ರಾಜ್ಯ ಕಾಂಗ್ರೆಸ್ ಆಡಳಿತ ಸಂವಿಧಾನ ಬಾಹಿರ: ಎನ್. ಮಹೇಶ್

KannadaprabhaNewsNetwork |  
Published : Jul 17, 2025, 12:30 AM IST
ರಾಜ್ಯ ಕಾಂಗ್ರೇಸ್ ಸರ್ಕಾರದ ಆಡಳಿತ ಸಂವಿಧಾನ ಬಾಹಿರ | Kannada Prabha

ಸಾರಾಂಶ

ಕಳೆದ ಎರಡುವರೆ ವರ್ಷದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಡಳಿತ ಯಂತ್ರ ಕುಸಿದಿದೆ. ವಿವಿಧ ಇಲಾಖೆಗಳ ಸುಮಾರು ೩೧ ಸಾವಿರ ಕೋಟಿ ರು. ಎಲ್ ಒಸಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರು ಕೇಳಿದರೆ, ಉತ್ತರ ನೀಡುವ ಬದಲು ನಿಮ್ಮ ಕಾಲದಲ್ಲಿ ಶೇ. ೪೦ ಕಮಿಷನ್ ನಡೆದಿಲ್ಲವೇ ಎಂದು ವಾದಿಸುತ್ತಾ ಈಗ ನಡೆಯುತ್ತಿರುವ ಶೇ. ೫೦ರಷ್ಟು ಕಮಿಷನ್ ದಂಧೆಯನ್ನು ಸಮರ್ಪಿಸಿಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸಂವಿಧಾನಾತ್ಮಕವಾಗಿ ಆಡಳಿತ ನಡೆಸಬೇಕಾಗಿದ್ದ ರಾಜ್ಯ ಕಾಂಗ್ರೆಸ್ ಸಂವಿಧಾನ ಬಾಹಿರವಾಗಿ ವಿರೋಧ ಪಕ್ಷದ ರೀತಿ ವರ್ತಿಸುತ್ತಾ, ವಿರೋಧ ಪಕ್ಷಗಳು ಕೇಳಿದ ವಿಷಯ ಮರೆಮಾಚುವ ಯತ್ನ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಆರೋಪಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನರ ಧ್ವನಿಯಾಗಿ ವಿರೋಧ ಪಕ್ಷಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡುವ ಬದಲು ಪ್ರಶ್ನೆ ಮಾಡುತ್ತಾ ವಿಷಯ ಮರೆಮಾಚುತ್ತಿದೆ ಎಂದು ಆಪಾದಿಸಿದರು.

ಕಳೆದ ಎರಡುವರೆ ವರ್ಷದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಆಡಳಿತ ಯಂತ್ರ ಕುಸಿದಿದೆ. ವಿವಿಧ ಇಲಾಖೆಗಳ ಸುಮಾರು ೩೧ ಸಾವಿರ ಕೋಟಿ ರು.

ಎಲ್ ಒಸಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರು ಕೇಳಿದರೆ, ಉತ್ತರ ನೀಡುವ ಬದಲು ನಿಮ್ಮ ಕಾಲದಲ್ಲಿ ಶೇ. ೪೦ ಕಮಿಷನ್ ನಡೆದಿಲ್ಲವೇ ಎಂದು ವಾದಿಸುತ್ತಾ ಈಗ ನಡೆಯುತ್ತಿರುವ ಶೇ. ೫೦ರಷ್ಟು ಕಮಿಷನ್ ದಂಧೆಯನ್ನು ಸಮರ್ಪಿಸಿಕೊಳ್ಳುತ್ತಿದ್ದಾರೆ ಎಂದರು.

೧೯೭೫ರ ಕರಾಳ ತುರ್ತು ಪರಿಸ್ಥಿತಿ ಬಗ್ಗೆ ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿದರೆ ಅದು ಕಳೆದುಹೋದದ್ದು. ಈಗ ಕಳೆದ ೧೧ ವರ್ಷದಿಂದ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎನ್ನುತ್ತಾರೆ. ಅದು ಹೇಗೆ ಎಂದು ಕೇಳಿದರೆ ಉತ್ತರವಿಲ್ಲ ಎಂದು ಹೇಳಿದರು.

ಸಚಿವ ಪ್ರಿಯಾಂಕ್‌ ಖರ್ಗೆ ಜಗತ್ತಿಗೆ ನಾನೊಬ್ಬನೇ ಬುದ್ಧಿವಂತ ಎನ್ನುವ ರೀತಿ ವರ್ತಿಸುತ್ತಾ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ. ೧೯೬೨ರ ಯುದ್ಧದಲ್ಲಿ ಭಾಗವಹಿಸಿದ್ದ ಆರ್‌ಎಸ್‌ಎಸ್‌ನ ಶಿಸ್ತು ಮತ್ತು ಬದ್ಧತೆ ನೋಡಿ, ೧೯೬೪ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿರುವುದು ಗೊತ್ತಿಲ್ಲವೇ. ನೆಹರು, ಇಂದಿರಾಗಾಂಧಿ ಆರ್‌ಎಸ್‌ಎಸ್ ನಿಷೇಧ ಮಾಡಿ ಜಯಿಸಿಕೊಳ್ಳಲು ಆಗಲಿಲ್ಲ. ರಾಜೀವ್‌ಗಾಂಧಿ ನಿಷೇಧ ಮಾಡಿ ಅಧಿಕಾರ ಕಳೆದುಕೊಂಡರು ಎಂದರು.

ಪ್ರಿಯಾಂಕ್‌ ಖರ್ಗೆಗೆ ಇಲಾಖೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೇಳಿದರೆ ವಿಷಯ ಮರೆಮಾಚಿ ಬಿಜೆಪಿ, ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ. ಇವರ ನಿರ್ಲಕ್ಷ್ಯತನದಿಂದಾಗಿ ರಾಜ್ಯದಲ್ಲಿ ಆರಂಭವಾಗಬೇಕಿದ್ದ ಐಟಿಬಿಟಿ ಕಂಪನಿಗಳು ಬೇರೆ ರಾಜ್ಯದ ಪಾಲಾಗುತ್ತಿವೆ ಎಂದರು.

ಇವರ ಆಪ್ತ ಲಿಂಗರಾಜು ಕಣಿ ನಡೆಸುತ್ತಿರುವ ಡ್ರಗ್ಸ್ ಮಾಫಿಯಾ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಮಾಫಿಯಾ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು. ಕಾಂಗ್ರೆಸ್ ಸರ್ಕಾರದಿಂದ ಜನರ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ಎಸ್ಸಿ, ಎಸ್ಟಿ ಜನರ ಅಭಿವೃದ್ಧಿಗೆ ಸರ್ಕಾರ ಮಾರಕವಾಗಿದೆ ಎಂದು ಆರೋಪ ಮಾಡಿದರು.

ಜಿಲ್ಲೆಯಲ್ಲಿ ಎಸ್ಸಿಗೆ ಸೇರಿದ ೧೩, ಎಸ್ಟಿ ೬ ಹಾಗೂ ಒಬಿಸಿಗೆ ಸೇರಿದ ೨ ಸೇರಿ ೨೧ ವಸತಿ ಶಾಲೆಗಳಿವೆ. ಈ ಶಾಲೆಗಳಲ್ಲಿ ೬-೧೦ನೇ ತರಗತಿ ತನಕ ವ್ಯಾಸಂಗ ಮಾಡುವ ಮಕ್ಕಳು ಆ ನಂತರ ಪಿಯುಸಿಗೆ ಸರ್ಕಾರಿ ಕಾಲೇಜನ್ನೇ ಸೇರುತ್ತಾರೆ. ಆದ್ದರಿಂದ ವಸತಿ ಶಾಲೆಗಳಲ್ಲಿಯೇ ಪಿಯುಸಿ ಶಿಕ್ಷಣ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಈ ಸರ್ಕಾರದಲ್ಲಿ ಸಚಿವ ಕೃಷ ಬೈರೇಗೌಡ ಅವರನ್ನು ಹೊರತುಪಡಿಸಿದರೆ ಉಳಿದ ಯಾವ ಸಚಿವರು ಕೆಲಸ ಮಾಡುತ್ತಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಂ.ರಾಮಚಂದ್ರ, ನಾರಾಯಣಪ್ರಸಾದ್, ನೂರೊಂದು ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಕಾಡಹಳ್ಳಿ ಕುಮಾರ್ ಇದ್ದರು.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ