ಯಲಬುರ್ಗಾ: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡದೆ ಮೋಜು-ಮಸ್ತಿಯಲ್ಲಿ ಮುಳುಗಿದೆ. ಈ ಸರ್ಕಾರ ರೈತರ ಪಾಲಿಗೆ ಇದ್ದು ಸತ್ತಂತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ವಿದ್ಯುತ್ ಕೊರತೆಯಿಂದ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊಳವೆಬಾವಿಗೆ ಮೋಟಾರ್ ಅಳವಡಿಸಲು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ವಹಿಸಿಕೊಳ್ಳಬೇಕು ಎನ್ನುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ರೈತ ಹಿತ ಕಾಪಾಡಬೇಕಾದ ಸರ್ಕಾರ ಜನರಿಗೆ ಇನ್ನಿಲ್ಲದ ಸಮಸ್ಯೆಗಳನ್ನು ಸೃಷ್ಟಿಸಿ ರೈತರು ಸಾಲ-ಸೋಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೀನಾಯ ಸ್ಥಿತಿಗೆ ತಲುಪಲು ಸರ್ಕಾರದ ಆಡಳಿತ ವೈಖರಿಯೇ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಸಂಗಣ್ಣ ಕರಡಿ ಹಾಗೂ ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ಕಾಂಗ್ರೆಸ್ ಆಡಳಿತಕ್ಕೆ ಬಂದು ನಾಲ್ಕೈದು ತಿಂಗಳಾದರೂ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಜನರ ಸಮಸ್ಯೆಗಳನ್ನು ಆಲಿಸುವವರಿಲ್ಲ. ಈ ಸರ್ಕಾರ ಕೇವಲ ವರ್ಗಾವಣೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜ್ಯದ ಜನರ ಸಂಕಷ್ಟಕ್ಕೆ ಕಿಂಚತ್ತೂ ಸ್ಪಂದಿಸುತ್ತಿಲ್ಲ ಎಂದರು.ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಬಸವರಾಜ ದಢೇಸುಗೂರು, ಮುಖಂಡರಾದ ಶಿವಪ್ಪ ವಾದಿ, ವಿಶ್ವನಾಥ ಮರಿಬಸಪ್ಪನವರ್, ಅಯ್ಯನಗೌಡ ಕೆಂಚಮ್ಮನವರ್, ರಾಚಪ್ಪ ಹುರಳಿ, ಫಕೀರಪ್ಪ ತಳವಾರ್, ಹನುಮರಡ್ಡಿ, ಆನಂದ ಈಳಿಗೇರ್, ಶಂಕರ ಮೂಲಿ, ಅಮರೇಶ ಹುಬ್ಬಳ್ಳಿ, ಭೀಮಜ್ಜ ಮುರಡಿ, ಭೀಮೇಶ ಕರಡಿ, ರಾಮನಗೌಡ ಇದ್ದರು.