- ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ । ಸರ್ಕಾರದ ದಿವಾಳಿತನವನ್ನು ಹಣಕಾಸು ಇಲಾಖೆಯಿಂದಲೇ ಬಹಿರಂಗ
ರಾಜ್ಯದ ಕಾಂಗ್ರೆಸ್ ಸರ್ಕಾರ ದಿವಾಳಿ ಅಂಚಿನಲ್ಲಿದೆ. ಮಾತ್ರವಲ್ಲದೇ ಅಭಿವೃದ್ಧಿ ಶೂನ್ಯತೆ ರಾಜ್ಯಕ್ಕೆ ಕಾಡುತ್ತಿದೆ ಎಂದು ಆರೋಪಿಸಿ ಗುರುವಾರ ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ನೇತೃತ್ವದಲ್ಲಿ ಸಿಎಂ ಡಿ.ಕೆ ಶಿವಕುಮಾರ ಅವರ ಅಣುಕು ಶವಯಾತ್ರೆ ನಡೆಸಲು ಮುಂದಾದಾಗ ಪೊಲೀಸರು ತಡೆದರು, ಆಗ ಪಕ್ಷದ ಕಾರ್ಯಕರ್ತನನ್ನೇ ಹೆಗಲ ಮೇಲೆ ಹೊತ್ತು ಅಣಕು ಶವಯಾತ್ರೆ ನಡೆಸಿ ಮಾತನಾಡಿದ ಅವರು ಒಂದೆಡೆ ರೈತ ವಿರೋಧಿ, ಜನವಿರೋಧಿ, ಮಹಿಳಾ ವಿರೋದಿ, ಯುವಜನರ ವಿರೋಧಿ ಹಾಗೂ ಜನಸಾಮಾನ್ಯರ ವಿರೋಧಿ ಸರ್ಕಾರ ಇದಾಗಿದೆ. ಗರಿಷ್ಠ ಸಾಲ ಮಾಡಿರುವ ಈ ಸರ್ಕಾರರವು ದಿವಾಳಿ ಅಂಚಿನಲ್ಲಿದೆ ಎಂದು ಸರ್ಕಾರದ ಹಣಕಾಸು ಇಲಾಖೆಯೇ ಪತ್ರದ ಮೂಲಕ ಎಚ್ಚರಿಸಿದ್ದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದರು.₹4 ಲಕ್ಷಕ್ಕೂ ಹೆಚ್ಚು ಕೋಟಿ ಹೊಸ ಸಾಲವನ್ನು ಮಾಡಿದ್ದಾರೆ. ಒಟ್ಟಾರೆಯಾಗಿ ಸಾಲದ ಮೊತ್ತವು ₹8 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.ಸಾಲ ಮಾಡಿರುವುದನ್ನು ಬಿಟ್ಟರೆ ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ನೋಡೋದಕ್ಕೆ ಸಾಧ್ಯ ಆಗಿಲ್ಲ. ಮುಖ್ಯಮಂತ್ರಿಗಳು ಕೆಲವು ದಿನಗಳ ಹಿಂದೆ ಕರಾವಳಿಗೆ ಭೇಟಿ ನೀಡಿದ್ದರು. ಬರ ಪರಿಹಾರ ಕೊಡುವುದಕ್ಕೂ ನಮ್ಮ ಖಜಾನೆಯಲ್ಲಿ ಹಣ ಇಲ್ಲ ಅಂತ ಆರ್ಥಿಕ ಇಲಾಖೆಯವರು ನೇರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆದರೂ, ಸುಮಾರು 32 ಸಾವಿರ ಕೋಟಿ ರೂಪಾಯಿಗಳ ವಿವಿಧ ಯೋಜನೆಗಳ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಿ ದ್ದಾರೆ. ಇದು ಮೂಗಿಗೆ ತುಪ್ಪ ಸವರುವ ಕೆಲಸ ಎಂಬ ಆಕ್ಷೇಪ ಬಿಜೆಪಿಯದು.ದಿವಾಳಿ ಆಗಿರತಕ್ಕಂತಹ ಕಾಂಗ್ರೆಸ್ ಸರ್ಕಾರ ಕೇವಲ ಜಾಹೀರಾತುಗಳನ್ನು ಕೊಟ್ಟುಕೊಂಡು ದಿನಗಳನ್ನು ಕಳೆಯುತಿದ್ದಾರೆ. ರಾಜ್ಯದಲ್ಲಿ ಇವತ್ತು ವಿಕಲಚೇತನರಿಗೆ ಪಿಂಚಣಿ ಕೊಡಲು ಆಗುತ್ತಿಲ್ಲ. ವೃದ್ಧಾಪ್ಯ ವೇತನ ಕೊಡುತ್ತಿಲ್ಲ. ವಿಧವಾ ವೇತನ ಜಮೆ ಆಗುತ್ತಿಲ್ಲ. ಇವರು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ನುಡಿದರು. ಶಿಕ್ಷಣ ಇಲಾಖೆಯಲ್ಲಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಟ್ಟಿದ್ದು, ಅದು ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ. ಅದರಲ್ಲೂ ಭ್ರಷ್ಟಾಚಾರ ನಡೆದಿರುವ ಸಂಶಯ ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಶಿಕ್ಷಕರ ನೇಮಕಾತಿ ಕೂಡ ಮಾಡೋದಕ್ಕೆ ಆಗುತ್ತಿಲ್ಲ ಎಂದು ದೂರಿದ್ದಾರೆ.ಈ ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ರಾಜಶೇಖರ ನಾಗಮೂರ್ತಿ, ಬಾಬುವಾಲಿ, ಬಾಬುರಾವ್ ಕಾರಬಾರಿ, ರಾಜರೆಡ್ಡಿ, ಬಸವರಾಜ ಪವಾರ, ಮಹೇಶ್ವರ ಸ್ವಾಮಿ, ರಾಜಕುಮಾರ ಪಾಟೀಲ್ ನೇಮತಾಬಾದ, ಗುರುನಾಥ ಜ್ಯಾಂತಿಕರ್, ರಾಜಕುಮಾರ ಚಿದ್ರಿ, ಸಂಗಮೇಶ ನಾಸಿಗಾರ, ಸೋಮಶೇಖರ ಪಾಟೀಲ್ ಗಾದಗಿ, ಶಶಿ ಹೊಸಳ್ಳಿ, ದೀಪಕ ಗಾದಗೆ, ರಾಜೇಂದ್ರ ಪೂಜಾರಿ, ಅಶೋಕಕುಮಾರ ಕರಂಜಿ, ಸಂಗಮೇಶ ಗುಮ್ಮೆ, ರೋಷನ ವರ್ಮಾ, ಸುನೀಲ ಗೌಳಿ, ವಿಶ್ವನಾಥ ಪಾಟೀಲ್ ಮುಗದಾಳ, ಚಂದು ಪಾಟೀಲ್, ಭೂಷಣ ಪಾಠಕ್, ಸಂಜಯ ಜಿರ್ಗೆ, ವಿಕ್ರಮ ಮುದಾಳೆ, ಮಹೇಶ ಪಾಲಂ, ಚಂದ್ರಶೇಖರ ಗಾದಾ, ನವೀನ ಚಿದ್ರೆ, ನರೇಶ ಗೌಳಿ, ವಿರಯ್ಯ ಸ್ವಾಮಿ, ಗೋಪಾಲ ಕಕಡಾಲ, ಲುಂಬಣಿ ಗೌತಮ, ಹಣಮಂತ ಬುಳ್ಳಾ, ಶ್ರೀನಿವಾಸ ಚೌದರಿ, ಗಣೇಶ ಭೋಸ್ಲೆ, ಬಸವರಾಜ ಮೂಲಗೆ ನೌಬಾದ್ ಉಪಸ್ಥಿತರಿದ್ದರು.