ಸರ್ವರ್‌ ಸಮಸ್ಯೆಗೆ ಪಡಿತರದಾರರ ಹೈರಾಣ

KannadaprabhaNewsNetwork | Published : Oct 22, 2024 12:04 AM

ಸಾರಾಂಶ

ಪಡಿತರ ಚೀಟಿ ತಿದ್ದುಪಡಿ, ಪಡಿತರ ಪಡೆಯುವುದಕ್ಕೆ ಸರ್ವರ್‌ ಸಮಸ್ಯೆ ಎದುರಾಗಿದ್ದು, ಪಡಿತರ ಚೀಟಿದಾರರನ್ನು ಹೈರಾಣಾಗುವಂತೆ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪಡಿತರ ಚೀಟಿ ತಿದ್ದುಪಡಿ, ಪಡಿತರ ಪಡೆಯುವುದಕ್ಕೆ ಸರ್ವರ್‌ ಸಮಸ್ಯೆ ಎದುರಾಗಿದ್ದು, ಪಡಿತರ ಚೀಟಿದಾರರನ್ನು ಹೈರಾಣಾಗುವಂತೆ ಮಾಡಿದೆ. ಪಡಿತರ ಚೀಟಿ ತಿದ್ದುಪಡಿಗೆ, ಪಡಿತರ ಆಹಾರ ಧಾನ್ಯ ಪಡೆಯಲು, ತಿದ್ದುಪಡಿಗೆ ಪಡಿತರ ಅಂಗಡಿ ಮತ್ತು ಆನ್‌ಲೈನ್‌ ಕೇಂದ್ರದ ಎದುರು ನಿತ್ಯ ಸರದಿ ಸಾಲಿನಲ್ಲಿ ದಿನಗಟ್ಟಲೇ ನಿಲ್ಲುವಂತಾಗಿದೆ. ಸರ್ವರ್‌ ಕೈಕೊಡುತ್ತಿರುವುದರಿಂದ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಪಡಿತರ ಚೀಟಿದಾರರು ನಿತ್ಯ ಆನ್‌ಲೈನ್‌ ಸೆಂಟರ್‌ನತ್ತ ಅಲೆಯುವುದು ತಪ್ಪಿಲ್ಲ.

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪಿಡಿಎಸ್‌ ಅಂಗಡಿಗಳ ಎದುರು ಫಲಾನುಭವಿಗಳು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹೊಸ ಸರ್ವರ್‌ನಲ್ಲಿ ಡೇಟಾ ಲಭ್ಯವಿಲ್ಲದ್ದು ಒಂದು ಸಮಸ್ಯೆವಾದರೇ, ಸರ್ವರ್‌ನದ್ದು ಇನ್ನೊಂದು ಸಮಸ್ಯೆ. ಸರದಿ ಸಾಲಿನಲ್ಲಿ ನಿಂತರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಮ್ಮ ಸರದಿ ಬಂತೆಂದು ಖುಷಿಯಾದ ಪಡಿತರ ಚೀಟಿದಾರರಿಗೆ ಸರ್ವರ್‌ ಕೈಕೊಡುತ್ತಿರುವುದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿ ತಮ್ಮ ಮನೆಗಳತ್ತ ಹೋಗುವಂತಾಗಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರದ ಸರ್ವರ್‌ನಲ್ಲಿ ಸೃಷ್ಟಿಯಾದ ಹಲವು ಸಮಸ್ಯೆಗಳಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಸರ್ವರ್‌ ಅನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್(ಕೆಎಸ್‌ಡಿಸಿ)ಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಪಡಿತರ ವಿತರಣೆಯಲ್ಲಿ ವಿಳಂಬಕ್ಕೆ ಕಾರಣ ಎನ್ನುವ ತಾಂತ್ರಿಕ ತೊಂದರೆಗೆ ಪಡಿತದಾರರನ್ನು ಹೈರಾಣಾಗುವಂತೆ ಮಾಡಿದೆ.

ಪಡಿತರ ಕೇಂದ್ರದಲ್ಲಿ ನಿತ್ಯವೂ ವಾಗ್ವಾದ!:

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಕಾರ್ಡುದಾರರಿಗೆ ಸಮಯಕ್ಕೆ ಸರಿಯಾಗಿ ಪಡಿತರ ಆಹಾರ ಸಿಗುವುದೇ ಸಂದೇಹವಾಗಿದೆ. ಅಕ್ಕಿ ಬದಲು ನೇರ ನಗದು ಯೋಜನೆ ಪ್ರಕಾರ ಖಾತೆ ನೇರ ಹಣ ಜಮೆ ಮಾಡುತ್ತಿರುವಾಗಲೂ ಸಮಯಕ್ಕೆ ಅದನ್ನು ಜಮೆ ಮಾಡದೇ ಎಡವಟ್ಟು ಮಾಡಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈಗ ಪಡಿತರ ವಿತರಣೆಯಲ್ಲೂ ಎಡವಟ್ಟು ಮಾಡಿಕೊಂಡಿದೆ. ಪರಿಣಾಮ ಅನ್ನಭಾಗ್ಯದ ಫಲಾನುಭವಿಗಳಿಗೆ ಪಡಿತರ ವಿತರಣೆ ತಡವಾಗಿದೆ. ಹೆಚ್ಚುವರಿ 5 ಕಿಲೋ ಅಕ್ಕಿ ನೀಡುವ ಬದಲು ನಗದು ಹಣ ಒದಗಿಸುವ ಪ್ರಕ್ರಿಯೆ ವಿಳಂಬವಾಗಿತ್ತು. ಆದರೆ, ಈ ತಿಂಗಳು ಎಲ್ಲ ಕಾರ್ಡುದಾರರಿಗೂ ನಿಗದಿತ ಪಡಿತರ ವಿತರಣೆಯೇ ವಿಳಂಬವಾಗುವುದಕ್ಕೆ ಸರ್ವರ್ ಸಮಸ್ಯೆಯೇ ಕಾರಣವಾಗಿದ್ದರೂ ಪಡಿತರ ಅಂಗಡಿ ಮಾಲೀಕರು ಅನ್ನಭಾಗ್ಯ ಫಲಾನುಭವಿಗಳ ಆಕ್ರೋಶಕ್ಕೆ ಗುರಿಯಾಗಿದ್ದು, ನಿತ್ಯವೂ ವಾಗ್ವಾದ ನಡೆಯುತ್ತಿದೆ.

ಫಲಾನುಭವಿಗಳು ಹೈರಾಣು: ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಈ ಹಿಂದೆ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಪಡಿತರ ಚೀಟಿ ವಿತರಣೆ ಹಾಗೂ ಅರ್ಜಿ ಸ್ವೀಕಾರ ಸ್ಥಗಿತ ಮಾಡಿ ತದನಂತರದಲ್ಲಿ ಪರಿಷ್ಕರಣೆ ಹಾಗೂ ತಿದ್ದುಪಡಿಗೆ ಅವಕಾಶ ನೀಡಿದಾಗಲೂ ಸರ್ವರ್‌ ಸಮಸ್ಯೆಯಿಂದಾಗಿ ಫಲಾನುಭವಿಗಳು ಹೈರಾಣಾಗಿದ್ದಾರೆ. ಸದ್ಯ ಪಡಿತರ ವಿತರಣೆಯಲ್ಲಿ ಮತ್ತೆ ಅದೇ ಸಮಸ್ಯೆ ಸರ್ವರ್‌ ಸಮಸ್ಯೆ ಮುಂದುವರೆದಿದ್ದು ಈ ಬಾರಿ ಜನಾಕ್ರೋಶಕ್ಕೆ ಕಾರಣವಾಗಿದೆ.

ಸಮಸ್ಯೆ ನಿವಾರಿಸಲು ಮುಂದಾದ ಆಹಾರ ಇಲಾಖೆ: ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ತನ್ನ ಗಣಕಯಂತ್ರ ವ್ಯವಸ್ಥೆಯ ಸರ್ವರ್‌ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ. ಇಲ್ಲಿಯವರೆಗೆ ಸುಮಾರು ಶೇ.5 ರಿಂದ 10 ರಷ್ಟು ಮಾತ್ರ ಕಾರ್ಡುದಾರರಿಗೂ ಪಡಿತರ ವಿತರಣೆಯಾಗಿದೆ. ಅ.31ರೊಳಗೆ ಪಡಿತರವನ್ನು ಎಲ್ಲ ಕಾರ್ಡುದಾರರಿಗೆ ಹಂಚಿಕೆ ಮಾಡಲು ಸಾಧ್ಯವೇ ಎನ್ನುವುದು ಕಾದು ನೋಡಬೇಕಾಗಿದೆ.

ಬೆಳಗ್ಗೆಯೇ ಸಾಲುಗಟ್ಟಿ ನಿಂತರೂ ಸಿಗುವ ಖಾತರಿಯಿಲ್ಲ: ಆಹಾರ ಇಲಾಖೆ ಪಡಿತರ ವಿತರಕರಿಗೆ ಸೂಚನೆ ನೀಡಿದಂತೆ ಪಡಿತರ ಅಂಗಡಿಗಳಲ್ಲಿ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆ ತನಕ ಪಡಿತರ ವಿತರಣೆ ಮಾಡಬೇಕಿದೆ. ನಿತ್ಯ ಬೆಳಗ್ಗೆ 7 ಗಂಟೆಗೆ ಪಡಿತರ ವಿತರಣಾ ಕೇಂದ್ರಕ್ಕೆ ಸಾಲುಗಟ್ಟಿ ನಿಂತರೂ ಪಡಿತರ ಆಹಾರ ಸಿಗುತ್ತದೆ ಎನ್ನುವುದು ಮಾತ್ರ ಖಾತರಿ ಇಲ್ಲ. ಕೇವಲ 5 ರಿಂದ 10 ಜನರಿಗೆ ಮಾತ್ರ ಸಿಕ್ಕರೇ ಸಿಗುತ್ತದೆ. ಇಲ್ಲವಾದರೇ ಇಲ್ಲ. ಮತ್ತೆ ಮರುದಿನ ಬೆಳಗ್ಗೆ ಸಾಲುಗಟ್ಟಿ ನಿಲ್ಲಲೇ ಬೇಕಾಗಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಫಲಾನುಭವಿಗಳು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.ಪಡಿತರ ಧಾನ್ಯ ವಿತರಣೆ ಹಾಗೂ ಪಡಿತರ ಚೀಟಿ ಪರಿಷ್ಕರಣೆ, ತಿದ್ದುಪಡಿ ಕಾರ್ಯ ಏಕಕಾಲಕ್ಕೆ ನಡೆಯುತ್ತಿರುದೆ. ಹಾಗಾಗಿ, ಕಾರ್ಯದ ಒತ್ತಡದಿಂದ ಸರ್ವರ್‌ ಹ್ಯಾಂಗ್‌ ಆಗಿದೆ. ಇನ್ನೇರಡು ದಿನದಲ್ಲಿ ಈ ಸಮಸ್ಯೆಯನ್ನು ಸರಿಪಡಿಸಲಾಗುತ್ತದೆ ಪಡಿತರ ಚೀಟಿದಾರರು ಭಯಪಡುವ ಅಗತ್ಯಇಲ್ಲ.

-ಮಲ್ಲಿಕಾರ್ಜುನ ನಾಯಕ, ಬೆಳಗಾವಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕರು.

ರೇಷನ್‌ಗಾಗಿಕೆಲಸಕ್ಕೂ ಹೋಗದೆ ಬೆಳಗ್ಗೆ 8 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದೇನೆ.11 ಗಂಟೆಯಾದರೂ ರೇಷನ್‌ ಸಿಗುತ್ತಿಲ್ಲ. ದಿನವೂ ಬರುವುದು, ಹೋಗುವುದು ಆಗಿದೆ. ದೀಪಾವಳಿ ಹಬ್ಬ ಇನ್ನೇನೂ ಬರುತ್ತಿದ್ದು, ಹಬ್ಬದ ತಯಾರಿಗಿಂತ ರೇಷನ್‌ ತರೋದು, ರೇಷನ್‌ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದೇ ಒಂದು ದೊಡ್ಡ ಹಬ್ಬ ಎನ್ನುವಂತಾಗಿದೆ. ಸರ್ವರ್ ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ಸರಾಗವಾಗಿ ಪಡಿತರ ವಿತರಣೆಯಾಗಬೇಕು.

-ರಾಜು ನೇಸರಿಕರ, ಪಡಿತದಾರರು.

Share this article