ವಲಸೆ ಹೋಗಿರುವ ಬಂಜಾರರು ಈ ಸಮೀಕ್ಷೆಯಿಂದ ಹೊರಗುಳಿಯುವ ಸಾಧ್ಯತೆ ।
ಕನ್ನಡಪ್ರಭ ವಾರ್ತೆ ಕಡೂರುಪರಿಶಿಷ್ಟ ಜಾತಿಯ ಉಪ ವರ್ಗೀಕರಣಕ್ಕಾಗಿ ಕೈಗೊಂಡಿರುವ ಜಾತಿ ಸಮೀಕ್ಷೆಯನ್ನು ಕೈ ಬಿಟ್ಟು ಬಂಜಾರ ಸಮಾಜಕ್ಕೆ ಅನ್ಯಾಯ ಆಗದಂತೆ ಕೇಂದ್ರ ಸರಕಾರದ ಜೊತೆಗೆ ರಾಜ್ಯ ಸರಕಾರ ದೀಪಾವಳಿ ಸಂದರ್ಭದಲ್ಲಿ ಜಾತಿ ಗಣತಿ ನಡೆಸಬೇಕು ಎಂದು ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿಂಗಟಗೆರೆ ಎಸ್. ಆರ್. ರಾಜಾನಾಯ್ಕ ಆಗ್ರಹಿಸಿದರು. ಸೋಮವಾರ ತಾಲೂಕಿನ ಸೋಮನಹಳ್ಳಿ ತಾಂಡ್ಯದ ತಾ ಪಂ ಮಾಜಿ ಅಧ್ಯಕ್ಷ ಸತೀಶ್ ನಾಯ್ಕ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿ, ಬಂಜಾರರು ಬಡವರು, ಶೋಷಿತರು, ಅನಕ್ಷರಸ್ತರಾಗಿದ್ದು ಕೊಲಿಗಾಗಿ ಗೊವಾ, ಆಂಧ್ರಪ್ರದೇಶ, ಮಹಾ ರಾಷ್ಟ್ರ ಹಾಗೂ ಮಂಡ್ಯ, ಚಿಕ್ಕಮಗಳೂರಿನ ಕಾಫಿ ತೋಟಗಳಿಗೆ ವಲಸೆ ಹೋಗಿರುತ್ತಾರೆ. ಅವರು ಈ ಸಮೀಕ್ಷೆಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಕೆಲಸಕ್ಕಾಗಿ ವಲಸೆ ಹೋದವರು ದೀಪಾವಳಿ ಸಂದರ್ಭದಲ್ಲಿ ಒಂದು ತಿಂಗಳು ಸ್ವಗ್ರಾಮದಲ್ಲಿ ನೆಲೆಸುತ್ತಾರೆ. ಆ ಸಮಯದಲ್ಲಿ ಸಮೀಕ್ಷೆ ಮಾಡುವುದು ಉತ್ತಮ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದರು. ರಾಜ್ಯ ಸರ್ಕಾರ 2004 ರಿಂದಲೂ ಒಳ ಮೀಸಲಾತಿ ಜಾರಿಗೆ ತರಲು ಸದಾಶಿವ ಆಯೋಗ, ನಾಗಮೋಹನದಾಸ್ ಆಯೋಗ ರಚಿಸಿದೆ. ಸುಪ್ರೀಮ್ ಕೋರ್ಟ್ ಆದೇಶದಂತೆ ಏಕ ಸದಸ್ಯ ಪೀಠದ ಆಯೋಗ ಒಳ ಮೀಸಲಾತಿ ಅಧ್ಯಯನ ಮಾಡಿ 101 ಜಾತಿಗಳ ವಿವರ ಸಲ್ಲಿಸಲು ಆದೇಶ ನೀಡಿದೆ. ಉಚ್ಛ ನ್ಯಾಯಾಲಯದ ಆದೇಶದಂತೆ ಮುಖ್ಯಮಂತ್ರಿಗಳು ಜನಗಣತಿಗೆ 60 ಸಾವಿರ ಶಿಕ್ಷಕರನ್ನು ನೇಮಕ ಮಾಡಿ ಮೇ 5 ರಿಂದ 17 ರ ವರೆಗೆ ವರದಿ ಸಿದ್ಧಪಡಿಸಲು ಸೂಚಿಸಿದ್ದಾರೆ. ಬಂಜಾರ ಸಮುದಾಯದ ಜನರು ವಲಸೆ ಹೋಗಿರುವ ಕಾರಣ ಸಮಾಜದವರ ಸಂಖ್ಯೆಗಿಂತ ಕಡಿಮೆ ಜನಸಂಖ್ಯೆ ದಾಖಲಾಗಿ ಸಮಾಜದ ಯುವಕರು ಸರ್ಕಾರದ ಯೋಜನೆಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ನಾಗಮೋಹನ ದಾಸ್ ಅವರಿಗೆ ವರದಿ ಸಲ್ಲಿಸಲಾಗಿದೆ ಎಂದರು. ರಾಜ್ಯ ಸರ್ಕಾರ ಜಾತಿ ಗಣತಿಯನ್ನು ತರಾತುರಿಯಲ್ಲಿ ಮಾಡುವ ಬದಲಿಗೆ ಕೇಂದ್ರ ಸರ್ಕಾರದ ಜಾತಿ ಗಣತಿ ಜೊತೆಯಲ್ಲಿ ಮಾಡುವುದು ಸೂಕ್ತ, ಇಲ್ಲಿವರೆಗೆ ಜಾತಿ ಗಣತಿಯಲ್ಲಿ ಬಂಜಾರ ಸಮಾಜಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ಹಿಂದಿನ ಗಣತಿಯ ಪ್ರಕಾರ 11 ಲಕ್ಷ ಜನಸಂಖ್ಯೆ ಎಂದು ಗುರುತಿಸಲಾಗಿದ್ದು. ರಾಜ್ಯದಾದ್ಯಂತ 3500 ಕ್ಕೂ ಹೆಚ್ಚಿನ ತಾಂಡಾಗಳಿವೆ. ಉತ್ತರ ಕರ್ನಾಟಕದ ಕೆಲವು ತಾಂಡಾಗಳಲ್ಲಿ 25 ಸಾವಿರಕ್ಕೂ ಅಧಿಕ ಬಂಜಾರ ಸಮುದಾಯದ ಜನರಿದ್ದಾರೆ. ಯಾರನ್ನೋ ಓಲೈಕೆ ಮಾಡಲು ತರಾತುರಿಯ ಗಣತಿ ಅವಶ್ಯಕತೆ ಇಲ್ಲ. ಜಾತಿ ಗಣತಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೆರಡು ಭಾರಿ ಮಾಡುವುದರಿಂದ ಸಮಯ ಮತ್ತು ಹಣ ವ್ಯಯವಾಗುವುದು. ಈಗ ಮಾಡಲು ಹೊರಟಿರುವ ಗಣತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಕಲಿಸಿದ ಪಾಠವನ್ನು ಕಾಂಗ್ರೆಸ್ ಗೂ ಕಲಿಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಕುಮಾರ ನಾಯ್ಕ, ಕಾರ್ಯದರ್ಶಿ ಪ್ರಕಾಶ ನಾಯ್ಕ, ಸತೀಶ ನಾಯ್ಕ, ಅಣ್ಣಾ ನಾಯ್ಕ, ಶ್ರೀನಿವಾಸ ನಾಯ್ಕ ಮತ್ತಿತರರು ಇದ್ದರು.
5ಕೆಕೆಡಿಯು2. ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿಂಗಟಗೆರೆ ಎಸ್. ಆರ್. ರಾಜಾನಾಯ್ಕ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು.