ಶಿರಸಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳ ಉದ್ಘಾಟನೆಗೆ ಸ್ಥಳೀಯ ಶಾಸಕರು ತರಾತುರಿಯಲ್ಲಿದ್ದಾರೆಯೇ ಹೊರತು ಹೊಸ ಕಾಮಗಾರಿಯ ಭೂಮಿಪೂಜೆ ಮಾಡಿರುವುದನ್ನು ತಿಳಿಸಲಿ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಸ್ತೆಗಳೆಲ್ಲವೂ ಹೊಂಡ: ನಗರ ಹಾಗೂ ಗ್ರಾಮೀಣ ಭಾಗಗಳ ರಸ್ತೆಗಳು ಹೊಂಡ ಬಿದ್ದಿದ್ದು, ಬೆಳೆದ ಬೆಳೆಗಳೆಲ್ಲವೂ ರೋಗ ಬಾಧೆಗಳಿಂದ ಬಳಲುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸಹಾಯ ಮಾಡುವ ಮನಸ್ಥಿತಿಯಿಲ್ಲ. ರಾಜ್ಯದಲ್ಲಿ ೧೦೦ಕ್ಕಿಂತ ಹೆಚ್ಚು ಹಾಪ್‌ಕಾಮ್ಸ್ ಮಳಿಗೆಗಳು ಬಂದ್ ಆಗಿದೆ. ರೈತ ವಿರೋಧಿ ಸರ್ಕಾರದಿಂದ ಈ ರೀತಿಯಾಗಿದೆ. ರೈತ ಸಂಸ್ಥೆಗಳಿಗೆ ಆರ್ಥಿಕ ಶಕ್ತಿ ತುಂಬಿ ಅವುಗಳನ್ನು ಬಲಗೊಳಿಸುವುದನ್ನು ಬಿಟ್ಟು ಸ್ಥಗಿತಗೊಳಿಸುತ್ತಿದೆ ಎಂದು ಆರೋಪಿಸಿದರು.ಹಗರಣಗಳಲ್ಲಿ ದಾಖಲೆ: ರಾಜ್ಯದಲ್ಲಿ ಒಂದರ ಮೇಲೊಂದು ಹಗರಣಗಳನ್ನು ಕಾಂಗ್ರೆಸ್ ನಡೆಸುತ್ತಿದ್ದು, ಮೈಸೂರಿನ ಮುಡಾ ನಿವೇಶನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಪಾರ್ವತಿಗೆ ೧೪ ಸೈಟ್ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ಕಾರಣವಾಗಿರುವುದು ಜಗಜ್ಜಾಹಿರಾಗಿದೆ. ಮುಡಾ, ವಾಲ್ಮೀಕಿ ನಿಗಮದ ಹಗರಣದಿಂದ ಹಿಡಿದು ಪ್ರತಿ ಹಂತದಲ್ಲಿಯೂ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಂಗ್ರೆಸ್ ಹಿಂದೆ ಭ್ರಷ್ಟಚಾರ ನಡೆಸಿದ ದಾಖಲೆಯನ್ನು ಮುರಿದು ಭ್ರಷ್ಟಾಚಾರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದರು.ಶಿರಸಿ ಪ್ರತ್ಯೇಕ ಜಿಲ್ಲೆಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕಾಗೇರಿ, ಜನಾಭಿಪ್ರಾಯದ ಮೇಲೆ ನಿರ್ಣಯ ಆಗುತ್ತದೆ. ಹೋರಾಟ ಮಾಡಿದವರು ಜನರಿಗೆ ಸ್ಪಷ್ಟನೆ ನೀಡಲಿ ಎಂದು ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.ಕೇಂದ್ರದ ಮೇಲೆ ಒತ್ತಡ
ಅಡಕೆ ಅನಧಿಕೃತವಾಗಿ ಬರುತ್ತಿರುವುದು ಸವಾಲಿನ ವಿಷಯ. ಗಡಿ ಭಾಗದಲ್ಲಿ ತಪಾಸಣೆಗೆ ಒಳಪಡಿಸುವ ಕೆಲಸ ಆಗುತ್ತಿದೆ. ಆದರೂ ಕಳ್ಳ ಮಾರ್ಗದಲ್ಲಿ ಬರುತ್ತಿದೆ. ಅಡಕೆ ಕಳ್ಳಮಾರ್ಗದ ಮೂಲಕ ಬರುತ್ತಿರುವುದನ್ನು ಬಿಗಿ ಮಾಡಬೇಕು. ಕೇಂದ್ರದ ಮೇಲೆ ಒತ್ತಡ ತರಲಾಗಿದೆ. ಸಂಪೂರ್ಣವಾಗಿ ಕಳ್ಳ ಸಾಗಾಣಿಕೆ ತಡೆಯುವುದು ಸವಾಲಿನ ವಿಷಯವಾಗಿರುವುದಲ್ಲದೇ ಅಡಕೆ ಕ್ಷೇತ್ರಗಳು ವಿಸ್ತರಣೆಯಾಗುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.