ರಾಜ್ಯ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಶೋಚನೀಯ: ಹಾಲಪ್ಪ ಆಚಾರ್

KannadaprabhaNewsNetwork |  
Published : Aug 31, 2024, 01:33 AM IST
30ಕೆಕೆಆರ್1:ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಜರುಗಿದ ಯಲಬುರ್ಗಾ ಬಿಜೆಪಿ ಮಂಡಲದ ಬಿಜೆಪಿ ಸದಸ್ಯತಾ ಅಭಿಯಾನದ ಕಾರ್ಯಗಾರವನ್ನೂದ್ದೇಶಿಸಿ ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ನಾಯಕರು ಆಸೆ ಬುರುಕರಾಗಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ವಂಚನೆ, ಮುಡಾ ಹಗರಣ, ವರ್ಗಾವಣೆ ದಂಧೆ ಹೀಗೆ ಆಸೆ ಬುರುಕರಾಗಿ ಹಗಲು ದರೋಡೆಗಿಳಿದಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ವಾಗ್ದಾಳಿ ನಡೆಸಿದರು.

ಕುಕನೂರು: ಹಗರಣಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಿಎಂ, ಡಿಸಿಎಂ ಅವರು ಕೋರ್ಟಿಗೆ ಅಲೆದಾಡುತ್ತಿದ್ದಾರೆಂದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಷ್ಟು ಶೋಚನೀಯ ಪರಿಸ್ಥಿತಿಗೆ ಬಂದಿದೆ ಎಂದು ತಿಳಿದುಕೊಳ್ಳಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ವಾಗ್ದಾಳಿ ನಡೆಸಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಜರುಗಿದ ಯಲಬುರ್ಗಾ ಬಿಜೆಪಿ ಮಂಡಲದ ಬಿಜೆಪಿ ಸದಸ್ಯತಾ ಅಭಿಯಾನದ ಕಾರ್ಯಾಗಾರದಲ್ಲಿ ಮಾತನಾಡಿದರು.

2014ರ ಹಿಂದಿನ ಪ್ರಧಾನಿ ಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಕಂಡು ರಾಷ್ಟ್ರ ಜನರು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದರು.

ಅದೇ ರೀತಿ ಸದ್ಯ ರಾಜ್ಯ ಸರ್ಕಾರದ ಪರಿಸ್ಥಿತಿ ಆಗುತ್ತಿದೆ. ರಾಜ್ಯ ಸರ್ಕಾರದ ನಾಯಕರು ಆಸೆ ಬುರುಕರಾಗಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ವಂಚನೆ, ಮುಡಾ ಹಗರಣ, ವರ್ಗಾವಣೆ ದಂಧೆ ಹೀಗೆ ಆಸೆ ಬುರುಕರಾಗಿ ಹಗಲು ದರೋಡೆಗಿಳಿದಿದ್ದಾರೆ. ಗ್ಯಾರಂಟಿ ಯೋಜನೆಗೆ 56 ಸಾವಿರ ಕೋಟಿ ಹಣ ಹೊಂದಾಣಿಕೆ ಮಾಡಲು ಆಗುತ್ತಿಲ್ಲ. ಇನ್ನು ಅಭಿವೃದ್ಧಿ ಕಾರ್ಯಗಳನ್ನು ಮರೆತ್ತಿದ್ದಾರೆ. ಕುಂಟು ನೆಪಗಳನ್ನು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಸಿಎಂ ಹಾಗೂ ಡಿಸಿಎಂ ಹಗರಣಗಳ ಸುಳಿಯಲ್ಲಿ ಕೋರ್ಟಿಗೆ ಅಲೆದಾಡುತ್ತಿದ್ದಾರೆ. ಜನಸಾಮಾನ್ಯರಿಗೆ ಕಾಂಗ್ರೆಸ್ ದುರಾಡಳಿತ ಸ್ಥಿತಿ ತಿಳಿಸುವ ಕಾರ್ಯ ಆಗಬೇಕಿದೆ ಎಂದರು.

ವಿಶ್ವಗುರು ಭಾರತ ಮೋದಿ ಸಂಕಲ್ಪ

ಪ್ರಧಾನಿ ನರೇಂದ್ರ ಮೋದಿ ಅವರು 2047ಕ್ಕೆ ಭಾರತವನ್ನು ವಿಶ್ವಗುರು ಮಾಡುವ ವಿಕಸಿತ ಭಾರತ ಸಂಕಲ್ಪ ಮಾಡಿದ್ದಾರೆ. ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸುವ ಗುರಿ ಹೊಂದಿದ್ದಾರೆ. ಅವರು ಸದಾ ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಪಕ್ಷದ ಸದಸ್ಯತ್ವ ಪಾಲುದಾರಿಕೆಯ ಹಕ್ಕು

ಬಿಜೆಪಿ ಪಕ್ಷ ಸದಸ್ಯತಾ ಅಭಿಯಾನ ಜರುಗುತ್ತಿದ್ದು, ಪ್ರತಿಯೊಬ್ಬರು ಬಿಜೆಪಿ ಸದಸ್ಯತ್ವ ಪಡೆಯಬೇಕು. ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತರ ಪಕ್ಷ. ಪ್ರತಿಯೊಬ್ಬ ಬಿಜೆಪಿ ಸದಸ್ಯರೂ ಪಕ್ಷದ ಪಾಲುಗಾರಿಕೆಯ ಹಕ್ಕುದಾರರು ಎಂದರು.

ಕೊಪ್ಪಳ ಏತ ನೀರಾವರಿ ಯೋಜನೆಗೆ ಜಗದೀಶ ಶೆಟ್ಟರ್‌ ಸಿಎಂ ಆಗಿದ್ದಾಗ ಚಾಲನೆ ಕೊಡಿಸಿದ್ದೆ. ನಂತರದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ರೂ. ಅನುದಾನ ಸಹ ನೀರಾವರಿ ಯೋಜನೆಗೆ ನೀಡಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಿಎಂ ಕುಮಾರಸ್ವಾಮಿ ಮನವೊಲಿಸಿ ಅನುದಾನ ಮಂಜೂರು ಮಾಡಿಸಿ ಏತ ನೀರಾವರಿ ಕಾಮಗಾರಿ ಆರಂಭ ಮಾಡಿಸಿದೆ. ₹1700 ಕೋಟಿ ಅನುದಾನ ಮಂಜೂರು ಮಾಡಿಸಿದೆ. ಕಾಮಗಾರಿ ತ್ವರಿತವಾಗಿ ಆಗಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿ ಕೆಲಸ ಮಾಡಿಸಿಕೊಂಡೆ. ಚುನಾವಣೆ ಪೂರ್ವ ಕ್ಷೇತ್ರದ ಕೆರೆಗಳಿಗೆ ನೀರು ತಂದು ಹಾಕಿದೆ. ಆದರೆ, ನಂತರ ಬಂದ ಶಾಸಕರು ಇದುವರೆಗೂ ಒಂದು ಕೆರೆಗೆ ನೀರು ತಂದಿಲ್ಲ. ಕೆಲಸ ಸರಿಯಾಗಿ ಮಾಡಿಸಿಕೊಳ್ಳದೆ ಫ್ಲೆಕ್ಸ್‌ಗಳಲ್ಲಿ ಏತ ನೀರಾವರಿ ಯೋಜನೆ ವಿರೋಧ ಮಾಡುತ್ತಾ ನಿಷ್ಕಾಳಜಿ ಮೆರೆಯುತ್ತಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್ ಮಾತನಾಡಿ, ಬಿಜೆಪಿ ಸದಸ್ಯತಾ ಅಭಿಯಾನ ಇದೊಂದು ಆಂದೋಲನ ಇದ್ದಂತೆ. ಪ್ರಧಾನಿಯ 2047ರ ವಿಕಸಿತ ಭಾರತ ಕನಸ್ಸಿಗೆ ಸಾಥ್ ನೀಡುವ ಕಾರ್ಯ ಆಗಿದೆ. ರಾಷ್ಟ್ರೀಯತೆ ಆಧಾರದ ಮೇಲೆ ಬಿಜೆಪಿ ಕೆಲಸ ಮಾಡುತ್ತದೆ. ಬಿಜೆಪಿ ತತ್ವ-ಸಿದ್ಧಾಂತಗಳು ರಾಜಕೀಯ ಹಿನ್ನೆಲೆ ಇಲ್ಲದ ಯುವಕರೂ ರಾಜಕೀಯಕ್ಕೆ ಬರುವಂತೆ ಪ್ರೇರಣೆ ನೀಡಿವೆ. ಲಕ್ಷಾಂತರ ಯುವಕರು ಬಿಜೆಪಿಯಿಂದ ರಾಜಕೀಯವಾಗಿ ಉನ್ನತ ಸ್ಥಾನದಲ್ಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮಾಡಿದೆ. ಮುಡಾ ಹಗರಣ ಖಂಡಿಸಿ 150 ಕಿ.ಮೀ ಕಾಲ್ನಡಿಗೆ ಕ್ರಮಿಸಿದೆ. ರಾಷ್ಟ್ರ, ರಾಜ್ಯದ ಅಭಿವೃದ್ಧಿ ಮಾತ್ರ ಬಿಜೆಪಿ ಧ್ಯೇಯ ಎಂದರು.

ಸದಸ್ಯತಾ ಅಭಿಯಾನದ ಯಲಬುರ್ಗಾ ಮಂಡಲ ಉಸ್ತುವಾರಿ ಈಶಪ್ಪ ಹಿರೇಮನಿ ಮಾತನಾಡಿದರು. ವಕ್ತಾರ ವೀರಣ್ಣ ಹುಬ್ಬಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ, ಪ್ರಮುಖರಾದ ರಥನ ದೇಸಾಯಿ, ಸಿ.ಎಚ್. ಪೊಪಾ, ಬಸಲಿಂಗಪ್ಪ ಭೂತೆ, ಶರಣಪ್ಪ ಈಳಿಗೇರ, ಶರಣಪ್ಪ ಬಣ್ಣದಬಾವಿ, ಅಯ್ಯನಗೌಡ, ಶಂಕ್ರಪ್ಪ ಸುರಪೂರ, ಶಿವಪ್ಪ ವಾದಿ, ಯಲಬುರ್ಗಾ ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸೋಮಣ್ಣ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಕಳಕಳಿಯ ಎಸ್ಎಸ್‌ ಅಪ್ರತಿಮ ನಾಯಕ: ಸೈಯದ್‌ ನುಡಿನಮನ
ಶಿವಶಂಕರಪ್ಪ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ