ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ: ಸಂಸದ ಶೆಟ್ಟರ ಕಿಡಿ

KannadaprabhaNewsNetwork |  
Published : Nov 09, 2025, 02:45 AM IST
xcx | Kannada Prabha

ಸಾರಾಂಶ

ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಸಕ್ಕರೆ ಸಚಿವರಿಗೆ ಎಲ್ಲವೂ ಗೊತ್ತಿದೆ. ಆದರೂ ಅವರು ರೈತರ ಬೇಡಿಕೆ ಈಡೇರಿಸಲು ಪ್ರಯತ್ನಿಸಲಿಲ್ಲ ಎಂದು ಸಂಸದ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಕಾಳಜಿಯಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಕಬ್ಬು ಬೆಳೆಗಾರರು ಹೋರಾಟದ ಹಾದಿ ತುಳಿಯುವಂತಾಯಿತು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಸರ್ಕಾರದ ವಿರುದ್ಧ ಹರಿಹಾಯ್ದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಬ್ಬು ಬೆಳಗಾರರ ಹೋರಾಟದ ಕಿಚ್ಚು ತಾತ್ಕಾಲಿಕವಾಗಿ ಮಾತ್ರ ಶಮನವಾಗಿದ್ದು, ಅದು ಮತ್ತೆ ಯಾವಾಗ ಬೇಕಾದರೂ ಹೊತ್ತಿಕೊಳ್ಳಬಹುದು. ದರ ಹೆಚ್ಚಳದ ಬಗ್ಗೆ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ರೈತರು ಸಂಪೂರ್ಣವಾಗಿ ಒಪ್ಪಿಗೆ ಸೂಚಿಸಿಲ್ಲ ಎಂದರು.

ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಸಕ್ಕರೆ ಸಚಿವರಿಗೆ ಎಲ್ಲವೂ ಗೊತ್ತಿದೆ. ಆದರೂ ಅವರು ರೈತರ ಬೇಡಿಕೆ ಈಡೇರಿಸಲು ಪ್ರಯತ್ನಿಸಲಿಲ್ಲ. ಈ ಹಿಂದೆ ನಾನು ಸಕ್ಕರೆ ಸಚಿವ, ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ರೈತರು, ಕಾರ್ಖಾನೆ ಮಾಲಿಕರನ್ನು ಕರೆಯಿಸಿ ಸಭೆ ಮಾಡುವ ಮೂಲಕ ಅವರ ಸಮಸ್ಯೆ ಬಗೆಹರಿಸಿದ್ದೇನೆ. ಆದರೆ, ಸಿಎಂ ಸಿದ್ದರಾಮಯ್ಯನವರು ರೈತರ ಹೋರಾಟ ನಡೆದು 8 ದಿನದ ಬಳಿಕ ಸಭೆ ಕರೆದಿದ್ದಾರೆ ಎಂದು ಆರೋಪಿಸಿದರು.

ಕಬ್ಬಿಗೆ ಒಂದೊಂದು ಕಡೆ ಒಂದೊದು ದರವಿರುತ್ತದೆ. ಈ ಎಲ್ಲ ಪರಿಸ್ಥಿತಿ ಅರಿತುಕೊಂಡು ಸರ್ಕಾರ ಮತ್ತು ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ, ಸಿಎಂ ತರಾತುರಿಯಲ್ಲಿ ನಿರ್ಧಾರ ಮಾಡಿದ್ದು, ಅದು ಇನ್ನೂ ಲಿಖಿತವಾಗಿ ನೀಡಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಂದದಂತೆ ರೈತರಿಗೆ ದುಡ್ಡು ಕೊಡದೇ ಹೋದರೆ, ಸರ್ಕಾರ ವಸೂಲಿ ಮಾಡಿ ಕೊಡುತ್ತದೆಯಾ ಎಂದು ಪ್ರಶ್ನಿಸಿದರು.

ಎರಡನ್ನೂ ಗೌರವಿಸೋಣ

ವಂದೇ ಮಾತರಂ ಹಾಗೂ ಜನಗಣಮನ ಎರಡೂ ರಾಷ್ಟ್ರ ಗೀತೆಗಳು. ಅವುಗಳಿಗೆ ಅದರದ್ದೆಯಾದ ಗೌರವವಿದೆ. ಯಾವುದಕ್ಕೂ ಅಗೌರವ ಮತ್ತು ಅಪಮಾನ ತೋರುವ ಕೆಲಸ ಮಾಡಬಾರದು. ವಂದೇ ಮಾತರಂ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ಗೀತೆಯಾಗಿದ್ದು, ಜನಗಣಮನ ಅಧಿಕೃತ ರಾಷ್ಟ್ರಗೀತೆಯಾಗಿದೆ. ಆದರೆ, ಕಾಂಗ್ರೆಸ್‌ನವರು ರಾಷ್ಟ್ರ ಗೀತೆಗಳಿಗೆ ಮೊದಲಿನಿಂದಲೂ ಅಸಡ್ಡೆ ತೋರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನವಂಬರ್‌ನಲ್ಲಿ ರಾಜಕೀಯ ಬದಲಾವಣೆ

ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರ ಪತನವಾಗುವುದು ನಿಶ್ಚಿತ ಎಂದು ಸಂಸದ ಜಗದೀಶ ಶೆಟ್ಟರ್‌ ಭವಿಷ್ಯ ನುಡಿದರು. ನವೆಂಬರ್‌ ಕ್ರಾಂತಿಯ ಬಗ್ಗೆ ಬಿಜೆಪಿ ನಾಯಕರು ಯಾರೂ ಮಾತನಾಡಿಲ್ಲ. ಕ್ರಾಂತಿ ಮತ್ತು ಭ್ರಾಂತಿಯ ಬಗ್ಗೆ ಕಾಂಗ್ರೆಸ್‌ನವರೇ ಹೇಳಿಕೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ನವೆಂಬರ್‌ ಅಂತ್ಯಕ್ಕೆ ರಾಜಕೀಯ ಬದಲಾವಣೆ ಆಗುವುದು ಖಚಿತ. ಇವರ ತಿಕ್ಕಾಟದಲ್ಲಿ ಸರ್ಕಾರ ಪತನವಾಗುವುದು ಅಷ್ಟೇ ಸತ್ಯ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಜೈಲಿನಲ್ಲಿರುವ ಕೈದಿಗಳಿಗೆ ರಾಜಾತಿಥ್ಯ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಅದರಲ್ಲಿ ಸಚಿವರು, ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ್‌ ಆರೋಪಿಸಿದರು.

ಜೈಲಿನ ಕೈದಿಗಳು ರಾಜಾರೋಷವಾಗಿ ಮೊಬೈಲ್‌ ಬಳಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಏನು ಬೇಕಾದರೂ ನಡೆಯುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಅದರಲ್ಲೂ ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದ್ದು, ಜೈಲಿನಲ್ಲಿರುವ ಭಯೋತ್ಪಾದಕರಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಇದರಿಂದ ಎಲ್ಲೆಡೆ ಅಕ್ರಮ ಚಟುವಟಿಕೆಗಳು ನಡೆಯುವಂತಾಗಿದೆ. ಲಷ್ಕರ್‌ ಉಗ್ರ ಇರಲಿ, ಉಮೇಶ್‌ ರೆಡ್ಡಿ ಇರಲಿ ಸರ್ಕಾರ ಕೂಡಲೇ ರಾಜಾತಿಥ್ಯ ಕೈಬಿಟ್ಟು, ಕಠಿಣ ಕ್ರಮಕ್ಕೆ ಮುಂದಾಗಲಿ ಎಂದು ಶೆಟ್ಟರ್‌ ಒತ್ತಾಯಿಸಿದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ