ಕನ್ನಡಪ್ರಭ ವಾರ್ತೆ ಕಲಬುರಗಿ
ಕಳೆದ ಬಾರಿ ಅಷ್ಟಕ್ಕಷ್ಟೇ ಕಲ್ಯಾಣ ಎಂಬಂತಾಗಿದ್ದ ಜಿಲ್ಲೆಯ ಪಾಲಿಗೆ ಈ ಬಜೆಟ್ಟಾದರೂ ಸಂಪೂರಣ ಕಲ್ಯಾಣವಾಗುವಂತೆ ಮಾಡುವುದೆ? ಎಂದು ಜನ ಇದಿರು ನೋಡುತ್ತಿದ್ದಾರೆ.
ಆಳುವವರು ಕಲಬುರಗಿ ಸೇರಿದಂತೆ ಕಲ್ಯಾಣ ಭಾಗದ ಜಿಲ್ಲೆಗಳನ್ನು ಕಡೆಗಣಿಸಿದ್ದರಿಂದಲೇ ಅವು ಹಿಂದುಳಿದ ಜಿಲ್ಲೆಗಳಾಗಿ ಇಂದಿಗೂ ಅನೇಕ ಸಮಸ್ಯೆಗಳ ಸುಳಿಯಲ್ಲಿ ನರಳುತ್ತಿರೋದು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸುತ್ತ ಜಿಲ್ಲೆಯ ಜನ ನಿಜಾರ್ಥದಲ್ಲಿ ಕಲ್ಯಾಣವಾಗಲಿ ಎಂದು ಹಾರೈಸುತ್ತಿದ್ದಾರೆ.ಕಲಬುರಗಿ ತೊಗರಿ ಕಣಜ, ಇಲ್ಲಿರುವ 5 ಲಕ್ಷದಷ್ಟು ಹೆಕ್ಟೇರ್ ಭೂಭಾಗದಲ್ಲಿ ತೊಗರಿ ಬೇಸಾಯವಾಗುತ್ತದೆ. ಸಾವಿರಾರು ಟನ್ ತೊಗರಿ ಬೇಳೆ ಇಳುವರಿಯೂ ಇಲ್ಲಿದೆ. ಹೀಗಿದ್ದರೂ ತೊಗರಿ ತಳಿ ಅಭಿವೃದ್ಧಿ, ಹೊಸ ಸಂಶೋಧನೆ ಇತ್ಯಾದಿಗಳಿಗಾಗಿ ಸ್ಥಾಪನೆಯಾಗಿರುವ ತೊಗರಿ ಅಭಿವೃದ್ಧಿ ಮಂಡಳಿ ಹೋಗಿ ಬೇಳೆಕಾಳು ಅಭಿವೃದ್ಧಿ ಮಂಡಳಿಯಾದರೂ ಕೂಡಾ ಇಂದಿಗೂ ಉದ್ದೇಶ ಮಾತ್ರ ಈಡೇರಿಲ್ಲ.
ಇಲ್ಲಿನ ತೊಗರಿಗೆ ಭೌಗೋಳಿಕ ಸೂಚ್ಯಂಕ ದೊರಕಿದೆ. ಈ ತೊಗರಿ ಪ್ರಪಂಚದಲ್ಲೇ ಶ್ರೇಷ್ಠವಾಗಿರೋದರಿಂದಾಗಿ ಇಲ್ಲಿನ ತೊಗರಿಗೆ ಭೀಮಾ ಪಲ್ಸ್ ಎಂಬ ಹೆಸರಲ್ಲಿ ಮಾರುಕಟ್ಟೆ ಒದಗಿಸುವ ಕೆಲಸವಾಗಬೇಕು. ಅದಕ್ಕೂ ಬೇಳೆಕಾಳು ಮಂಡಳಿ ಬಲವರ್ಧನೆಯೇ ಮದ್ದೆಂಬುದು ಸರ್ವವಿದಿತ. ಹೀಗಾಗಿ ಬಜೆಟ್ ಬೇಳೆಕಾಳು ಮಡಲಿಗೆ ಬಲ ತುಂಬುವ ಕೆಲಸ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.
2019ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಹೈದ್ರಾಬಾದ್ ಹೆಸರು ಹೊಡೆದೋಡಿಸಿ ಕಲ್ಯಾಣ ನಾಡೆಂದು ಈ ಭೂಭಾಗಕ್ಕೆ ಮರು ನಾಮಕರಣ ಮಾಡಿದಾಗಲೇ ಪ್ರತ್ಯೇಕ ಸಚಿವಾಲಯ ಮಾಡುವುದಾಗಿ ನೀಡಿದ್ದ ಭರವಸೆ 5 ವರ್ಷವಾದರೂ ಈಡೇರಿಲ್ಲ. ಈ ಸರ್ಕಾರವಾದರೂ ಇದನ್ನು ಈಡೇರಿಸುವುದೆ ಎಂದು ಜನ ಇದಿರು ನೋಡುತ್ತಿದ್ದಾರೆ.
ಕಳೆದ ಬಜೆಟ್‌ನಲ್ಲಿನ ಘೋಷಣೆಯಂತೆ 5 ಸಾವಿರ ಕೋಟ ರುಪಾಯಿ ಅನುದಾನ ಇಲ್ಲಿನ ಕೆಕೆಆರ್‌ಡಿಬಿಗೆ ಬರಲೇ ಇಲ್ಲ. ಬಂದಿದ್ದು 3 ಸಾವಿರ ಕೋಟಿ ರುಪಾಯಿ ಮಾತ್ರ. ಆದಾಗ್ಯೂ ಈ ಬಾರಿಯಾದರೂ ಬಜೆಟ್‌ನಲ್ಲಿ 5 ಸಾವಿರ ಕೋಟಿ ಘೋಷಿಸಿ ಅದೆಲ್ಲವನ್ನೂ ಬಿಡುಗಡೆ ಮಾಡಲು ಸರ್ಕಾರ ಮುಂದಾಗಬೇಕೆಂಬ ಆಗ್ರಹ, ನಿರೀಕ್ಷೆಗಳು ಜನಮನದಲ್ಲಿವೆ.
ರೋಗ ಪೀಡಿತ ತೊಗರಿ ಉದ್ದಿಮೆಗೆ ಪ್ರೋತ್ಸಾಹ ದೊರಕಿಸುವ ದಿಶೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ, ಇಲ್ಲಿನ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ, ಕೆರೆ ತುಂಬವ ಯೋಜನೆಗೆ ಕಾಯಕಲ್ಪ ದೊರಕಲಿ ಎಂಬ ನಿರೀಕ್ಷೆಗಳೂ ಜನರಲ್ಲಿವೆ.
ಜಿಲ್ಲೆಯಲ್ಲಿರುವ ಹೊಸ ತಾಲೂಕಗಳಿಗೆ ಆಡಳಿತ ಭವನಗಳೇ ಇಲ್ಲ. ಈ ಕೊರತೆ ಬಜೆಟ್ ನೀಗಿಸಲಿ, ರಸ್ತೆ, ಮೂಲ ಸವಲತ್ತು ಸುಧಾರಣೆಗೂ ಜಿಲ್ಲೆಗೆ ಬಜೆಟ್ ಆದ್ಯತೆ ಕೊಡಲಿ ಎಂದೂ ಜನ ಆಗ್ರಹಿಸುತ್ತಿದ್ದಾರೆ.