ಕುಕನೂರು: ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದ್ದು, ಖಜಾನೆ ಸಂಪೂರ್ಣ ಖಾಲಿಯಾಗಿ ರಾಜ್ಯ ಹತ್ತು ವರ್ಷದಷ್ಟು ಅಭಿವೃದ್ಧಿಯಿಂದ ಹಿಂದಕ್ಕೆ ಹೋಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.
ಇಬ್ಬರು ಸಂಸದರಿದ್ದ ಬಿಜೆಪಿ ಈಗ ದೊಡ್ಡ ಪಕ್ಷವಾಗಿ ಬೆಳೆದಿದೆ. ಅದಕ್ಕೆ ಪಾರದರ್ಶಕ ಆಡಳಿತವೇ ಕಾರಣ. ಪಕ್ಷದ ತತ್ವ-ಸಿದ್ಧಾಂತ ಜನರನ್ನು ತಲುಪಿವೆ. ಆಡಳಿತದ ಗಂಧವೇ ಕಾಂಗ್ರೆಸ್‌ಗಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 11ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆ, ಸದ್ಯ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ 4ನೇ ಸ್ಥಾನಕ್ಕೇರಿದೆ. ವಿಶ್ವಗುರು ಭಾರತ ಮೋದಿ ಅವರ ಕನಸು. ಮೋದಿ ಅವರಿಂದ ಭಾರತೀಯರಿಗೂ ಹಾಗೂ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಇಲ್ಲಿನ ವಿದ್ಯಾರ್ಥಿಗಳಿಗೂ ಗೌರವ ಸಿಗುತ್ತಿದೆ. ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಇಡಿ ವಿಶ್ವದಲ್ಲಿಯೇ ಮನ್ನಣೆ ಗಳಿಸಿದೆ. ಆದರ್ಶ, ಸಂಸ್ಕಾರದ ಭಾರತ ಮೋದಿ ಅವರಿಂದ ಸಿಕ್ಕಿದೆ ಎಂದರು.
ಕಾಂಗ್ರೆಸ್ಸಿನಿಂದ ಸದಾ ಅನ್ಯಾಯ: ಉತ್ತರ ಕರ್ನಾಟಕಕ್ಕೆ ಕಾಂಗ್ರೆಸ್ ಸರ್ಕಾರದಿಂದ ಸದಾ ಅನ್ಯಾಯ ಆಗುತ್ತಿದೆ. ಕೃಷ್ಣಾ ಬಿ ಸ್ಕೀಂಗಾಗಿ 2013ರಲ್ಲಿ ಪ್ರತಿ ವರ್ಷ ಹತ್ತು ಸಾವಿರ ಕೋಟಿ ಹಣ ನೀಡುತ್ತೇವೆ ಎಂದು ಕೂಡಲಸಂಗಮನ ಮೇಲೆ ಆಣೆ ಮಾಡಿದ್ದರು. ಅವರ ಮಾತಿನ ಪ್ರಕಾರ ಹಣ ನೀಡಿದ್ದರೆ ಆಗ ಬರೀ ₹17 ಸಾವಿರ ಕೋಟಿಯಲ್ಲಿ ಡ್ಯಾಂ ಎತ್ತರ ಹೆಚ್ಚಳ, ಭೂ ಸ್ವಾಧೀನ, ಪರಿಹಾರ ಆಗುತ್ತಿತ್ತು ಸದ್ಯ ಲಕ್ಷ ಕೋಟಿಗೂ ಅಧಿಕ ಆಗುತ್ತದೆ. ಇದು ಕಾಂಗ್ರೆಸ್ ಸರ್ಕಾರದ ಅನ್ಯಾಯ ಆಗಿದೆ. ಯಲಬುರ್ಗಾ ಕ್ಷೇತ್ರದಲ್ಲಿ ನನ್ನ ಆಡಳಿತ ಅವಧಿಯಲ್ಲಿ ಎಲ್ಲ ಕೆರೆಗಳ ಅಭಿವೃದ್ಧಿ ಪಡಿಸಿದ್ದೇನೆ. ₹2700 ಕೋಟಿ ಮಂಜೂರು ಮಾಡಿಸಿ ನೀರಾವರಿ ಯೋಜನೆಗಳ ಕಾರ್ಯ ಮಾಡಿಸಿದ್ದೇನೆ. ಬೆಣಕಲ್, ಮಲಕಸಮುದ್ರ ಕೆರೆಗಳು ತುಂಬಿ ಸುತ್ತಲೂ 400ರಿಂದ 500 ಎಕರೆಗೂ ಅಧಿಕ ನೀರಾವರಿ ಮಾಡಿಕೊಂಡಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಬೋರ್‌ವೆಲ್ ಅಂತರ್ಜಲ ಮಟ್ಟ ಸಹ ಹೆಚ್ಚಿದೆ. ಕಾಂಗ್ರೆಸ್ ಸರ್ಕಾರದ ₹210 ಕೋಟಿ ಕೆರೆ ತುಂಬಿಸುವ ಯೋಜನೆ ಇನ್ನೂ ಕುಕನೂರು ಸಹ ದಾಟಿಲ್ಲ. ರಾಜ್ಯ ಸರ್ಕಾರದಿಂದ ರೈತರಿಗೆ ನೀಡುತ್ತಿದ್ದ ಪಿಎಂ ಕಿಸಾನ್ ಹಣ ₹4000 ಹಾಗೂ ರೈತರ ಮಕ್ಕಳ ವಿದ್ಯಾನಿಧಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕಿತ್ತುಕೊಂಡು ರೈತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.ಎಪಿಎಂಸಿ ಮಾಜಿ ಸದಸ್ಯ ಹಂಚ್ಯಾಳಪ್ಪ ತಳವಾರ ಮಾತನಾಡಿ, ಮಾಜಿ ಸಚಿವ ಹಾಲಪ್ಪ ಆಚಾರ್ ಅವಧಿಯಲ್ಲಿ ಹೆಚ್ಚು ಗ್ರಾಮೀಣ ರಸ್ತೆ ನಿರ್ಮಾಣವಾಗಿದೆ ಎಂದರು.
ಮುಖಂಡ ದೊಡ್ಡನಗೌಡ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ರೈತರಿಗೆ ಬರ ಪರಿಹಾರ, ಬೆಳೆ ವಿಮೆ ಬರುತ್ತಿದ್ದವು. ಯಲಬುರ್ಗಾ ಕ್ಷೇತ್ರಕ್ಕೂ ಬಂದಿವೆ. ಆದರೆ ಈ ಮೂರು ವರ್ಷದಲ್ಲಿ ರೈತರಿಗೆ ಯಾವುದೇ ಬರ ಪರಿಹಾರ ಹಾಗೂ ವಿಮೆ ಹಣ ಬಂದಿಲ್ಲ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ರತನ್ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಶಿವಕುಮಾರ ನಾಗಲಾಪುರಮಠ, ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ ಮಾತನಾಡಿದರು.
ಪ್ರಮುಖರಾದ ಶರಣಪ್ಪ ಈಳಗೇರ, ಶೀವಲೀಲಾ ದಳವಾಯಿ, ಅಯ್ಯನಗೌಡ, ಅಂದಯ್ಯ, ಪ್ರಕಾಶಗೌಡ ಹೊರಪೇಟೆ, ಅಂದಪ್ಪ, ಶ್ರೀಧರ, ವೆಂಟಕೇಶ ಈಳಗೇರ, ಪ್ರಭು ಹಳ್ಳಿ, ಬಸಯ್ಯ ಸಸಿ, ಕಳಕಪ್ಪ ಬಿನ್ನಾಳ, ವೀರಣ್ಣ ಅಳವಂಡಿ, ಬಸವನಗೌಡ ತೊಂಡಿಹಾಳ, ಬಸವರಾಜ ಗೌರಾ, ಪದ್ಮಾವತಿ, ನಾಗರಾಜ ವೆಂಕಟಾಪುರ, ಹನುಮಂತಪ್ಪ ಬನ್ನಿಕೊಪ್ಪ, ಕರಬಸಯ್ಯ ಬಿನ್ನಾಳ, ಹನುಮೇಶ ಹುಲಗೆಜ್ಜಿ, ಉದಯ ತಳವಾರ, ಸರಣಪ್ಪ ಮಾದಿನೂರು, ಬಸವರಾಜ ಗಿಡ್ಡರ, ಅಶೋಕ ಕಟಗಾಲಿ, ಬಸವರಾಜ ಪರಸಣ್ಣವರ್, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಮಹಾಂತೇಶ ಹೂಗಾರ, ಪ್ರಕಾಶ ತಹಸೀಲ್ದಾರ, ಕನಕಪ್ಪ ಬ್ಯಾಡರ್ ಇತರರಿದ್ದರು.