ರಾಜ್ಯ ಶಿಕ್ಷಣ ನೀತಿ ಧರ್ಮ ನಿರಪೇಕ್ಷ, ವೈಜ್ಞಾನಿಕವಾಗಿ ಇರಲಿ: ಡಾ। ವಿಕ್ಟರ್ ಲೋಬೋ

KannadaprabhaNewsNetwork |  
Published : Jan 11, 2024, 01:30 AM ISTUpdated : Jan 11, 2024, 12:08 PM IST
Gandhi Bhavan | Kannada Prabha

ಸಾರಾಂಶ

ರಾಜ್ಯ ಶಿಕ್ಷಣ ನೀತಿ ಧರ್ಮ ನಿರಪೇಕ್ಷ, ವೈಜ್ಞಾನಿಕವಾಗಿ ಇರಲಿ ಎಂದ ಲೋಬೋ. ಶಿಕ್ಷಣದ ಜವಾಬ್ದಾರಿ ಕ್ರಿಯಾತ್ಮಕ ವ್ಯಕ್ತಿಯ ಸೃಷ್ಟಿ: ಸೇಂಟ್‌ ಜೋಸೆಫ್‌ ವಿವಿ ಉಪಕುಲಪತಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ರಾಜ್ಯ ಹೊಸ ಶಿಕ್ಷಣ ನೀತಿಯು ಪ್ರಜಾಸತಾತ್ಮಕ, ಧರ್ಮ ನಿರಪೇಕ್ಷ ಹಾಗೂ ವೈಜ್ಞಾನಿಕವಾಗಿ ಇರುವಂತೆ ನೋಡಿಕೊಳ್ಳಬೇಕಿದೆ ಎಂದು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಉಪ ಕುಲಪತಿ ಡಾ। ವಿಕ್ಟರ್ ಲೋಬೋ ಹೇಳಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ನಗರದ ಗಾಂಧಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಶಿಕ್ಷಣದ ಜವಾಬ್ದಾರಿ ಕೇವಲ ನುರಿತ ವ್ಯಕ್ತಿಗಳನ್ನು ಸೃಷ್ಟಿಸುವುದಲ್ಲ. ಬದಲಾಗಿ ಕ್ರಿಯಾತ್ಮಕ ಹಾಗೂ ವಿಮರ್ಶಾತ್ಮಕ ಚಿಂತನೆ ಉಳ್ಳ ವ್ಯಕ್ತಿಗಳನ್ನು ಸೃಷ್ಟಿಸುವುದಾಗಿದೆ, ಸಮಾಜವಾದಿ ಕ್ಯೂಬಾದ ಶಿಕ್ಷಣ ವ್ಯವಸ್ಥೆಯಿಂದ ಸ್ಫೂರ್ತಿ ಪಡೆದು ಉಚಿತ ಹಾಗೂ ಸಾರ್ವತ್ರಿಕ ಶಿಕ್ಷಣ ಖಾತ್ರಿಪಡಿಸಲು ಮುಂದಾಗಬೇಕು ಎಂದರು.

ಸಾಹಿತಿ ಪ್ರೊ.ಸಬಿತಾ ಬನ್ನಾಡಿ ಮಾತನಾಡಿ, ಭಾರತೀಯ ವೈವಿಧ್ಯತೆಯನ್ನು ಗಣನೆಗೆ ತೆಗೆದುಕೊಳ್ಳದೇ, ಏಕರೂಪ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸುತ್ತಿರುವುದು ಅವೈಜ್ಞಾನಿಕ, ಅನೌಪಚಾರಿಕವಾಗಿದೆ ಮತ್ತು ಅಪ್ರಜಾತಾಂತ್ರಿಕವಾಗಿದೆ. ರಾಜ್ಯದಲ್ಲಿ ಇದು ತಲೆಕೆಳಗಾಗಿದ್ದು, ಶಾಲಾ ಶಿಕ್ಷಣ ಬಿಟ್ಟು ಪದವಿ ಶಿಕ್ಷಣದಲ್ಲಿ ಜಾರಿಗೊಳಿಸಲಾಗಿದೆ. 

ಎನ್‌ಇಪಿ ಜಾರಿಯಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿದ್ದು, ಅವರ ಭವಿಷ್ಯ ಹಾಳು ಮಾಡುತ್ತಿದೆ. ಈ ಪಠ್ಯಗಳು 20 ವರ್ಷ ಹಿಂದಕ್ಕೆ ಕರೆದುಕೊಂಡು ಹೋಗಿವೆ ಎಂದರು.

ಎಐಎಸ್‌ಇಸಿ ಪ್ರಧಾನ ಕಾರ್ಯದರ್ಶಿ ಪ್ರೊ. ತರುಣಕಾಂತಿ ನಸ್ಕರ್‌ ಮಾತನಾಡಿ, ಶಿಕ್ಷಣದ ಸಮಾನತೆ, ಸಾರ್ವತ್ರಿಕರಣ ಎಂಬ ಘೋಷಣೆಗಳನ್ನು ನೀಡಿ ಬಹುಸಂಖ್ಯಾತ ಬಡ ಹಾಗೂ ಮಧ್ಯಮ ವರ್ಗದವರಿಂದ ಶಿಕ್ಷಣವನ್ನು ಕಸಿದುಕೊಳ್ಳುವ ಹುನ್ನಾರ ಎನ್ಇಪಿಯಲ್ಲಿ ಅಡಗಿದೆ ಎಂದು ಆರೋಪಿಸಿದರು.

ಭಾಷಾ ನೀತಿಯು ಹಿಂದಿ ಭಾಷೆಯನ್ನು ಒತ್ತಾಯ ಪೂರಕವಾಗಿ ದೇಶದ ಜನರ ಮೇಲೆ ಹೇರುವಂತಹ ಕುತಂತ್ರ ಇದರಲ್ಲಿ ಅಡಗಿದೆ. ಅವೈಜ್ಞಾನಿಕ, ಇತಿಹಾಸಕ್ಕೆ ವಿರುದ್ಧವಾಗಿರುವ ವಿಷಯಗಳನ್ನು ತುರುಕಲಾಗಿದೆ. ಶಿಕ್ಷಣದ ಬಜೆಟನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಡಿತಗೊಳಿಸುತ್ತಿವೆ. ಶಿಕ್ಷಣದ ಕೇಂದ್ರೀಕರಣ, ಖಾಸಗಿಕರಣ, ಕೇಸರೀಕರಣ ಹುನ್ನಾರವಿರುವ ಎನ್ಇಪಿ ದೇಶದಾದ್ಯಂತ ವಿರೋಧಿಸಬೇಕಿದೆ ಎಂದರು.

ಎಐಎಸ್‌ಇಸಿ ರಾಜ್ಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು, ರಾಜ್ಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ್, ರಾಜ್ಯ ಕಾರ್ಯದರ್ಶಿ ಎಸ್.ಜಿ.ಮಹೇಶ್, ವಿಜ್ಞಾನಿ ಆರ್.ಎಲ್.ಮೌರ್ಯನ್, ಪ್ರೊ.ಸೋಮಶೇಖರಪ್ಪ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ