ಪೊನ್ನಂಪೇಟೆ: ಪೊನ್ನಂಪೇಟೆಯಲ್ಲಿ 8.60 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವ ‘ಪ್ರಜಾ ಸೌಧ’ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಶುಕ್ರವಾರ ಭೂಮಿಪೂಜೆ ನಡೆಸಿದರು.
ಹೊಸ ತಾಲೂಕುಗಳಲ್ಲಿ ಪ್ರತೀ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಸರ್ಕಾರ ತಲಾ 8.60 ಕೋಟಿ ರು.ವನ್ನು ಬಿಡುಗಡೆ ಮಾಡಿದ್ದು, ಎಲ್ಲೆಡೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಮೂಲಸೌಲಭ್ಯ ಕಲ್ಪಿಸಲು ಒತ್ತು ನೀಡಿದೆ. ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚಿನ ಗಮನಹರಿಸಲಾಗಿದೆ ಎಂದರು.
ಶಾಸಕ ಎ.ಎಸ್.ಪೊನ್ನಣ್ಣ ಅವರ ನಿರಂತರ ಒತ್ತಡ ಮತ್ತು ಪ್ರಯತ್ನದಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಿ ಎಲ್ಲ ಹೊಸ ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಅದರಂತೆ ಮುಖ್ಯಮಂತ್ರಿ ಅವರು ಅನುಮೋದನೆ ನೀಡಿದ್ದಾರೆ. ಕಳೆದ ಎರಡು ವರ್ಷದಲ್ಲಿ 49 ಹೊಸ ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಜನರ ಮನಸ್ಸಿನ ಆಸೆ ಈಡೇರಿದಂತಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಹಣವನ್ನು ಬಳಸುತ್ತಿದ್ದಾರೆ. ಆದರೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಹೇಳುವವರು ಇದ್ದಾರೆ. ಆದರೆ ಸರ್ಕಾರ ಅಭಿವೃದ್ಧಿ ಕೆಲಸಗಳಿಗೂ ಒತ್ತು ನೀಡಿದೆ ಎಂದು ಎಂಬುದನ್ನು ಮರೆಯುವಂತಿಲ್ಲ ಎಂದು ಹೇಳಿದರು.ಪ್ರಜೆಗಳ ಕೆಲಸಕ್ಕಾಗಿ ಪ್ರಜಾಸೌಧ:ಈ ಹಿಂದೆ ತಾಲೂಕು ಆಡಳಿತ ಸೌಧಕ್ಕೆ ಮಿನಿ ವಿಧಾನಸೌಧ ಎಂದು ಹೇಳಲಾಗುತ್ತಿತ್ತು. ಆದರೆ ಕನ್ನಡದಲ್ಲಿ ಪದವೇ ಇಲ್ಲವೇ ಎಂದು ಯೋಚಿಸಿದಾಗ ‘ಪ್ರಜಾಸೌಧ’ ಎಂಬ ಹೆಸರು ಇಡಲಾಯಿತು. ವಿಧಾನಸೌಧದಲ್ಲಿ ಕಾನೂನುನ್ನು ಜಾರಿ ಮಾಡಲಾಗುತ್ತದೆ. ಪ್ರಜಾಸೌಧದಲ್ಲಿ ಪ್ರಜೆಗಳ ಕೆಲಸಗಳನ್ನು ನಿರ್ವಹಿಸಲಾಗುತ್ತದೆ. ಆ ನಿಟ್ಟಿನಲ್ಲಿ ತಾಲೂಕು ಪ್ರಜಾಸೌಧ ಹಾಗೂ ಜಿಲ್ಲಾ ಪ್ರಜಾಸೌಧ ಎಂದು ಆಡಳಿತ ಭವನಕ್ಕೆ ಹೆಸರು ಇಡಲಾಗುತ್ತದೆ. ಸರ್ಕಾರ ಇರುವುದು ಪ್ರಜೆಗಳಿಗಾಗಿ ಎಂಬುದಾಗಿದೆ ಎಂದು ಕೃಷ್ಣಬೈರೇಗೌಡ ಅವರು ವಿವರಿಸಿದರು. ಪ್ರಜಾಸೌಧ ಕಟ್ಟಡವನ್ನು 17 ಸಾವಿರ ಚದರ ಅಡಿಗಳಷ್ಟು ನಿರ್ಮಾಣ ಮಾಡಲಾಗುತ್ತದೆ. ಈಗ ನೆಲ ಮಹಡಿ ಹಾಗೂ ಮೊದಲ ಅರ್ಧ ಮಹಡಿಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ನಾಲ್ಕು ಅಂತಸ್ತಿನವರೆಗೂ ಕಟ್ಟಡ ನಿರ್ಮಾಣ ಮಾಡಬಹುದಾಗಿದೆ ಎಂದು ಸಚಿವರು ಹೇಳಿದರು.
ಸಿ ಮತ್ತು ಡಿ ಭೂಮಿ ಪರಿಹಾರ ಸಂಬಂಧ ತಜ್ಞರ ಸಮಿತಿ ರಚಿಸಿ ಅವರ ವರದಿ ತರಿಸಿಕೊಂಡು ಮುಂದಿನ ಕ್ರಮವಹಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು. ಕೊಡಗು ಜಿಲ್ಲೆಯಲ್ಲಿ 2018, 2019, 2020ರಲ್ಲಿ ಹೆಚ್ಚಿನ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಭೂಕುಸಿತ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಭೂಕುಸಿತವಾಗುವುದನ್ನು ತಡೆಯಲು ಮುಂದಾಗಲಾಗಿದೆ. 60 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ತಡೆಗೋಡೆ, ಸೇತುವೆ ಮತ್ತಿತರ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಕಂದಾಯ ಸಚಿವರು ಸಹ ನುಡಿದಂತೆ ನಡೆದು ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಸರ್ಕಾರ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಪ್ರಜಾಸೌಧ ಆಡಳಿತ ಭವನವನ್ನು ದೂರದೃಷ್ಟಿಯಿಂದ ನಿರ್ಮಾಣ ಮಾಡಲಾಗುತ್ತದೆ. ಪೊನ್ನಂಪೇಟೆಯ ಸಾರ್ವಜನಿಕರ ಸ್ಪಂದನೆಯಂತೆ ಸೂಕ್ತ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
ವಿರಾಜಪೇಟೆ ಆಸ್ಪತ್ರೆ ಮೇಲ್ದರ್ಜೆಗೆ:ವಿರಾಜಪೇಟೆ ತಾಲೂಕು ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಹಾಗೂ ಗೋಣಿಕೊಪ್ಪ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಹಾಗೆಯೇ ಹುದಿಕೇರಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲಾಗುತ್ತದೆ. ಜೊತೆಗೆ 130 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಹೊಸ ಯೋಜನೆಗಳ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ವಿದ್ಯುತ್ ಪರಿವರ್ತಕಗಳು ಹಾಗೂ ಕಂಬಗಳ ಬದಲಾವಣೆ, ಹಲವು ವಿದ್ಯುತ್ ಉಪ ವಿಭಾಗಗಳನ್ನು ಆರಂಭಿಸಲಾಗಿದೆ ಎಂದು ಪೊನ್ನಣ್ಣ ಹೇಳಿದರು. ಪವಿತ್ರ ಕ್ಷೇತ್ರ ಭಾಗಮಂಡಲದಲ್ಲಿ ಮೇಲ್ಸೂತುವೆ ನಿರ್ಮಾಣ ಹಾಗೂ ತ್ರಿವೇಣಿ ಸಂಗಮದಲ್ಲಿ ಉದ್ಯಾನವನ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಹೀಗೆ ಎರಡೂವರೆ ವರ್ಷದಲ್ಲಿ ಅಭಿವೃದ್ಧಿ ಕೆಲಸದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗಿದೆ ಎಂದರು.ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಘಟಕದ ಅಧ್ಯಕ್ಷ ಕಾಳಿಮಡ ಪ್ರಶಾಂತ್, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಪ್ರಮುಖರಾದ ಎಚ್.ಡಿ.ಗಣೇಶ್, ಕೃಷ್ಣಪ್ಪ, ಅಬ್ದುಲ್ಲಾ ಇತರರು ಇದ್ದರು.