ್‌ ಮತ್ತು ಆಡಳಿತ ವ್ಯವಸ್ಥೆ ಯ ಕುರಿತು ಎದ್ದಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 16ನೇ ಸಮಾನತೆಯ ಬಜೆಟ್‌ ಮಂಡಿಸಿ, ಇದರ ಮೂಲಕ ಬಜೆಟ್‌ ಮತ್ತು ಆಡಳಿತ ವ್ಯವಸ್ಥೆ ಯ ಕುರಿತು ಎದ್ದಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಒತ್ತು ನೀಡಿ 45 ಸಾವಿರ ಕೋಟಿ ರು ನೀಡಿದ್ದಾರೆ. ಇದೇ ರೀತಿ ಎಲ್ಲ ವರ್ಗಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದು, ಒಟ್ಟಾರೆಯಾಗಿ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಬಜೆಟ್‌ ಮಂಡಿಸಿದ್ದಾರೆ ಎಂದ ಅವರು, ಕಳೆದ ಬಾರಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗಿತ್ತು. ಈ ಬಾರಿ ಕಲಿಕೆಗೆ ಒತ್ತು ನೀಡಲಾಗಿದೆ ಎಂದರು.

ಈ ಬಾರಿ ಪರೀಕ್ಷೆಯಲ್ಲಿ ಬಿಗಿಕ್ರಮ ಕೈಗೊಂಡಿದ್ದೆವು. ಗ್ರೇಸ್ ಮಾರ್ಕ್ಸ್‌ ಕೂಡ ಇನ್ನೂ ಮುಂದೆ ಇರುವುದಿಲ್ಲ. ಆದರೆ ಎಲ್ಲ ಶಾಲೆಗಳಿಗೆ ಟಾರ್ಗೆಟ್ ಕೊಟ್ಟಿದ್ದೇವೆ. ಗಣಿತ-ಗಣಕ, ಇಂಗ್ಲಿಷ್ -ಕನ್ನಡ ಟೀಚರ್‌ಲೆಸ್ ಶಿಕ್ಷಣ ಸ್ಕಿಲ್ ಯೆಟ್ ಸ್ಕೂಲ್, ಭಾಷಾ ಪರಿಣಿತಿ, ಓದು ಕರ್ನಾಟಕ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಓದುವ ಪರಿಜ್ಞಾನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಲಿಕೆಯಲ್ಲಿ ಸುಧಾರಣೆ ತರಲು ಅನೇಕ ಹೊಸ ಕ್ರಮ ಕೈಗೊಳ್ಳಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ 5600 ಬೇರೆ ಕಡೆ 5 ಸಾವಿರ ಒಟ್ಟಾರೆಯಾಗಿ 18 ಸಾವಿರ ಶಿಕ್ಷಕರ ನೇಮಕಾತಿ ಆಗಲಿದೆ. ಅತಿಥಿ ಉಪನ್ಯಾಸಕರ ಸಂಬಳ 2 ಸಾವಿರ ರು. ಹೆಚ್ಚಳವಾಗಿದೆ. ಬಿಸಿಯೂಟ ಕಾರ್ಮಿಕರಿಗೆ 1 ಸಾವಿರ ಹೆಚ್ಚಿಸಲಾಗಿದೆ. 4 ಸಾವಿರ ಕ್ಲಾಸ್ ರೂಮ್‌ಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. 100 ಕೋಟಿ ರು,ವನ್ನು ಪೀಠೋಪಕರಣಗಳಿಗೆ ಹಾಗೂ ಅಡಿಗೆ ಪಾತ್ರೆಗಳ ಬದಲಾವಣೆಗೆ ನೀಡಲಾಗಿದೆ ಎಂದು ವಿವರಿಸಿದರು.

ಜಿಲ್ಲೆಗೆ ಏನೇನು ?:

ಜಿಲ್ಲೆಗೆ ಸಂಬಂಧಪಟ್ಟಂತೆ 200 ಕೋಟಿ ರು. ವೆಚ್ಚದ ಜಿಲ್ಲಾಡಳಿತ ಭವನಕ್ಕೆ 75 ಕೋಟಿ ರು. ಅನುದಾನ ಬರಲಿದ್ದು, ಎರಡೂವರೆ ವರ್ಷದಲ್ಲಿ ಈ ಭವನ ಪೂರ್ಣಗೊಳ್ಳಲಿದೆ ಎಂದರು.

ಕ್ಯಾನ್ಸರ್ ಆಸ್ಪತ್ರೆ ವಿವಾದವನ್ನು ಸರಿಪಡಿಸಲಾಗುವುದು. ಗ್ರಾಮೀಣ ಭಾಗಗಳಲ್ಲಿ ನೀರಾವರಿಗೆ ಅನುದಾನ ನೀಡಲಾಗಿದೆ. ಸೊರಬ , ಶಿರಾಳಕೊಪ್ಪ, ಆನವಟ್ಟಿಗೆ ಶರಾವತಿಯಿಂದ 160 ಕೋಟಿ ರು. ವೆಚ್ಚದಲ್ಲಿ ಪೈಪ್‌ಲೈನ್ ಹಾಕಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಎಲೆಚುಕ್ಕಿ ರೋಗ ತಡೆ ಮತ್ತು ಸಂಶೋಧನೆಗೆ 62 ಕೋಟಿ ರು. ಕೆಎಫ್‌ಡಿ ಲಸಿಕೆ ಸಂಶೋಧನೆಗೆ 50 ಕೋಟಿ ರು., ಭೂ ಕುಸಿತ ತಡೆಗೆ ಅನುದಾನ ಸಣ್ಣ ಮತ್ತು ದೊಡ್ಡ ನೀರಾವರಿಗೆ ವಿಶೇಷ ಅನುದಾನ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 230 ಕೋಟಿ ರು. ಗ್ಯಾರಂಟಿ ಯೋಜನೆಗಳಿಗೆ ಹೋಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಈ ದೇಶಕ್ಕೆ ಶಾಪ:

ಮುಸ್ಲಿಂ ಬಜೆಟ್‌ ಎಂಬ ಬಿಜೆಪಿ ಆರೋಪಕ್ಕೆ ತೀಕ್ಷ್ಣಣವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಧರ್ಮ, ಜಾತಿ ರಾಜಕಾರಣ ಮಾಡುವುದು ಬಿಟ್ಟು ಬೇರೇನೂ ಗೊತ್ತಿಲ್ಲ. ಅಭಿವೃದ್ಧಿಯನ್ನು ಬದಿಗೊತ್ತಿ ಧಾರ್ಮಿಕ ಭಾವನೆಯನ್ನು ಕೆರಳಿಸಿ ಸಮಾಜ ಒಡೆಯುತ್ತಿದ್ದಾರೆ ಎಂದು ಟೀಕಿಸಿದರು.

ಮುಸ್ಲಿಮರಲ್ಲಿ ಬಡವರು ಇಲ್ಲವೇ? ಬಡವರಿಗೆ ನೆರವು ನೀಡಬಾರದಾ? ನಿಜವಾಗಿಯೂ ಬಿಜೆಪಿ ಈ ದೇಶಕ್ಕೆ ಶಾಪ. ಗೋಮಾತೆಯ ಹೆಸರು ಹೇಳುವುದು, ಧಾರ್ಮಿಕ ಭಾವನೆಯನ್ನು ಕೆರಳಿಸುವುದು ಇವರ ಕೆಲಸ. ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸುವ ಈ ರಾಜ್ಯ ಯಾವ ಮಟ್ಟದ ಅಭಿವೃದ್ಧಿ ಎಂಬುದನ್ನು ಬಜೆಟ್‌ ಹೇಳಿದೆ. ಇನ್ನಷ್ಟು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದು, ಈ ಅಭಿವೃದ್ಧಿಗೆ ಬಳಸಿದ ಹಣದ ಕುರಿತು ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕಲಗೂಡು ರತ್ನಾಕರ್, ವಿಜಯ್‌ಕುಮಾರ್, ಜಿ.ಡಿ.ಮಂಜುನಾಥ್, ಹರ್ಷಿತ್‌ಗೌಡ, ವಿಜಯ್, ವಿನಯ್ ತಾಂಡ್ಲೆ, ಕುಮರೇಶ್, ಮೋಹನ್‌ಕುಮಾರ್, ಶಿ.ಜು.ಪಾಶಾ, ಶಿವಾನಂದ ಮತ್ತಿತರರು ಇದ್ದರು.

Share this article